ನವದೆಹಲಿ:ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಡೆದ 145ನೇ CWRC ಮತ್ತು 60ನೇ CWMA ಸಭೆಯಲ್ಲಿ ಮತ್ತೊಮ್ಮೆ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ.
ತಮಿಳುನಾಡು 13.829 ಟಿಎಂಸಿ ಬಾಕಿ ಸೇರಿ ಮುಂದಿನ 15 ದಿನಗಳಿಗೆ 18.402 ಟಿಎಂಸಿ ಅಂದರೆ ದಿನಕ್ಕೆ 14,236 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿತ್ತು. ಆದರೆ CWRC ಕೇವಲ ದಿನಕ್ಕೆ 3,000 ಕ್ಯೂಸೆಕ್ (3.88 ಟಿಎಂಸಿ) ನೀರನ್ನು ಅಕ್ಟೋಬರ್ 24 ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲು ಬಳಿ ಹರಿಸುವಂತೆ ಆದೇಶಿಸಿದೆ. CWMA ಕೂಡ ಇದೇ ಆದೇಶವನ್ನು ಎತ್ತಿ ಹಿಡಿದಿದೆ.
ಕರ್ನಾಟಕದ ಬರದ ಬವಣೆ ವಾದ:
ಸಭೆಯಲ್ಲಿ ಕರ್ನಾಟಕ ತೀವ್ರ ಬರದ ಪರಿಸ್ಥಿತಿಯನ್ನು ವಿವರಿಸಿದೆ.
ಶೇ.55.35ರಷ್ಟು ನೀರಿನ ಕೊರತೆ: ನಮ್ಮ 4 ಜಲಾಶಯಗಳಿಗೆ 30 ವರ್ಷಗಳ ಸರಾಸರಿ 273.865 ಟಿಎಂಸಿ ಒಳಹರಿವು ಬರಬೇಕಿತ್ತು. ಈ ವರ್ಷ ಬಂದಿರುವುದು ಕೇವಲ 122.293 ಟಿಎಂಸಿ. ಅಂದರೆ 55.35% ಕೊರತೆ ಇದೆ.
ಆದೇಶಕ್ಕಿಂತ ಹೆಚ್ಚು ನೀರು ಬಿಟ್ಟಿದ್ದೇವೆ: ಜುಲೈ 29ರಿಂದ ಅ.22ರವರೆಗೆ 45.231 ಟಿಎಂಸಿ ಬಿಡಲು ಹೇಳಿದ್ದರೆ, ಕರ್ನಾಟಕ 47.092 ಟಿಎಂಸಿ ಬಿಟ್ಟಿದೆ. ಅಂದರೆ 1.861 ಟಿಎಂಸಿ ಹೆಚ್ಚುವರಿ ನೀರು ಬಿಟ್ಟಿದ್ದೇವೆ. ಹೀಗಾಗಿ ಬಾಕಿ ಎಂಬ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಹೇಳಿದೆ.
ಜಲಾಶಯದಲ್ಲಿ ನೀರೇ ಇಲ್ಲ: ಅ.22ರಂತೆ ನಮ್ಮ ಜಲಾಶಯಗಳಲ್ಲಿ ಇರುವುದು ಕೇವಲ 46.510 ಟಿಎಂಸಿ. ಒಟ್ಟು ಲಭ್ಯತೆ 55 ಟಿಎಂಸಿ ಇದ್ದರೆ, ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಪರಿಸರ ಹರಿವಿಗೆ 43 ಟಿಎಂಸಿ ಬೇಕು. ಉಳಿಯುವುದು ಕೇವಲ 12 ಟಿಎಂಸಿ ಮಾತ್ರ.
226 ತಾಲೂಕು ಬರ ಪೀಡಿತ: ರಾಜ್ಯದ 240 ತಾಲೂಕುಗಳಲ್ಲಿ 226 ತಾಲೂಕು ಬರ ಪೀಡಿತ ಎಂದು ಘೋಷಿಸಲಾಗಿದೆ. ಅದರಲ್ಲಿ ಕಾವೇರಿ ಜಲಾನಯನ ಪ್ರದೇಶದ 56 ತಾಲೂಕುಗಳಲ್ಲಿ 55 ತಾಲೂಕು ಬರ ಪೀಡಿತ. ಒಂದು ಬೆಳೆಯನ್ನೂ ಬೆಳೆಯಲು ಆಗದೆ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ವಾದಿಸಿದೆ.
ತಮಿಳುನಾಡಿಗೆ ಮಳೆ ಇದೆ: ತಮಿಳುನಾಡಿನ ಮೆಟ್ಟೂರು, ಭವಾನಿ, ಅಮರಾವತಿ ಜಲಾಶಯಗಳಲ್ಲಿ 29.377 ಟಿಎಂಸಿ ನೀರಿದೆ. ಅ.1ರಿಂದ 21ರವರೆಗೆ ಅವರ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ 112% ಹೆಚ್ಚು ಮಳೆ ಆಗಿದೆ. ಈಶಾನ್ಯ ಮುಂಗಾರು ಅವರಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ದಾಖಲೆ ನೀಡಿದೆ.
ತಮಿಳುನಾಡು ವಾದ:
ಮೆಟ್ಟೂರಿನಲ್ಲಿ 20.887 ಟಿಎಂಸಿ ಮಾತ್ರ ಇದ್ದು, ಡೆಲ್ಟಾ ರೈತರು ಸಂಕಷ್ಟದಲ್ಲಿದ್ದಾರೆ. ಪ್ರೋ-ರಾಟಾ ಲೆಕ್ಕದಲ್ಲಿ 13.829 ಟಿಎಂಸಿ ಬಾಕಿ ಇದೆ, ಅದನ್ನು ತಕ್ಷಣ ಕೊಡಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.
ಎರಡೂ ರಾಜ್ಯಗಳ ವಾದ ಆಲಿಸಿದ CWRC, ಕಳೆದ ಬಾರಿಯಂತೆ ಈ ಬಾರಿಯೂ ಕೇವಲ 3,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ.
