ಕೊಪ್ಪಳ:ಮಹಾಪುರುಷರಾದ ಬಸವಣ್ಣ, ಕನಕದಾಸರು, ವಾಲ್ಮೀಕಿ, ಕಿತ್ತೂರು ರಾಣಿ ಚೆನ್ನಮ್ಮ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಈ ಕಾರಣಕ್ಕೆ ಸರ್ಕಾರದಿಂದಲೇ ಈ ಮಹಾಪುರುಷರ ಜಯಂತಿ ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಮರಳಿಯಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾಪುರುಷರಾದ ಕಿತ್ತೂರು ರಾಣಿ ಚೆನ್ನಮ್ಮ ಅವರು ಪಂಚಮಸಾಲಿ ಸಮಾಜಕ್ಕೆ, ವಾಲ್ಮೀಕಿ ನಾಯಕ ಸಮಾಜಕ್ಕೆ, ಕನಕದಾಸರು ಕುರುಬ ಸಮಾಜಕ್ಕೆ, ಬಸವಣ್ಣ ಲಿಂಗಾಯಿತ ಸಮಾಜಕ್ಕೆ ಸೀಮಿತರಾಗಿಲ್ಲ. ಈ ಎಲ್ಲ ಮಹನೀಯರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗಾಗಿ ಸರ್ಕಾರದಿಂದಲೇ ಈ ಮಹನೀಯರು ಜಯಂತ್ಯುತ್ಸವ ಮಾಡಲಾಗುತ್ತಿದೆ ಎಂದರು.
ಯುವಕರಿಗೆ ಮಹನೀಯರ ಬಗ್ಗೆ ತಿಳಿಸಬೇಕು:
ನಮ್ಮ ಯುವಕರು ಸ್ವಲ್ಪ ದಾರಿ ತಪ್ಪುತ್ತಿದ್ದಾರೆ. ಮೆರವಣಿಗೆಗಿಂತ ಈ ಮಹಾಪುರುಷರ ಬಗ್ಗೆ ಚರ್ಚೆಗಳಾಗಬೇಕು. ಯಾವ ಸರ್ಕಾರದ ಅವಧಿಯಲ್ಲಿ ಏನಾಗಿದೆ, ಯಾರು ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಚರ್ಚೆಯಾಗಬೇಕು. ಚೆನ್ನಮ್ಮ ಮೊದಲಾದ ಮಹಿನೀಯರ ಬಗ್ಗೆ ಯುವಕರಿಗೆ ತಿಳಿಸಬೇಕು. ಇಲ್ಲವಾದರೆ, ಇನ್ನು ಸ್ವಲ್ಪ ದಿನಗಳಲ್ಲಿ ಫೋಟೋಗಳಷ್ಟೇ ಈ ಮಹಾಪುರುಷರನ್ನು ತೋರಿಸಬೇಕಾಗುತ್ತದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಬೆಂಬಲ:
ನಾವು ವಿದ್ಯಾರ್ಥಿಗಳಾಗಿದ್ದಾಗ ಕಿತ್ತೂರು ರಾಣಿ ಚೆನಮ್ಮ ಅವರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಓದುತ್ತಿದ್ದೆವು. ಈಗ ಪಠ್ಯ ಪುಸ್ತಕಗಳ ಕಥೆ ಏನಾಗಿದೆ? ಅದರ ಬಗ್ಗೆ ಈಗ ಮಾತನಾಡಲು ಇಷ್ಟವಿಲ್ಲ. ಇದರ ಬಗ್ಗೆ ಚರ್ಚೆ ಆಗಬೇಕು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಏನಾಯಿತು? ಈ ಸಮಾಜವು ರೈತಾಪಿ ವರ್ಗದವರು, ಕಷ್ಟದಲ್ಲಿ ಇದ್ದಾರೆ. ಈ ಸಮಾಜಕ್ಕೆ ಮೀಸಲಾತಿ ಕೊಡುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ನಾನು ನಿಮ್ಮ ಜತೆಗೆ ಇರುತ್ತೇನೆ. ನಾನು ಸಚಿವನಾಗಿ ಈ ಮಾತು ಹೇಳುತ್ತಿಲ್ಲ. ವಾಸ್ತವದ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಮೀಸಲಾತಿ ವಿಚಾರದಲ್ಲಿ ರಾಜಕಾರಣ ಸಲ್ಲದು:
ಮೀಸಲಾತಿ ಹೆಚ್ಚು ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶವಿದೆ. ನಮ್ಮ ಸರ್ಕಾರವು ಎಸ್ಸಿ-ಎಸ್ಟಿ, ಓಬಿಸಿ ಎಲ್ಲ ಸೇರಿ ಶೇ.56ಕ್ಕೆ ಮೀಸಲಾತಿ ಹೆಚ್ಚಳ ಮಾಡಿತು. ಇದರ ವಿರುದ್ಧ ಕೋರ್ಟ್ ಹೋದರು. ಸುಪ್ರೀಂ ಕೋರ್ಟ್ ಮೀಸಲಾತಿ ಶೇ.50ಕ್ಕಿಂತ ಹೆಚ್ಚು ನೀಡಬಾರದು ಎಂದು ಆದೇಶಿಸಿದೆ. ಹೀಗಾಗಿ ಎಸ್ಸಿ-ಎಸ್ಟಿಗೆ ನಾವು ಹೆಚ್ಚಳ ಮಾಡಿದ್ದ ಮೀಸಲಾತಿ ವಾಪಾಸ್ ಪಡೆಯುವ ಸ್ಥಿತಿ ಬಂದಿದೆ. ಮೀಸಲಾತಿ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿದರು.
ಮೀಸಲಾತಿ ಹೆಚ್ಚಳಕ್ಕೆ ಶೆಡ್ಯೂಲ್ 9 ಅಡ್ಡಿ:
ತಮಿಳುನಾಡಿನಲ್ಲಿ ಒಟ್ಟು ಮೀಸಲಾತಿ ಶೇ.69ರಷ್ಟಿದೆ. ನಾವು ಮೀಸಲಾತಿ ಹೆಚ್ಚಳ ಮಾಡಲು ಶೆಡ್ಯೂಲ್ 9 ಅಡ್ಡ ಬರುತ್ತಿದೆ. ಕೇಂದ್ರ ಸರ್ಕಾರವು ಈ ಶೆಡ್ಯೂಲ್ 9 ತಿದ್ದುಪಡಿ ಮಾಡಿ ಮೀಸಲಾತಿ ಹೆಚ್ಚಳ ಮಾಡಲು ಅವಕಾಶವಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಹಿಂದಿನ ರಾಜ್ಯ ಬಿಜೆಪಿ ಸರ್ಕಾರವು 2ಸಿ, 2ಡಿ ಮೀಸಲಾತಿ ನೀಡದೆ, ಈ ಶೆಡ್ಯೂಲ್ 9 ತಿದ್ದುಪಡಿ ಮಾಡಿ ಮೀಸಲಾತಿ ಹೆಚ್ಚಳ ಮಾಡಲು ಅವಕಾಶವಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ ಎಂದು ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ವಚನಾನಂದ ಸ್ವಾಮೀಜಿ, ನಾಗಭೂಷಣ್ ಸ್ವಾಮೀಜಿ, ಮಾಜಿ ಸಂಸದ ಕರಡಿ ಸಂಗಣ್ಣ, ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಪರಣ್ಣ ಮನುವಳ್ಳಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಡಾ.ಬಸವರಾಜ ಕ್ಯಾವಟರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
