ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಗಳ ಸ್ವಾಧೀನದಲ್ಲಿರುವ ಒಟ್ಟು 4351 ಕೆರೆಗಳ ಪೈಕಿ ಇನ್ನೂ 539 ಕೆರೆಗಳ 2431 ಎಕರೆ ಭೂಮಿ ಒತ್ತುವರಿ ತೆರವಾಗಬೇದೆಕಿದ್ದು, ಕೂಡಲೇ ಇದಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಗ್ರಾಮ ಪಂಚಾಯತಿಯ ಆಸ್ತಿಗಳ ಸಂರಕ್ಷಣೆ ಇಲಾಖೆಯ ಅಧಿಕಾರಿಗಳ ಹೊಣೆಯಾಗಿದೆ, ಮೊದಲಿಗೆ ಪ್ರಭಾವಿಗಳು ಮಾಡಿರುವ ಕೆರೆ ಒತ್ತುವರಿ ತೆರವು ಮಾಡಿಸಿ ಎಂದು ಸೂಚಿಸಿದರು.
ಎಲ್ ನಿ ನೋ ಪ್ರಬಾವದಿಂದ ಈ ಬಾರಿ ಮಲೆನಾಡಿನಲ್ಲೂ ಮಳೆಯ ಕೊರತೆಯಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಈ ಕಾಲಘಟ್ಟದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೆರೆಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
ಕೆರೆಗಳು ಗ್ರಾಮಗಳ ಜೀವನಾಡಿ, ಜಲ ಮೂಲಗಳಿದ್ದರೆ ಜನ, ಜಾನುವಾರುಗಳಿಗೆ ನೀರು ಲಭಿಸುತ್ತದೆ. ಜೊತೆಗೆ ನೀರು ಭೂಮಿಗೆ ಹಿಂಗುವ ಕಾರಣ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಕೆರೆಗಳ ಒತ್ತುವರಿ ತೆರವು ಮಾಡಿಸಿ ಎಂದು ತಿಳಿಸಿದರು.
ಈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ ಒಟ್ಟು 1017 ಕೆರೆಗಳ 4588 ಎಕರೆ ಪೈಕಿ ಈವರೆಗೆ 478 ಕೆರೆಗಳ 2156 ಎಕರೆ ಒತ್ತುವರಿ ತೆರವು ಮಾಡಿಸಲಾಗಿದೆ. ಇನ್ನೂ 539 ಕೆರೆಗಳ 2431 ಎಕರೆ ಭೂಮಿ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
