ಸಮಗ್ರ ಸುದ್ದಿ

ಜಾತಿ ಕೇಳುವ ಸಮಾಜ ಬೇಡ, ಜ್ಞಾನ ಕೇಳುವ ಸಮಾಜ ಬೇಕು: ಸಿಎಂ ಡಿ.ಕೆ. ಶಿವಕುಮಾರ್ | ಬುದ್ಧ, ಬಸವ, ಅಂಬೇಡ್ಕರ್ ತತ್ವಗಳೇ ಸರ್ಕಾರಕ್ಕೆ ಮಾರ್ಗದರ್ಶನ

Share

ಚಾಮರಾಜನಗರ:ನಮಗೆ ಜಾತಿ ಕೇಳುವ ಸಮಾಜ ಬೇಕಿಲ್ಲ. ಜ್ಞಾನ ಕೇಳುವ ಸಮಾಜ ಬೇಕಾಗಿದೆ. ಬುದ್ಧ ಜ್ಞಾನದ ಸಂಕೇತ, ಅಂಬೇಡ್ಕರ್ ಸಾಮಾಜಿಕ ನ್ಯಾಯದ ಸಂಕೇತ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಂಬ ಮೂರು ಜ್ಯೋತಿಗಳು ಬೆಳಗಿದರೆ ಮಾತ್ರ ಭಾರತ ಬೆಳಗಲು ಸಾಧ್ಯ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಚಾಮರಾಜನಗರದಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿದರು.

“ನನಗೆ ಜಾತಿ ಮೇಲೆ ನಂಬಿಕೆಯಿಲ್ಲ. ನೀತಿ ಮೇಲೆ ಮಾತ್ರ ನಂಬಿಕೆಯಿದೆ. ಅಧಿಕಾರ ಜನರ ಸೇವೆಗೋಸ್ಕರ ಇರಬೇಕೆ ಹೊರತು ಒಬ್ಬರಿಗಾಗಿ ಅಲ್ಲ ಎಂದು ಬುದ್ಧ ಗುರು ಹೇಳಿದ್ದಾರೆ. ನಮ್ಮ ಸರ್ಕಾರ ಕೂಡ ಇದೇ ಹಾದಿಯಲ್ಲಿ ನಡೆಯುತ್ತಿದೆ. ಪ್ರಜಾಸೇವೆ ಇಲಾಖೆ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುತ್ತಿದೆ” ಎಂದರು.

ಅಸೂಯೆಯ ರಾಜಕಾರಣಕ್ಕೆ ಕೊನೆ ಹಾಡುವ ಶಕ್ತಿ ನಿಮ್ಮಲ್ಲಿದೆ

“ದ್ವೇಷವನ್ನು ದೂರ ಇಡಬೇಕು ಎಂದು ಬುದ್ದ ಹೇಳಿದ್ದಾರೆ. ಆದರೆ ಕೆಲವರಿಗೆ ಈ ಡಿ ಕೆ ಶಿವಕುಮಾರ್ ಆಡಳಿತ ನೋಡಿ ಅಸೂಯೆ. ನಮ್ಮ ಸಿದ್ದರಾಮಯ್ಯನವರು ಹೇಳುವಂತೆ ಸುಳ್ಳೆ ಕೆಲವರ ಮನೆ ದೇವರು. ಅಸೂಯೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬುದ್ಧನಲ್ಲಿ, ಈ ಬುದ್ಧನ ವಂಶಸ್ಥರ ಕುಡಿಗಳಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಮತದ ಮುಖಾಂತರ ಅಂತವರಿಗೆ ಉತ್ತರ ಕೊಡಬೇಕು. ದ್ವೇಷ ಅಸೂಯೆಯಿಂದ ಯಾರು ಈ ರಾಜ್ಯದಲ್ಲಿ ರಾಜಕಾರಣ ಮಾಡ್ತಾ ಇದ್ದಾರೆ ಅವರ ಮಾತಿಗೆ ಕೊನೆ ಹಾಡುವ ಶಕ್ತಿ ನಿಮ್ಮಲ್ಲಿದೆ” ಎಂದರು.

ಬೌದ್ಧ ವಿಶ್ವವಿದ್ಯಾಲಯ : ಸಚಿವ ಸಂಪುಟದಲ್ಲಿ ಚರ್ಚೆ

“ಬುದ್ಧನ ಸಂದೇಶ ವಿಶ್ವಕ್ಕೆ ಶಾಂತಿ ಮತ್ತು ಐಕ್ಯತೆಯ ದಾರಿಯನ್ನು ತೋರಿಸಿದೆ. ಎಲ್ಲ ಜೀವಿಗಳೂ ಸುಖವಾಗಿರಲಿ ಎಂಬ ಆಶಯ ಬೌದ್ಧ ಧರ್ಮದ ಮೂಲ ಚಿಂತನೆಯಾಗಿದೆ. ಮಾನವೀಯತೆ ಶ್ರೇಷ್ಠ ಧರ್ಮ, ಪರೋಪಕಾರ ಶ್ರೇಷ್ಠ ಸೇವೆ. ವಿಶ್ವಕ್ಕೆ ಶಾಂತಿಯ ಸಂದೇಶ, ಸಮಾಜಕ್ಕೆ ಸಮಾನತೆಯ ಸಂಕಲ್ಪ ನೀಡುವುದೇ ಬೌದ್ಧ ಧರ್ಮದ ಆಶಯವಾಗಿದೆ” ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ತತ್ವಗಳೇ ಸರ್ಕಾರಕ್ಕೆ ಮಾರ್ಗದರ್ಶನ

“ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳು ಸಮಾಜದ ಪರಿವರ್ತನೆಗೆ ಶಕ್ತಿಯಾಗಿವೆ. ಸಂವಿಧಾನ ಮತ್ತು ಬೌದ್ಧ ಧರ್ಮ ಸಮಾಜದ ಬಲವಾದ ಅಡಿಪಾಯಗಳಾಗಿವೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನ ಬದುಕಿಗೆ ಸಂವಿಧಾನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ ಮುಖ್ಯ. ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದ ಅಂತ್ಯದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಜಗತ್ತಿನ ಗಮನ ಸೆಳೆದ ಮಹತ್ವದ ಘಟನೆ. ಅವರ ಚಿಂತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ” ಎಂದರು.

“ತಾವು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಅಂಬೇಡ್ಕರ್ ನೀಡಿದ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮ ಆರಂಭಿಸಿದ್ದೆ. ನಮ್ಮ ಸರ್ಕಾರವೂ ಸಂವಿಧಾನದ ಆಶಯಗಳಿಗೆ ಮಹತ್ವ ನೀಡಿದೆ” ಎಂದು ಹೇಳಿದರು.

“ಯಾವುದೇ ಪವಿತ್ರ ಕಾರ್ಯಕ್ರಮದ ಮಹತ್ವವನ್ನು ವಿವರಿಸುವಾಗ ಬುದ್ಧ ಮತ್ತು ಬಸವಣ್ಣನವರು ಮನೆ ತೊರೆದ ಸಂದರ್ಭ, ಯೇಸು ಕ್ರಿಸ್ತರು ಶಿಲುಬೆಗೇರಿದ ಸಂದರ್ಭ, ಪ್ರವಾದಿ ಪೈಗಂಬರ್ ಅವರ ದಿವ್ಯವಾಣಿ ಕೇಳಿಸಿದ ಸಂದರ್ಭ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಸಂದರ್ಭ ಹಾಗೂ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ನಾಯಕತ್ವ ವಹಿಸಿದ ಸಂದರ್ಭಗಳನ್ನು ತಾವು ಸ್ಮರಿಸುತ್ತೇನೆ” ಎಂದರು.

“ಬುದ್ಧನನ್ನು ಅರಿಯುವುದು ಜ್ಞಾನವನ್ನು ಅರಿತಂತೆ. ಬುದ್ಧನ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದು ಬದುಕಿನ ಮೌಲ್ಯಗಳನ್ನು ಅರಿತಂತೆ. ಪ್ರತಿಯೊಬ್ಬರ ಬದುಕಿನಲ್ಲೂ ಜ್ಞಾನದ ದೀಪ ಬೆಳಗಬೇಕು. ಸಮಾಜದ ಆತ್ಮ ಪ್ರಜಾಪ್ರಭುತ್ವವಾಗಿದ್ದರೆ, ಸಾಮಾಜಿಕ ನ್ಯಾಯವೇ ಪ್ರಗತಿಯ ಅಡಿಪಾಯ. ಇದೇ ನಮ್ಮ ಸರ್ಕಾರದ ಮೂಲ ಉದ್ದೇಶ ಮತ್ತು ಮಂತ್ರ” ಎಂದು ತಿಳಿಸಿದರು.

ಮುಂದಿನ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ

“ಮುಂದಿನ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆಯೋಜಿಸಲಾಗುವುದು.
ಬೆಳಗಾವಿಯಲ್ಲಿಯೂ ಸಮ್ಮೇಳನ ನಡೆಸುವ ಬಗ್ಗೆ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ವರ್ಷಕ್ಕೆ ಎರಡು ಸಮ್ಮೇಳನಗಳನ್ನು ನಡೆಸುವುದಕ್ಕೂ ಅಭ್ಯಂತರವಿಲ್ಲ. ಪ್ರತಿಯೊಬ್ಬರ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದು ಮುಖ್ಯ” ಎಂದರು.

“ಬೌದ್ಧ ವಿಶ್ವವಿದ್ಯಾಲಯ ಕುರಿತು ಬೆಂಗಳೂರಿನಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು” ಎಂದರು.

ಧರ್ಮ ಯಾರೊಬ್ಬರ ಮನೆಯ ಸ್ವತ್ತಲ್ಲ

“ಧರ್ಮ ಯಾರೊಬ್ಬರ ಮನೆಯ ಸ್ವತ್ತಲ್ಲ. ಹಿಂದೂ ಧರ್ಮವೂ ಯಾರೊಬ್ಬರ ಸ್ವತ್ತಲ್ಲ. ಧರ್ಮಗಳು ಬೇರೆ ಬೇರೆಯಾಗಿರಬಹುದು. ಆದರೆ ಅವುಗಳ ಮೂಲ ತತ್ವಗಳಲ್ಲಿ ಮಾನವೀಯತೆ ಮತ್ತು ಭಕ್ತಿಯ ಮೌಲ್ಯಗಳಿಗೆ ಮಹತ್ವವಿದೆ. ಪ್ರತಿಯೊಬ್ಬರೂ ತಮ್ಮ ಧರ್ಮ ಮತ್ತು ಆಚರಣೆಗಳನ್ನು ಅನುಸರಿಸುತ್ತಾ ಪರಸ್ಪರ ಗೌರವದಿಂದ ಬದುಕಬೇಕು” ಎಂದರು.

ಬಡವರ ಬದುಕಿನಲ್ಲಿ ಬದಲಾವಣೆ ತರುವುದು ಸರ್ಕಾರದ ಗುರಿ

“ಜನರಿಗೆ ಮನೆ, ನಿವೇಶನ, ಭೂಮಿ ಮತ್ತು ಖಾತೆಗಳನ್ನು ಸರಿಯಾದ ದಾಖಲೆಗಳೊಂದಿಗೆ ಒದಗಿಸುವ ಭೂ ಗ್ಯಾರಂಟಿಯನ್ನು ನಮ್ಮ ಸರ್ಕಾರ ನೀಡಿದೆ. ಅರ್ಹರಿಗೆ ಹಕ್ಕುಪತ್ರಗಳನ್ನು ನೀಡುವ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಖಾತೆಯ ಜವಾಬ್ದಾರಿಯನ್ನು ಡಾ. ಜಿ. ಪರಮೇಶ್ವರ ಅವರಿಗೆ ನೀಡಿದ್ದು, ಅವರು ಕ್ರಾಂತಿಕಾರಿ ಹೆಜ್ಜೆ ಇಡಲು ಮುಂದಾಗಿದ್ದಾರೆ” ಎಂದರು.

“ಮುಂದಿನ ಎರಡು ವರ್ಷಗಳಲ್ಲಿ ಬಡವರಿಗೆ 10 ಲಕ್ಷಕ್ಕೂ ಹೆಚ್ಚು ನಿವೇಶನಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಈ ವರ್ಷ ಐದು ಲಕ್ಷ ನಿವೇಶನಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.

ಐದು ಗ್ಯಾರಂಟಿಗಳಿಂದ ಜನರಿಗೆ ನೆರವು

“ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ನೆರವಾಗುತ್ತಿವೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ., ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಹಾಗೂ ಯುವಕರಿಗೆ ಯುವನಿಧಿ ಯೋಜನೆಯ ಮೂಲಕ ನೆರವು ನೀಡಲಾಗುತ್ತಿದೆ” ಎಂದು ವಿವರಿಸಿದರು.

“ರೈತರ ಪಂಪ್ ಸೆಟ್ ಗಳಿಗೆ ನೀಡಲಾಗುವ ಉಚಿತ ವಿದ್ಯುತ್ ಸೌಲಭ್ಯಕ್ಕೆ ಈ ವರ್ಷ ಸುಮಾರು 30,000 ಕೋಟಿ ರೂ. ವೆಚ್ಚದ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಬಳಕೆ ಹೆಚ್ಚಾಗುವ ಸಂಭವವಿದೆ. ಈ ಎಲ್ಲ ವಿಚಾರಗಳ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ” ಎಂದರು.

“136 ಸ್ಥಾನಗಳನ್ನು ಜನ ನೀಡಿದ್ದರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನರ ಋಣ ತೀರಿಸುವುದು ನಮ್ಮ ಕರ್ತವ್ಯ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬಡವರ ಬದುಕಿಗೆ ನೆರವಾಗುವ ಒಂದೇ ಒಂದು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೆ ತೋರಿಸಲಿ” ಎಂದು ಸವಾಲು ಹಾಕಿದರು.

ಮೀಸಲಾತಿ ಅವಕಾಶ ವಂಚಿತರಿಗೆ ಮುನ್ನಡೆಯ ದಾರಿ

“ಮೀಸಲಾತಿ ಎಂದರೆ ಕೇವಲ ಅವಕಾಶವಲ್ಲ. ಅವಕಾಶಗಳಿಂದ ದೂರ ಉಳಿದವರಿಗೆ ಮುಂದೆ ಬರಲು ದಾರಿ ಮಾಡಿಕೊಡುವ ವ್ಯವಸ್ಥೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೂಲಕವೇ ಸಮಾಜದ ಪ್ರಗತಿ ಸಾಧ್ಯ. ಬಡವರು, ಶೋಷಿತರು ಹಾಗೂ ಅವಕಾಶ ವಂಚಿತ ಸಮುದಾಯಗಳ ಬದುಕಿನಲ್ಲಿ ಬದಲಾವಣೆ ತರುವುದೇ ಸರ್ಕಾರದ ಆಶಯ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳ ಆಧಾರದ ಮೇಲೆ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ” ಎಂದರು.

“ಅನೇಕ ಬಡ ರೈತರು ನೇಗಿಲು ಮತ್ತು ಜಾನುವಾರುಗಳಿಲ್ಲದೆ ಕೃಷಿ ಮಾಡುವುದು ಕಷ್ಟವಾಗಿದೆ. ಅಂತಹ ರೈತರಿಗೆ ನೆರವಾಗಲು ಉಚಿತವಾಗಿ ಭೂಮಿಯನ್ನು ಉಳುಮೆ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ ‘ನೇಗಿಲಯೋಗಿ’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ” ಎಂದು ತಿಳಿಸಿದರು

ಬುದ್ಧನ ಸಂದೇಶಕ್ಕೆ ಗಡಿಗಳಿಲ್ಲ

“ಬುದ್ಧನ ಚಿಂತನೆಗೆ ಯಾವುದೇ ಗಡಿಯಿಲ್ಲ. ಅವರ ಶಾಂತಿ ಮತ್ತು ಅಹಿಂಸೆಯ ಸಂದೇಶ ಭಾರತಕ್ಕೆ ಮಾತ್ರ ಸೀಮಿತವಾಗದೆ ಏಷ್ಯಾದ ಅನೇಕ ದೇಶಗಳಲ್ಲಿ ಪ್ರಭಾವ ಬೀರಿದೆ. ಕಳೆದ ವರ್ಷ ಬಿಹಾರದ ಗಯಾಕ್ಕೆ ಭೇಟಿ ನೀಡಿ, ಬುದ್ಧನಿಗೆ ಜ್ಞಾನೋದಯವಾದ ಪವಿತ್ರ ಭೂಮಿಯನ್ನು ವೀಕ್ಷಿಸಿ ನಮಸ್ಕರಿಸಿದ್ದೆ” ಎಂದು ಸ್ಮರಿಸಿದರು.

“ಯಾವ ಹೃದಯದಲ್ಲಿ ಕರುಣೆ ನೆಲೆಸಿದೆಯೋ, ಅಲ್ಲಿಯೇ ಬುದ್ಧನ ಚಿಂತನೆ ಜೀವಂತವಾಗಿರುತ್ತದೆ. ಯುದ್ಧದಿಂದ ಭೂಮಿಯನ್ನು ಗೆಲ್ಲಬಹುದು ಎಂದು ಕೆಲವರು ಭಾವಿಸಬಹುದು. ಆದರೆ ಮಾನವೀಯತೆ, ಪ್ರೀತಿ ಮತ್ತು ಕರುಣೆಯಿಂದ ಮಾತ್ರ ಜನರ ಹೃದಯಗಳನ್ನು ಗೆಲ್ಲಲು ಸಾಧ್ಯ ಎಂಬುದು ಬುದ್ಧನ ಮಾರ್ಗದರ್ಶನವಾಗಿದೆ” ಎಂದರು.

ಮೈಸೂರಿನ ಪರಂಪರೆ ಮತ್ತು ದಸರಾ ಸಂಭ್ರಮ

“ಮೈಸೂರು ದಸರಾ ಕಾರ್ಯಕ್ರಮದಲ್ಲಿ ಟಿಬೆಟಿಯನ್ನರು, ಬೌದ್ಧ ಧರ್ಮದ ಅನುಯಾಯಿಗಳು, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ಚಲನಚಿತ್ರ ಕ್ಷೇತ್ರದವರು, ರಂಗಕಲಾವಿದರು ಹಾಗೂ ದೇಶವನ್ನು ರಕ್ಷಿಸುವ ಯೋಧರನ್ನು ಆಹ್ವಾನಿಸಲಾಗಿತ್ತು. ಏರ್ ಶೋ, ಡ್ರೋನ್ ಶೋ, ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಕಂಬಳ, ಹಳ್ಳಿಕಾರ್ ಹೋರಿಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ನಾಡಿನ ಇತಿಹಾಸ, ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸಲಾಗಿದೆ” ಎಂದು ಹೇಳಿದರು.

“ಮೈಸೂರಿನ ಐತಿಹಾಸಿಕ ಪರಂಪರೆಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಕರ್ತವ್ಯ. ಆಡಳಿತ ಮಾಡುವವರ ಮಹತ್ವ ಅವರ ಸ್ಥಾನಮಾನದಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಜನರ ಬದುಕಿನಲ್ಲಿ ಅವರು ಮೂಡಿಸುವ ಪ್ರಭಾವದಿಂದ ನಿರ್ಧಾರವಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಡೆಗಳಲ್ಲ, ಸೇತುವೆಗಳನ್ನು ನಿರ್ಮಿಸಬೇಕು

“ಬೆಂಕಿ ಹಚ್ಚುವುದು ಸುಲಭ. ಆದರೆ ಮನೆ ಕಟ್ಟುವುದು ಕಷ್ಟ. ಮನೆಗಳನ್ನು ಕಟ್ಟುವುದಕ್ಕಿಂತ ಮುಖ್ಯವಾಗಿ ಮನಸ್ಸುಗಳನ್ನು ಜೋಡಿಸಬೇಕು. ಮನುಷ್ಯ ಗೋಡೆಗಳನ್ನು ನಿರ್ಮಿಸಿ ಜನರನ್ನು ವಿಭಜಿಸಬಹುದು. ಆದರೆ ಸೇತುವೆಗಳನ್ನು ನಿರ್ಮಿಸಿ ಜನರನ್ನು ಬೆಸೆಯುವುದೇ ನಮ್ಮ ಕಾಂಗ್ರೆಸ್ ಸರ್ಕಾರದ ಚಿಂತನೆ” ಎಂದು ಹೇಳಿದರು.

“ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ. ಅಧಿಕಾರದಲ್ಲಿರುವಾಗ ಜನರ ಬದುಕಿಗೆ ಏನು ಕೊಡುಗೆ ನೀಡಿದ್ದೇವೆ ಎಂಬುದೇ ಮುಖ್ಯ. ಯಾರ ಮೇಲೂ ದ್ವೇಷ ಸಾಧಿಸಲು ಅಧಿಕಾರವನ್ನು ಬಳಸುವುದಿಲ್ಲ. ಜನರ ಸೇವೆ ಮಾಡಲು ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಸಿದ್ಧವಾಗಿದೆ” ಎಂದು ಭರವಸೆ ನೀಡಿದರು.

ಜನರ ಆಶೀರ್ವಾದವೇ ರಾಜಕೀಯ ಶಕ್ತಿ

ನಾನು ಸುಮಾರು 1.23 ಲಕ್ಷ ಮತಗಳ ಅಂತರದಿಂದ ಗೆದ್ದೆ, ನನ್ನ ಬೆಂಬಲಿಸಿದವರಲ್ಲಿ ಶೇ.99ರಷ್ಟು ಮಂದಿ ಪರಿಶಿಷ್ಟ ಸಮುದಾಯದವರು. ಜ್ಞಾನಪ್ರಕಾಶ್ ಸ್ವಾಮೀಜಿಯವರು ತಮ್ಮ ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ಸೈಕಲ್ನಿಂದಲೇ ಜನರ ನಡುವೆ ಕೆಲಸ ಮಾಡುತ್ತಿದ್ದುದನ್ನು ಸ್ಮರಿಸಿದರು. ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದವರಿಗೆ ಸುಮಾರು 3,000 ಮತಗಳು ಬಂದಿದ್ದವು ಎಂಬುದನ್ನು ಉಲ್ಲೇಖಿಸಿದರು.

ಜನರ ಆಶೀರ್ವಾದದಿಂದ ಎಂಟನೇ ಬಾರಿಗೆ ವಿಧಾನಸೌಧದಲ್ಲಿ ಕುಳಿತು ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಜನರ ವಿಶ್ವಾಸ ಮತ್ತು ಆಶೀರ್ವಾದ ಮುಂದುವರಿದರೆ ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಲ್ಲ ಜನರ ಬದುಕಿನ ಜೊತೆಗೆ ತಾವು ಸದಾ ಇರುತ್ತೇನೆ. ಸರ್ಕಾರದ ಸಚಿವರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳೂ ಜನರೊಂದಿಗೆ ನಿಲ್ಲಲಿದ್ದಾರೆ. ಸಮುದಾಯದ ಎಲ್ಲ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆದ ಈ ಭವ್ಯ ಸಮ್ಮೇಳನವು ಬುದ್ಧನ ಶಾಂತಿ, ಬಸವಣ್ಣನ ಸಮಾನತೆ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳನ್ನು ಮತ್ತಷ್ಟು ಬಲಪಡಿಸಲಿ ಎಂದು ಹಾರೈಸಿದರು.


Share

You cannot copy content of this page