ಬೆಂಗಳೂರು: ನಾಳೆ ಜರುಗಲಿರುವ ಶಿಕ್ಷಕರ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ನಗರ ದಕ್ಷಿಣ ಜಿಲ್ಲಾ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ. ಎನ್. ರಮೇಶ್ ರವರು ಖುದ್ದು ಭೇಟಿ ನೀಡಿ ಸಿದ್ಧತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಮತದಾರರಿಗೆ ಮೂಲಸೌಕರ್ಯ ಹಾಗೂ ಭದ್ರತೆ ಖಚಿತಪಡಿಸಿ
ಮತಗಟ್ಟೆಗಳಲ್ಲಿ ಹಿರಿಯ ಹಾಗೂ ವಿಶೇಷಚೇತನ ಮತದಾರರ ಸುಲಭ ಸಂಚಾರಕ್ಕಾಗಿ ರ್ಯಾಂಪ್ಗಳ ವ್ಯವಸ್ಥೆ, ಮತದಾನ ಕೇಂದ್ರಗಳ ಸುತ್ತಮುತ್ತ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಹಾಗೂ ಅವುಗಳ ಸಮರ್ಪಕ ಕಾರ್ಯನಿರ್ವಹಣೆಯನ್ನು ಖುದ್ದು ಪರಿಶೀಲಿಸಿದರು. ಯಾವುದೇ ಲೋಪವಿಲ್ಲದಂತೆ ಮತದಾರರಿಗೆ ನೆರವಾಗಲು ಸಿಬ್ಬಂದಿಗೆ ತಾಕೀತು ಮಾಡಿದರು.
ಸಿಬ್ಬಂದಿಗೆ ಸೌಲಭ್ಯ ಹಾಗೂ ಮತಪೆಟ್ಟಿಗೆಗಳ ಸುರಕ್ಷತೆ
ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚುನಾವಣಾ ಏಜೆಂಟರಿಗೆ ಅಗತ್ಯ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದನ್ನು ಖಾತರಿಪಡಿಸಿಕೊಂಡರು. ಮತದಾನ ಪ್ರಕ್ರಿಯೆಯು ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಯಲು ಮತಪೆಟ್ಟಿಗೆಗಳನ್ನು (Ballet Boxes) ಮಾರ್ಗಸೂಚಿಯಂತೆ ಸೂಕ್ತ ಸ್ಥಳದಲ್ಲಿ ಇರಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಪರಿಶೀಲನೆ ನಡೆಸಿದ ಮತಗಟ್ಟೆಗಳ ವಿವರ
ಬೊಮ್ಮನಹಳ್ಳಿ ವ್ಯಾಪ್ತಿಯ JSS ಶಾಲೆ, ಜಯನಗರ ವ್ಯಾಪ್ತಿಯ NMKRV ಕಾಲೇಜು, ಬಿಟಿಎಂ ಲೇಔಟ್ ವ್ಯಾಪ್ತಿಯ ವೇಮನ ತಾಂತ್ರಿಕ ಕಾಲೇಜು, ಪದ್ಮನಾಭ ನಗರ ವ್ಯಾಪ್ತಿಯ ನ್ಯಾಷನಲ್ ಕಾಲೇಜು, ಬಸವನಗುಡಿ ವ್ಯಾಪ್ತಿಯ ಪಿ ಇ ಎಸ್ ಕಾಲೇಜು ಹಾಗೂ ಗೋವಿಂದರಾಜನಗರ ವ್ಯಾಪ್ತಿಯ ಸರ್ವಜ್ಞ ಪಬ್ಲಿಕ್ ಶಾಲೆಗಳಲ್ಲಿನ ಮತಗಟ್ಟೆ ಗಳನ್ನು ಪರಿಶೀಲಿಸಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಿ, ಯಾವುದೇ ಗೊಂದಲ ಅಥವಾ ಅಡಚಣೆಗಳಿಗೆ ಆಸ್ಪದ ನೀಡದಂತೆ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದರು.
