ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣದ ಪರವಾಗಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗೆ ಕರಡು ಮೀಸಲು ಅಧಿಸೂಚನೆ ಹೊರಡಿಸಿದೆ. ಬರುವ ಜನವರಿಯೊಳಗೆ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ನಡೆದೇ ನಡೆಯುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.19ರವರೆಗೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಬಂದಿದ್ದು, ಅಧಿಕಾರಿಗಳು ನಿಯಮಾನುಸಾರ ಪರಿಶೀಲನೆ ಮಾಡುತ್ತಿದ್ದು, ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.
ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ತರುವಾಯ ರಾಜ್ಯ ಚುನಾವಣೆ ಆಯೋಗ, ಕೇಂದ್ರ ಚುನಾವಣೆ ಆಯೋಗದಿಂದ ಮತದಾರರ ಪಟ್ಟಿ ಪಡೆದು ಅಥವಾ ತನ್ನಲ್ಲಿರುವ ಮತದಾರರ ಪಟ್ಟಿಯನ್ನೇ ಪರಿಷ್ಕರಿಸಿ ಚುನಾವಣೆ ನಡೆಸುವ ಕುರಿತಂತೆ ಕ್ರಮ ವಹಿಸಲಿದೆ ಎಂದರು.
ಬಹುತೇಕ ಜನವರಿ ಮೊದಲ ಅಥವಾ 2ನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಗಳ ತರುವಾಯ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
