ಸಮಗ್ರ ಸುದ್ದಿ

ದಸರಾ ಮಹೋತ್ಸವ:ತುಮಕೂರಿನಲ್ಲಿ ಜಂಬೂ ಸವಾರಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪುಷ್ಪಾರ್ಚನೆ

Share

ದಸರಾ ಮಹೋತ್ಸವದ ಅಂಗವಾಗಿ ತುಮಕೂರು ಜಂಬೂಸವಾರಿ ಉತ್ಸವಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಹಾರೂಗೆರೆ, ಬಿಎಂಟಿಸಿ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ನಿಕೇತ್ ರಾಜ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನಗರದ ಟೌನ್ ಹಾಲ್ ವೃತ್ತದಲ್ಲಿ ನಂದಿ ಧ್ವಜಕ್ಕೆ ಡಾ. ಪರಮೇಶ್ವರ್ ದಂಪತಿ ಪೂಜೆ ಸಲ್ಲಿಸಿದರು. ನಂತರ ಚಾಮುಂಡೇಶ್ವರಿ ದೇವಿ ಮೂರ್ತಿ ಹಾಗೂ ಅಂಬಾರಿ ಹೊತ್ತ ಗಜಪಡೆಗೆ ಪುಷ್ಪನಮನ ಸಲ್ಲಿಸಿ, ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.

ತಾಯಿ ಚಾಮುಂಡಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಿದ ಲಕ್ಷ್ಮಣ ಆನೆಯ ಜೊತೆಗೆ ಎರಡು ಲಕ್ಷ್ಮೀ ಆನೆಗಳು ಹೆಜ್ಜೆ ಹಾಕಿ ಸಾಗಿದವು.

ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ಜನಮನ ಸೆಳೆಯಿತು.

ವಿವಿಧ ಸ್ತಬ್ದಚಿತ್ರಗಳು ಮೆರವಣಿಗೆಗೆ ಮೆರುಗು ತಂದವು. ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು, ಸ್ವಚ್ಛಭಾರತ, ಗ್ರಾಮವಾಸ್ತವ್ಯಗಳ ಕುರಿತ ಸ್ತಬ್ದಚಿತ್ರಗಳೊಂದಿಗೆ ಗ್ರಾಮದೇವತೆಗಳು ಗಮನ ಸೆಳೆದವು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಜಂಬೂಸವಾರಿ ಮೆರವಣಿಗೆ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.

ಈ ವೇಳೆ ಸುದ್ದಿಗಾರರೊಂದಿಗೆ ಡಾ.ಜಿ.ಪರಮೇಶ್ವರ್ ಮಾತನಾಡಿ, 11 ದಿನಗಳ ದಸಾರ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದ್ದೇವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ ಆಗಲಿ, ರಾಜ್ಯದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.


Share

You cannot copy content of this page