ಬೆಂಗಳೂರು:ರಾಜಧಾನಿ ಬೆಂಗಳೂರು ನಗರವು ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಗೆ ಹಂತ-ಹಂತವಾಗಿ ಸುಸಜ್ಜಿತ ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ಒಳಚರಂಡಿ ಜಾಲವನ್ನು ಒದಗಿಸಲು ಸಮಗ್ರ ದೀರ್ಘಕಾಲೀನ ಮಹಾಯೋಜನೆಯನ್ನು (ಮಾಸ್ಟರ್ ಪ್ಲಾನ್) ಸಿದ್ಧಪಡಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಶುಕ್ರವಾರ ವಿಕಾಸಸೌಧದಲ್ಲಿ ಬೆಂಗಳೂರು ಪ್ರಾಧಿಕಾರದ ನಾಲ್ಕನೇ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, “ಬೆಂಗಳೂರು ನಗರ ನಿರೀಕ್ಷೆಯನ್ನೂ ಮೀರಿ ಬೆಳೆಯುತ್ತಿದೆ. ಹೀಗಾಗಿ ಈ ಮಹಾಯೋಜನೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಿಂದ ಹೊರಗಿನ ನೈಜ ಬೆಳವಣಿಗೆಯನ್ನು ಗುರುತಿಸುವುದಲ್ಲದೆ, ಯೋಜಿತ ನಗರೀಕರಣಕ್ಕೆ ಅಗತ್ಯವಿರುವ ನೀರು ಮತ್ತು ಒಳಚರಂಡಿ ಮೂಲಸೌಕರ್ಯಗಳ ಅಗತ್ಯತೆಗಳನ್ನು ಅಂದಾಜಿಸಬೇಕು. ಈ ಅಗತ್ಯತೆಗಳ ಆಧಾರದ ಮೇಲೆ, ಕಾಲಾವಧಿಗೆ ಅನುಗುಣವಾಗಿ ನಿಗದಿತ ಯೋಜನೆಗಳನ್ನು ಹಂತ-ಹಂತವಾಗಿ ಕೈಗೆತ್ತಿಕೊಳ್ಳಬೇಕು. ಅದೇ ರೀತಿ, ಜಿಬಿಎ ಹೊರಗಿನ ಪ್ರದೇಶಗಳಲ್ಲಿ ಮಹಾಯೋಜನೆಗೆ ಅನುಗುಣವಾಗಿ ಪ್ರಸ್ತುತ ಇರುವ ರಸ್ತೆಗಳ ಅಭಿವೃದ್ಧಿ ಮತ್ತು ಹೊಸ ರಸ್ತೆಗಳ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ನೀರಿನ ಸಂಸ್ಕರಣೆ ಆದ್ಯತೆಯ ಕೆಲಸವಾಗಲಿ
ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಅತ್ಯಾಧುನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡುವುದಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದ ಸಚಿವರು, ಈಗಾಗಲೇ ಕೆ.ಸಿ. ವ್ಯಾಲಿ ಯೋಜನೆಯ ಮೂಲಕ ಕೋರಮಂಗಲ-ಚಲ್ಲಘಟ್ಟ ಕಣಿವೆಯ ಸಂಸ್ಕರಿಸಿದ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಅದೇ ರೀತಿ ಹೆಚ್.ಎನ್. ವ್ಯಾಲಿ ಯೋಜನೆಯ ಮೂಲಕ ಹೆಬ್ಬಾಳ-ನಾಗವಾರ ಕಣಿವೆಯ ನೀರನ್ನು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ಆಯ್ದ ಭಾಗಗಳಿಗೆ ಹಾಗೂ ವೃಷಭಾವತಿ ವ್ಯಾಲಿ ಯೋಜನೆಯಿಂದ ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಇದರ ಜೊತೆಗೆ ಯಲಹಂಕ ಹಾಗೂ ಜಕ್ಕೂರು ಕೆರೆಗಳ ಮರುಪೂರಣದಿಂದ ಸ್ಥಳೀಯ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿರುವುದು ಸಾಬೀತಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲೂ ಸಹ ನಗರದ ಕೊಳಚೆ ನೀರು ಸಂಸ್ಕರಣೆಗೆ ಮತ್ತಷ್ಟು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸ್ಪಷ್ಟಪಡಿಸಿದರು.
ರಸ್ತೆ ಅಗೆದವರೇ ಪುನಶ್ಚೇತನಗೊಳಿಸಬೇಕು:
ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆ ಹಾಳಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಸಚಿವರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳು ತಮ್ಮ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದು ನಂತರ ಅವುಗಳನ್ನು ಸರಿಯಾಗಿ ಮರುನಿರ್ಮಾಣ ಮಾಡದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ಇಲಾಖೆಗಳು ರಸ್ತೆ ಅಗೆಯುವುದರಿಂದ ನಾಗರಿಕರು ಅನುಭವಿಸುವ ತೊಂದರೆಗೆ ಪಾಲಿಕೆಗಳು ದೂಷಣೆಗೊಳಗಾಗುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, “ಯಾವ ಸಂಸ್ಥೆಯು ರಸ್ತೆಯನ್ನು ಅಗೆಯುತ್ತದೆಯೋ, ಅದೇ ಸಂಸ್ಥೆಯೇ ಅದನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸುವ ಜವಾಬ್ದಾರಿಯನ್ನು ಹೊರಬೇಕು” ಎಂದು ಅವರು ಸೂಚಿಸಿದರು.
ರಸ್ತೆಗಳ ಸಮರ್ಪಕ ಮರುನಿರ್ಮಾಣ, ವೆಚ್ಚದ ಭರಿಕೆ, ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ವಿಧಾನ ಹಾಗೂ ಈ ಸಮಸ್ಯೆಯ ಪುನರಾವರ್ತನೆ ತಡೆಯಲು ಎಲ್ಲಾ ಇಲಾಖೆಗಳಿಗೂ ಅನ್ವಯವಾಗುವಂತೆ ಏಕರೂಪದ ನೀತಿ ಮತ್ತು ಕಾರ್ಯವಿಧಾನವನ್ನು (Uniform Policy) ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಮೆಟ್ರೋ ಫೀಡರ್ ವ್ಯವಸ್ಥೆ:
ಮತ್ತೊಂದೆಡೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಮೆಟ್ರೋ ನಿಲ್ದಾಣಗಳಿಗೆ ‘ಫೀಡರ್ ಬಸ್’ ಸೇವೆ ಅತ್ಯಗತ್ಯ ಎಂದ ಅವರು, ಮೆಟ್ರೋ ನಿಲ್ದಾಣಗಳ 2 ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಎಂಟಿಸಿ ವತಿಯಿಂದ ಜಿಪಿಎಸ್ ಆಧಾರಿತ ಫೀಡರ್ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.
ಈ ಬಸ್ಗಳಿಗೆ ನಿರ್ದಿಷ್ಟ ಮಾರ್ಗಗಳನ್ನು ನಿಗದಿಪಡಿಸಿ, ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆಗೆ ಅವಕಾಶ ನೀಡಬಾರದು. ವಿಶೇಶವಾಗಿ ಔಟರ್ ರಿಂಗ್ ರಸ್ತೆಗಳಲ್ಲಿ ಫಸ್ಟ್ ಮೈಲ್ – ಲಾಸ್ಟ್ ಮೈಲ್ ಸಂಪರ್ಕ ಕಲ್ಪಿಸುವುದರಿಂದ ಮೆಟ್ರೋ ಸೇವೆ ಹೆಚ್ಚು ಪರಿಣಾಮಕಾರಿಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾದ ‘BMTC 2.0’ ಮೊಬೈಲ್ ಆಪ್ ಮೂಲಕ ಮೆಟ್ರೋ ಹಾಗೂ ಬಿಎಂಟಿಸಿ ಪ್ರಯಾಣಕ್ಕೆ ಒಂದೇ ಕಡೆ ಟಿಕೆಟ್ ಬುಕ್ ಮಾಡುವ ಸೌಲಭ್ಯವಿದ್ದು, ಮುಂದಿನ ದಿನಗಳಲ್ಲಿ ಈ ಆಪ್ನೊಂದಿಗೆ ಖಾಸಗಿ ಆಟೋ ಮತ್ತು ಟ್ಯಾಕ್ಸಿ ಸೇವೆಯನ್ನು ಒಗ್ಗೂಡಿಸಲು (Integration) ಯೋಜಿಸಲಾಗುತ್ತಿದೆ ಎಂದರು.
ಜಿಬಿಎ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಅಗ್ನಿಶಾಮಕ ದಳ:
ನಗರದ ಸುರಕ್ಷತೆಯ ಭಾಗವಾಗಿ ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಪ್ರಸ್ತುತ ಇರುವ 20 ಅಗ್ನಿಶಾಮಕ ಘಟಕಗಳ ಜೊತೆಗೆ ಹೆಚ್ಚುವರಿಯಾಗಿ 9 ಹೊಸ ಘಟಕಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ನಗರದ ವಸತಿ, ವಾಣಿಜ್ಯ ಮತ್ತು ಅಪಾಯಕಾರಿ ಪ್ರದೇಶಗಳನ್ನು ಸರಿಯಾಗಿ ಗುರುತಿಸಿ ಮ್ಯಾಪಿಂಗ್ ಮಾಡುವಂತೆ ಹಾಗೂ ಭವಿಷ್ಯದಲ್ಲಿ ಅಗತ್ಯವಿರುವ ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಶಿಲ್ಪಾ ನಾಗ್, ನಿತಿಶ್, ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ಬಿಎಂಆರ್.ಡಿಎ ಆಯುಕ್ತರಾದ ರಾಜೇಂದ್ರ ಚೋಳನ್, ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ, ಬಿಎಂಟಿಸಿ ಎಂಡಿ ರಘುನಂದನ್ ಮೂರ್ತಿ, ಬಿಎಸ್.ಡಬ್ಲ್ಯೂ.ಎಂಎಲ್ ಸಿಇಓ ಕರೀಗೌಡ, ಅಗ್ನಿಶಾಮಕ, ಬೆಸ್ಕಾಂ, ಮೆಟ್ರೋ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
