ಸಮಗ್ರ ಸುದ್ದಿ

ಮಂಡ್ಯ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಗೆ ಕ್ರಮ: ಡಿ ಕೆ ಶಿವಕುಮಾರ್

Share

ಮಂಡ್ಯ:ಮಂಡ್ಯದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

“ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಕ್ಕೆ 115 ಕೋಟಿ, ಪ್ರಮುಖ ರಸ್ತೆಗಳಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪನೆ, ಮೈ ಶುಗರ್ ಫ್ಯಾಕ್ಟರಿಗೆ ಬಾಯ್ಲರ್ ಘಟಕಕ್ಕೆ 60 ಕೋಟಿ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹೊಸೂರಿನಲ್ಲಿ ನೂರು ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಗೆ 24 ಸಾವಿರ ಕೋಟಿ ನೀಡಲಾಗಿದೆ. ಎಲ್ಲಾ ಗ್ಯಾರಂಟಿ ಯೋಜನೆಯಡಿ ನೆರವು ನೀಡಲಾಗಿದೆ” ಎಂದರು.

ಮಂಡ್ಯದ ರೈತರ ಕಣ್ಣಲ್ಲಿ ನೀರು ಹರಿಯಬಾರದು, ರೈತರ ಹೊಲದಲ್ಲಿ ಹರಿಯಬೇಕು

“ಮಂಡ್ಯದ ಜನರ ಮಾತು ನೇರ, ಆದರೆ ಮನಸ್ಸು ನಾಗಮಂಗಲದ ಬೆಣ್ಣೆ ಇದ್ದಂತೆ ಎಂದು ಭಾವಿಸಿದ್ದೇನೆ. ಮಂಡ್ಯ ಎಂದರೆ ಸಕ್ಕರೆ, ಅಕ್ಕರೆ, ಅನ್ನದ ತಟ್ಟೆ ಹಾಗೂ ಆಸರೆ. ಮಂಡ್ಯದ ರೈತರ ಕಣ್ಣಲ್ಲಿ ಎಂದಿಗೂ ನೀರು ಹರಿಯಬಾರದು. ಅವರ ಹೊಲದಲ್ಲಿ ನೀರು ಹರಿಯಬೇಕು. ಇದು ಸರ್ಕಾರದ ಚಿಂತನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ದೂರದೃಷ್ಟಿ ಜನರ ಬೆವರಿಗೆ ಬೆಲೆ ಒದಗಿಸಿದೆ. ಇಲ್ಲಿನ ರೈತರು ಶ್ರಮದಿಂದ ಬದುಕುತ್ತಿದ್ದಾರೆ” ಎಂದರು.

“ನಮ್ಮ ನಾಯಕರಾದ ನಂಜುಂಡಸ್ವಾಮಿ, ಮಾದೇಗೌಡರು, ಪುಟ್ಟಣ್ಣಯ್ಯನವರ ಹೋರಾಟದ ಫಲವಾಗಿ ಕೃಷಿ ಇಂದಿಗೂ ಜಿಲ್ಲೆಯಲ್ಲಿ ಜೀವಂತವಾಗಿ ಉಳಿದಿದೆ. ಶಂಕರೇಗೌಡರ ಕಿಚ್ಚಿನಿಂದ ಮಂಡ್ಯ ವಿದ್ಯೆಯ ಭೂಮಿಯಾಗಿ ಬದಲಾಯಿತು. ಎಸ್.ಎಂ ಕೃಷ್ಣ ಅವರು ಈ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಿ ಮಂಡ್ಯದಿಂದ ಇಂಡಿಯಾಗೆಲ್ಲ ಪ್ರಸಿದ್ಧರಾದರು. ರಾಜ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಏರಿಸಿದ ಇತಿಹಾಸವನ್ನು ಸ್ಮರಿಸಬೇಕು” ಎಂದರು.

“ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಇತಿಹಾಸ ಪ್ರಮುಖವಾದುದು. ಇದಕ್ಕೆ ವೀರಸೌಧ ಸಾಕ್ಷಿಯಾಗಿದೆ. ಶ್ರೀರಂಗಪಟ್ಟಣದಿಂದ ಹಿಡಿದು ಇತಿಹಾಸದ ಪುಟಗಳಲ್ಲಿ ಸೇರಿದೆ. ಧರ್ಮ ಸಿಂಗ್ ಸಿಎಂ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಂದಿದೆ. ಚಲುವರಾಯಸ್ವಾಮಿ ಕೃಷಿ ವಿಶ್ವ ವಿದ್ಯಾಲಯ ಪ್ರಾರಂಭಿಸಿ ರೈತರ ಬದುಕಿಗೆ ಮಾರ್ಗದರ್ಶನ ಮಾಡಿದ್ದಾರೆ. 2023ರಲ್ಲಿ ಜನ ನಮಗೆ 7 ಸ್ಥಾನಗಳನ್ನು ಕೊಟ್ಟು ಆಶೀರ್ವಾದ ಮಾಡಿದ್ದೀರಿ“ ಎಂದರು.

ಟೀಕೆ, ಅಸೂಯೆಯಿಂದ ಪ್ರಯೋಜನವಿಲ್ಲ

“ನಾನು ಯಾರನ್ನೂ ಟೀಕೆ ಮಾಡಲು ಬಂದಿಲ್ಲ. ಟೀಕೆ, ಅಸೂಯೆಯಿಂದ ಪ್ರಯೋಜನವಿಲ್ಲ. ಆದರೆ ಅಸೂಯೆಗೆ ಮದ್ದಿಲ್ಲ ಎನ್ನುವುದು ಅರಿವಿದೆ. ಚಿಕ್ಕವಯಸ್ಸಿನಿಂದಲೇ ಅಧಿಕಾರ ನೋಡಿದವನು ನಾನು. ಜನರಿಗೆ ನುಡಿದಂತೆ ನಡೆದಾಗ, ಜನರ ಬದುಕಿನಲ್ಲಿ ಬದಲಾವಣೆ ತಂದಾಗ, ಜನರ ನೋವಿಗೆ ಪರಿಹಾರ ಒದಗಿಸಿದಾಗ ನಂಬಿಕೆ ಬರುತ್ತದೆ ಎನ್ನುವುದು ಪ್ರಮುಖ ವಿಚಾರ. ಅದಕ್ಕಾಗಿಯೇ ಪ್ರಜಾಸೇವೆ ಇಲಾಖೆ ಪ್ರಾರಂಭಿಸಿ ಎಲ್ಲಾ ಸಚಿವರು ಪ್ರತಿ ತಾಲೂಕಿಗೆ ತಿಂಗಳಲ್ಲಿ ಎರಡು ಬಾರಿ ಭೇಟಿ ನೀಡಿ, ಸಾರ್ವಜನಿಕರ ಅರ್ಜಿ ಸ್ವೀಕರಿಸಿ ಪರಿಹಾರ ನೀಡಬೇಕು. ಹೋಬಳಿ ಮಟ್ಟದಲ್ಲಿಯೂ ಸಭೆ ನಡೆಸಿ ಐದು ಗ್ಯಾರಂಟಿ ಸೇರಿದಂತೆ ಭೂಮಿ ಗ್ಯಾರಂಟಿಯ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಇಲಾಖೆ ಅಸ್ತಿತ್ವಕ್ಕೆ ಬಂದಿದೆ” ಎಂದರು.

ವಿರೋಧಪಕ್ಷ ಬಲಿಷ್ಠವಾಗಿರಬೇಕು

“ನಾವು ಟೀಕೆಗಳಿಗೆ ಹೆದರುವುದಿಲ್ಲ. ವಿರೋಧಪಕ್ಷ ಬಲಿಷ್ಠವಾಗಿರಬೇಕು ಎನ್ನುವುದು ನಮ್ಮೆಲ್ಲರ ಆಶಯ. ನಮ್ಮ ವಿರೋಧ ಪಕ್ಷದ ನಾಯಕರು ವಿರೋಧ ಪಕ್ಷವಾಗಿ ಬಲಿಷ್ಠರಾಗಿ ಸರ್ಕಾರವನ್ನು ಟೀಕಿಸಲಿ. ಸಲಹೆ ಕೊಟ್ಟು ಜನರ ಬದುಕಿನಲ್ಲಿ ಜೊತೆಯಾಗಿರಲಿ” ಎಂದರು.

ರೈತರ ಬದುಕಿನ ಏಳಿಗೆಯನ್ನು ಬಿಜೆಪಿ, ಜೆಡಿಎಸ್ ಸಹಿಸಲಿಲ್ಲ

“ಬೂಸಾ, ಹಿಂಡಿ ಔಷಧಿಗಳು ಎಲ್ಲದರ ಬೆಲೆ ಜಾಸ್ತಿಯಾದ ಹಿನ್ನೆಲೆಯಲ್ಲಿ ರೈತರು ಹೋರಾಟ ಮಾಡಿದಾಗ, ಹಾಲಿನ ಬೆಲೆ ಏರಿಸಲಾಯಿತು. ಬಿಜೆಪಿಯವರು ರೈತರಿಗೆ ಸಹಾಯ ಮಾಡಲು ಹೊರಟಾಗಲು ವಿರೋಧ ಮಾಡುತ್ತಿದ್ದಾರೆ. ರೈತರ ಬದುಕಿಗೆ ಮುಳ್ಳಾಗಿ, ಏಳಿಗೆಯನ್ನು ಬಿಜೆಪಿ, ಜೆಡಿಎಸ್ ಸಹಿಸಲಿಲ್ಲ” ಎಂದರು.

ರೈತರಿಗೆ ಸೂಕ್ತ ಬೆಲೆ ಕೊಡಿಸುವ ಜವಾಬ್ದಾರಿ ನಮ್ಮದು

“ಕಬ್ಬಿನ ಬೆಲೆ ಬಗ್ಗೆ ರೈತರು ಹೋರಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ. ಸಕ್ಕರೆ ಬೆಲೆಯನ್ನು 10 ವರ್ಷಗಳಿಂದ ಏರಿಸಿಲ್ಲ. ಪ್ರತಿ ವರ್ಷ ಮಂಡ್ಯ ಸಕ್ಕರೆ ಕಾರ್ಖಾನೆಗೆ ಅನುದಾನ ನೀಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಯನ್ನು ರೈತರಿಗೆ ವಹಿಸಲು ನಾನು ಸಿದ್ಧನಿದ್ದೇನೆ. ಹಿಂದೆ ನಾನು ಸಹಕಾರ ಸಚಿವನಿದ್ದ ಸಂದರ್ಭದಲ್ಲಿ ಕಾರ್ಖಾನೆಯನ್ನು ರೈತರಿಗೆ ನೀಡಿದಾಗ ಅದನ್ನು ನಡೆಸಲು ಸಾಧ್ಯವಾಗಲಿಲ್ಲ. ಖಾಸಗಿಯವರಿಗೆ ಅದನ್ನು ಮಾರಬೇಕಾದ ಪರಿಸ್ಥಿತಿ ಬಿಜೆಪಿ ಸರ್ಕಾರಕ್ಕೆ ಬಂದಿತು. ನಮ್ಮ ಸರ್ಕಾರ ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು 50 ರೂ. ಹೆಚ್ಚಿಸಿ ಎಂದು ಒತ್ತಾಯಿಸಲಾಗುತ್ತಿದೆ. ರೈತರಿಗೆ ಸೂಕ್ತ ಬೆಲೆ ಕೊಡಿಸುವ ಜವಾಬ್ದಾರಿ ನಮ್ಮದು. ರೈತರಿಗೆ ಸಹಾಯ ಮಾಡಬೇಕು” ಎಂದರು.

ಮಂಡ್ಯ ಸ್ವಾಭಿಮಾನದ ಕೋಟೆ

“ಮಂಡ್ಯ ಕೇವಲ ಜಿಲ್ಲೆಯಲ್ಲ. ಅದೊಂದು ಸ್ವಾಭಿಮಾನದ ಕೋಟೆ. ಯಾರೇನೇ ಮಾಡಿದರೂ ಉತ್ತರ ಕೊಡಲು ನಾವು ಸಿದ್ಧ. ಕಾವೇರಿ ನಮ್ಮ ಜೀವ ನದಿ. ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎನ್ನುವ ನಂಬಿಕೆ ನನ್ನದು. ಚಾಮುಂಡಿ ಬೆಟ್ಟದಲ್ಲಿ ಚುನಾವಣೆಗೂ ಮುನ್ನ ನಮಗೆ ಶಕ್ತಿ ನೀಡುವಂತೆ ನಾನು ಸಿದ್ದರಾಮಯ್ಯನವರು ಕೋರಿ ಪ್ರಾರ್ಥನೆ ಮಾಡಿದ್ದೆವು. ಇಲ್ಲಿನ ತಾಯಂದಿರು 136 ಸ್ಥಾನಗಳನ್ನು ನೀಡಿ ಆಶೀರ್ವಾದ ಮಾಡಿದ್ದಾರೆ ಆರೋಪ, ಟೀಕೆಗಳು ಏನಾಯ್ತು?” ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಸಂಕಷ್ಟದ ಸಂದರ್ಭದಲ್ಲಿ 66 ಟಿಎಂಸಿ ನೀರು ಲಭ್ಯವಾಗಲಿದೆ

“ಮೇಕೆದಾಟು ಅಣೆಕಟ್ಟು ಯೋಜನೆ ಪ್ರಾರಂಭವಾದರೆ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ 66 ಟಿಎಂಸಿ ನೀರು ದೊರಕಿ ತಮಿಳುನಾಡಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಹೋರಾಟ ಮಾಡಿದ ನಂತರ ಸುಪ್ರೀಂಕೋರ್ಟ್ ಕೂಡ ನಮ್ಮ ಚಿಂತನೆಗೆ, ಹೋರಾಟಕ್ಕೆ ಪರವಾಗಿ ತೀರ್ಪು ನೀಡಿದೆ” ಎಂದರು.

ಕಬ್ಬು ಬೆಳೆಗಾರರಿಗೆ ರಕ್ಷಣೆ ನೀಡಲು ನಾವು ಬದ್ಧ

“ಕಬ್ಬಿಗೆ ಸರಿಯಾದ ಬೆಲೆ ನೀಡಬೇಕೆಂದು ಕಳೆದ ವರ್ಷ ರೈತರು ಒತ್ತಾಯಿಸಿದಾಗ ಸರ್ಕಾರದಿಂದ 50, ಕಾರ್ಖಾನೆಗಳಿಂದ 250 ರೂ ಕೊಡಿಸುವ ತೀರ್ಮಾನ ಮಾಡಲಾಯಿತು. ಸಕ್ಕರೆ ಕಾರ್ಖಾನೆ ಮಾಲೀಕರು ಹೆದರಿ ಕಾರ್ಖಾನೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದು, ಬೆಳಗಾವಿಯಲ್ಲಿ ಚರ್ಚೆ ಮಾಡಿ ಅವರ ಪರವಾಗಿ ಹೋರಾಡುತ್ತಿದ್ದೇವೆ. ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದೆ. ಕಬ್ಬು ಬೆಳೆಗಾರರಿಗೆ ರಕ್ಷಣೆ ನೀಡಲು ನಾವು ಬದ್ಧ. ಕೇಂದ್ರ ಸರ್ಕಾರ ದರ ನಿಗದಿ ಮಾಡುವ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಸಕ್ಕರೆ ಬೆಲೆ ಹೆಚ್ಚಾಗಿಲ್ಲ. ಆದರೆ ರೈತರಿಗೆ ಬೆಳೆ ಬೆಳೆಯುವ ವೆಚ್ಚ ಹೆಚ್ಚಾಗಿದೆ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ” ಎಂದರು.

ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ

“ರೈತರ ಪಂಪ್ ಸೆಟ್ ಗೆ 30000 ,ಸಹಾಯಧನ ನೀಡಲಾಗುತ್ತಿದೆ. ಇನ್ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಣೆಯಾಗಿದ್ದು, ವಿದ್ಯುಚ್ಚಕ್ತಿ ಅಭಾವ ಎದುರಾಗುವ ಸಮಸ್ಯೆ ಇದೆ. ಗ್ಯಾರಂಟಿ, ಪಿಂಚಣಿ ಸೇರಿದಂತೆ ಅನೇಕ ಯೋಜನೆಗಳಿಗೆ ಸೇರಿ 1 ಲಕ್ಷ ಕೋಟಿ ವರೆಗೆ ಅನುದಾನ ನೀಡಲಾಗುತ್ತಿದೆ” ಎಂದರು.

“ಗ್ಯಾರಂಟಿ ಯೋಜನೆಗಳ ಮೂಲಕ 1103 ಕೋಟಿ ರೂ. ಅನ್ನು ಮಂಡ್ಯ ಜಿಲ್ಲೆಗೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರು, ಸೇರಿದಂತೆ ಕಟ್ಟಕಡೆಯವರೆಗೆ ಕೆ ಆರ್ ಎಸ್ ನಿಂದ ನೀರು ಒದಗಿಸಲು ಪ್ರಯತ್ನಿಸಿದೆ. ನೂರಾರು ಕೋಟಿ ರೂ. ಗಳನ್ನು ಪ್ರತಿ ಕ್ಷೇತ್ರಕ್ಕೂ ನೀಡಲಾಗಿದೆ. 3 ಸಾವಿರ ಕೋಟಿ ಮಂಡ್ಯ ಜಿಲ್ಲೆಯ ನೀರಾವರಿ ವ್ಯವಸ್ಥೆ ಸರಿ ಮಾಡಲು ನೀಡಲಾಗಿದೆ. ಪಾಂಡವಪುರ, ನಾಗಮಂಗಲ, ಕೆ ಆರ್ ಪೇಟೆ ಕೆರೆಗಳ ನೀರು ತುಂಬಿಸಲು, ಕಾಲುವೆಗಳನ್ನು ದುರಸ್ತಿ ಮಾಡಲು ಸುಮಾರು 806 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಮಂಡ್ಯ ಮದ್ದೂರು ಶ್ರೀರಂಗಪಟ್ಟಣ ಪಾಂಡವಪುರ ತಾಲೂಕುಗಳಲ್ಲಿ ಸುಮಾರು 224 ಕೋಟಿ ಆಧುನೀಕರಣಕ್ಕೆ, ಹಂಪಾಪುರ ನಾಗಮಂಗಲದಲ್ಲಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ 420 ಕೋಟಿ ,ನೀಡಲಾಗಿದೆ” ಎಂದರು.

“ಮಂಡ್ಯ ಹಾಲು ಒಕ್ಕೂಟ ನಂದಿನಿ ಐಸ್ ಕ್ರೀಮ್ ಫ್ಯಾಕ್ಟರಿ ಸ್ಥಾಪನೆ ಮಾಡುತ್ತಿದ್ದು, 14 ಲಕ್ಷ ಲೀ. ಉತ್ಪಾದನೆಯಾಗುತ್ತಿದೆ. ಅದಕ್ಕೂ ಅನುಮತಿ ನೀಡಲಾಗುತ್ತಿದೆ. ಗ್ಯಾರಂಟಿ ಗೆ 50 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ನಂದಿನಿ ನೀರು ಉತ್ಪಾದನಾ ಘಟಕಕ್ಕೂ ಅನುಮತಿ ನೀಡಲಾಗುತ್ತಿದೆ. ಭೂ ಗ್ಯಾರಂಟಿ ಯೋಜನೆ ಅಡಿಯಲ್ಲಿ ಖಾತೆ , ಪೋಡಿ, ಇ ಖಾತೆ, ಮಾಡಿ ಆಸ್ತಿ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದರು.

“ಜನತಾ ದಳ ಬಿಜೆಪಿಗೆ ಇಂಥ ಯಾವ ಕಾರ್ಯಕ್ರಮ ನೀಡಲು ಆಗಲಿಲ್ಲ. ಉಳುವವನಿಗೆ ಭೂಮಿ, ಸೂರಿಲ್ಲದವರಿಗೆ ನಿವೇಶನ, ಬಡವರಿಗೆ ಗ್ಯಾರಂಟಿ ಕೊಡಲು ಆಗಲಿಲ್ಲ. ನಮ್ಮ ಕಾಮಗಾರಿಗಳು ಕೇವಲ ಸಿಮೆಂಟ್ , ಮಣ್ಣು ಕಟ್ಟಡಗಳಲ್ಲ. ಜನರ ಬದುಕು ಕಟ್ಟುವ ಸಾಧನವಾಗಬೇಕು. ದೃಷ್ಟಿಯಿಂದ ಮಂಡ್ಯ ಮಾತ್ರವಲ್ಲದೆ ಪ್ರತಿಯೊಂದು ತಾಲ್ಲೂಕಿನಲ್ಲಿ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ” ಎಂದರು.

“ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಯೋಚಿಸುತ್ತಾನೆ. ಆದರೆ ಮುತ್ಸದ್ದಿ ಮುಂದಿನ ಪೀಳಿಗೆ ಬಗ್ಗೆ ಚಿಂತನೆ ಮಾಡುತ್ತಾನೆ. ಮಂಡ್ಯ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲು ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ”ಎಂದರು.

ಜನರು ಕೊಟ್ಟ ಅಧಿಕಾರವನ್ನು ಕೆಟ್ಟದಕ್ಕೆ ಬಳಸುವುದಿಲ್ಲ

“ಜನರು ಕೊಟ್ಟ ಅಧಿಕಾರವನ್ನು ಕೆಟ್ಟದಕ್ಕೆ ಬಳಸುವುದಿಲ್ಲ ಅದನ್ನು ಬೇರೆಯವರಿಗೆ ಬಿಟ್ಟಿದ್ದೇನೆ. ಅವರಿಗೆ ಶುಭವಾಗಲಿ. ಅವರಿರುವವರೆಗೂ ನಮಗೆ ಒಳ್ಳೆಯದೇ. ನಮ್ಮ ಶಾಸಕರು ಸರಿಯಾದ ದಾರಿಯಲ್ಲಿ ನಡೆಯಲು ಅವರು ಮಾರ್ಗದರ್ಶಕರಾಗಿದ್ದಾರೆ. ಅವರಿಗೆ ಶುಭವಾಗಲಿ. ನಾನುಂಟು, ನೀವುಂಟು. ನನಗೂ ನಿಮಗೂ ಭಕ್ತ ಭಗವಂತನ ಸಂಬಂಧ. ನಾನು ಕೃಷಿ ಕುಟುಂಬದವನು. ರೈತರ ಸಂಕಟ ಏನು ಎಂದು ತಿಳಿದಿದೆ. 2028-29 ಸತ್ಯದ ಪರೀಕ್ಷೆಯ ಕಾಲ. ಆ ಕಾಲಕ್ಕೆ ಕೈಜೋಡಿಸಬೇಕು. ಮುನಿಸಿಪಾಲಿಟಿ ಚುನಾವಣೆಯಲ್ಲೂ ಕೈ ಹಿಡಿಯಬೇಕು. ಜಿಲ್ಲೆಯ ಮುಖಾಂತರ ರಾಜ್ಯದ ಜನರ ಸೇವೆಗಳು ತುಂಬ ದೃಷ್ಟಿಯಿಂದ ಎರಡು ದೊಡ್ಡ ಇಲಾಖೆಗಳ ಹೊಣೆಯನ್ನು ಮಂಡ್ಯ ಜಿಲ್ಲೆಯ ನಾಯಕರಿಗೆ ನೀಡಲಾಗಿದೆ. ನನ್ನ ಕಣ್ಣು ನಿಮ್ಮ ಬದುಕಿನ ಮೇಲೆ ನಿಂತಿದೆ. ಹೃದಯ ನಿಮ್ಮ ಭಾವನೆ ಅರ್ಥ ಮಾಡಿಕೊಳ್ಳುವ ಶಕ್ತಿಯ ಮೇಲೆ ನಿಂತಿದೆ” ಎಂದರು.

“ಪ್ರಜಾಸೇವೆ ಆಂದೋಲದದ ಮೂಲಕ ಸಮಸ್ಯೆಗಳನ್ನು ಪ್ರತಿಯೊಬ್ಬರ ಸಮಸ್ಯೆ ಬಗೆಹರಿಸಲಾಗುವುದು.ಅದಕ್ಕೆ ನಾನು ಬದ್ಧ. ದೇವರು ವರ, ಅಥವಾ ಶಾಪ ಕೊಡುವುದಿಲ್ಲ ಅವಕಾಶ ಮಾತ್ರ ನೀಡುತ್ತಾನೆ. ನನಗೆ ಕೊಟ್ಟಿರುವ ಈ ಅವಕಾಶದಲ್ಲಿ ನಿಮ್ಮ ಬದುಕಿಗೆ ಶಕ್ತಿ, ತುಂಬಲು ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾ ಶಾಸಕರು, ಹಿರಿಯ ನಾಯಕರು, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಪ್ರತಿಯೊಬ್ಬರೂ ಒಟ್ಟಾಗಿ ದುಡಿಯುತ್ತಿದ್ದಾರೆ” ಎಂದರು.

ನೇಗಿಲ ಯೋಗಿ ಕಾರ್ಯಕ್ರಮ

“ಇಂದು ಇಂದಿರಾ ಭವನದ ಪೂಜೆ ಮಾಡಿದ್ದೇನೆ. ನಿಮಗೆ ನನ್ನ ಮೇಲೆ ಅಪಾರ ನಂಬಿಕೆ ಇದೆ. ಇದು ಸದಾ ಇರುತ್ತದೆ ಎಂಬ ನಂಬಿಕೆ ಇದೆ. ಬಡವರಿಗೆ ಟ್ರ್ಯಾಕ್ಟರ್ ನಿಂದ ಉಚಿತವಾಗಿ ಮೂರು ಎಕರೆ ಹೊಲ ಉಳುಮೆ ಮಾಡಿಸುವ ನೇಗಿಲ ಯೋಗಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ.ಪ್ರತಿ ಊರಿಗೂ ಅಭಿವೃದ್ಧಿ ತಲುಪಿಸುತ್ತೇವೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸರ್ಕಾರದ ಐದು ಗ್ಯಾರಂಟಿ ತಲುಪುತ್ತಿದೆ ಎನ್ನುವುದು ಸಮಾಧಾನ ತಂದಿದೆ” ಎಂದರು.

“ಮಾದೇಗೌಡ, ಎಸ್ ಎಂ.ಕೃಷ್ಣ, ಶಂಕರೇಗೌಡರು ಇಲ್ಲದಿದ್ದರೂ ಅವರು ಸಾಕ್ಷಿ ಗುಡ್ಡೆ ಬಿಟ್ಟುಹೋಗಿದ್ದಾರೆ. ದಸರಾ ಸುಂದರವಾಗಿ ಆಯೋಜಿಸಿದ್ದೆವು. ದಸರಾ ದೀಪಾಲಂಕಾರ ವಿಶಿಷ್ಟವಾಗಿ ಮೂಡಿಬಂದು ರಾಜ್ಯ, ರಾಷ್ಟ್ರಕ್ಕೆ ಸಂದೇಶ ತಲುಪಿದೆ. ಎಲ್ಲಾ ಶಾಸಕರು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಒಟ್ಟಾಗಿ ಕೆಲ್ಸ ಮಾಡೋಣ. ಪ್ರತಿ ಊರಿನಲ್ಲಿ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಿ ಸಾಂಸ್ಕೃತಿಕವಾಗಿ ಬಲಪಡಿಸಿ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಅನಾವರಣವಾಗಬೇಕು ಎನ್ನುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖರಾಗಿದ್ದೇವೆ” ಎಂದರು.

ಉತ್ತಮ ಆಡಳಿತದ ಪ್ರತೀಕ

“ಇಂದಿರಾ ಭವನ ದೇವಸ್ಥಾನವಿದ್ದಂತೆ. ಸಣ್ಣ ಅಹಿತಕರ ಘಟನೆಯೂ ರಾಜ್ಯದಲ್ಲಿ ನಡೆಯದಿರುವುದು ಉತ್ತಮ ಆಡಳಿತದ ಪ್ರತೀಕ. ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು ಎಂಬ ತತ್ವದಲ್ಲಿ ಜನ ಸೇವೆ ಮಾಡಲು ಸಿದ್ಧರಾಗಿದ್ದೇವೆ” ಎಂದರು.


Share

You cannot copy content of this page