ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಪ್ರಸ್ತುತ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಕನ್ನಡಿಗರು, ವಿಮಾನಗಳ ಹಾರಾಟ ರದ್ದಾಗಿರುವ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಮೂಲದ ಪ್ರಯಾಣಿಕರು ಹಾಗೂ ರಾಜ್ಯದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಉದ್ದೇಶಿಸಿರುವವರ ಸುರಕ್ಷತೆಯ ಬಗ್ಗೆ ನಮ್ಮ ಸರ್ಕಾರ ವಿಶೇಷ ಗಮನಹರಿಸಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಕರ್ನಾಟಕದಿಂದ ಉಮ್ರಾ ಯಾತ್ರೆಗೆ ತೆರಳಿರುವ ಸುಮಾರು 600 ಯಾತ್ರಾರ್ಥಿಗಳು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಸುರಕ್ಷತೆಗಾಗಿ ಮತ್ತು ಅವರಿಗೆ ಅಗತ್ಯ ನೆರವನ್ನು ಒದಗಿಸುವ ಸಂಬಂಧ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ವಿಶೇಷವಾಗಿ ವಿಮಾನ ಸಂಚಾರದಲ್ಲಿನ ವ್ಯತ್ಯಯದಿಂದ ತೊಂದರೆ ಅನುಭವಿಸುತ್ತಿರುವ ಉಮ್ರಾ ಯಾತ್ರಾರ್ಥಿಗಳಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರಿಗೆ ನೆರವು ಒದಗಿಸಲು ಹಾಗೂ ಪ್ರಯಾಣದ ವ್ಯವಸ್ಥೆಗಳು ಲಭ್ಯವಾದ ತಕ್ಷಣ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕಂದಾಯ ಇಲಾಖೆಯ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಹಜ್ ಇಲಾಖೆ ಹಾಗೂ SEOC ಮೂಲಕ ವಿಶೇಷ ಸಹಾಯವಾಣಿ ಸಂಖ್ಯೆಗಳನ್ನು ಸಕ್ರಿಯಗೊಳಿಸಿದೆ.
ಪ್ರಸಕ್ತ ಉದ್ಭವಿಸಿರುವ ಸನ್ನಿವೇಶದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರು ಆತಂಕಕ್ಕೆ ಒಳಗಾಗದೆ, ಜಾಗರೂಕರಾಗಿರಬೇಕು. ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿ ಹೊರಡಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ವೈಮಾನಿಕ ದಾಳಿ ಸಂಭವಿಸಿದಲ್ಲಿ ಮನೆಯೊಳಗೆ ಅಥವಾ ಸುರಕ್ಷಿತ ಕಟ್ಟಡದೊಳಗೆ ಉಳಿಯಿರಿ. ಅಲ್ಲದೆ, ಭದ್ರತೆಗೆ ಸಂಬಂಧಿಸಿದ ಘಟನೆಗಳ ಛಾಯಾಚಿತ್ರ ಅಥವಾ ವಿಡಿಯೋಗಳನ್ನು ಸೆರೆಹಿಡಿಯುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ದೂರವಿರಿ. ಇಂತಹ ಚಟುವಟಿಕೆಗಳು ಸ್ಥಳೀಯ ಕಾನೂನುಗಳ ಉಲ್ಲಂಘನೆಯಾಗುವ ಸಾಧ್ಯತೆಯಿದೆ.
ಕರ್ನಾಟಕದಿಂದ ಸೌದಿ ಅರೇಬಿಯಾಕ್ಕೆ, ವಿಶೇಷವಾಗಿ ಉಮ್ರಾ ಯಾತ್ರೆಗೆ ತೆರಳಲು ಉದ್ದೇಶಿಸಿರುವವರು ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಭಾರತೀಯ ರಾಯಭಾರ ಕಚೇರಿ ಹೊರಡಿಸುವ ಸಲಹೆ ಮತ್ತು ಸೂಚನೆಗಳನ್ನು ಗಮನಿಸುತ್ತಿರಬೇಕು. ತಮ್ಮ ವಿಮಾನಯಾನ ಸಂಸ್ಥೆಗಳು ಹಾಗೂ ಪ್ರವಾಸ ಆಯೋಜಕರಿಂದ ವಿಮಾನಗಳ ವೇಳಾಪಟ್ಟಿಯನ್ನು ಖಚಿತಪಡಿಸಿಕೊಂಡು ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರಯಾಣಿಸುವ ಸಂದರ್ಭದಲ್ಲಿ ವಿಮಾನಗಳ ಹಠಾತ್ ರದ್ದತಿ, ವಿಳಂಬ ಅಥವಾ ಅನಿವಾರ್ಯವಾಗಿ ಹೆಚ್ಚಿನ ದಿನಗಳ ಕಾಲ ಅಲ್ಲಿಯೇ ಉಳಿಯಬೇಕಾಗುವ ಸಾಧ್ಯತೆಗಳನ್ನೂ ಸಹ ಗಮನದಲ್ಲಿರಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ.
24×7 ತುರ್ತು ಸಹಾಯವಾಣಿ ಸಂಖ್ಯೆಗಳು
ಕರ್ನಾಟಕ ಹಜ್ ಇಲಾಖೆ
9483503132 | 7899707775
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC)
1070 | 080-22253707
ಭಾರತೀಯ ರಾಯಭಾರ ಕಚೇರಿ, ರಿಯಾದ್
ದೂರವಾಣಿ:
+966 554412016 / +966 542126784
ವಾಟ್ಸಾಪ್ (ಸಂದೇಶಗಳಿಗೆ ಮಾತ್ರ): +966 536216082
ಭಾರತೀಯ ಕಾನ್ಸುಲೇಟ್, ಜೆಡ್ಡಾ
ದೂರವಾಣಿ: +966 122614093 / +966 556122301
ವಾಟ್ಸಾಪ್ (ಸಂದೇಶಗಳಿಗೆ ಮಾತ್ರ): +966 536209704
ಟೋಲ್ ಫ್ರೀ (ಸೌದಿ ಅರೇಬಿಯಾದೊಳಗೆ): 8002471234
ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬದವರು ಅಗತ್ಯ ನೆರವು ಪಡೆಯಲು ಮೇಲಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಪ್ರತಿಯೊಬ್ಬ ಕನ್ನಡಿಗರ ಸುರಕ್ಷತೆಯು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸಲು ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಮ್ಮ ಸರ್ಕಾರ ನಿರಂತರ ಸಮನ್ವಯ ಸಾಧಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
