ಸಮಗ್ರ ಸುದ್ದಿ

ಆಸ್ತಿ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ಸಾಧಿಸಿ – ಜಿ.ಜಗದೀಶ್

Share

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ
ವಾರ್ಡ್‌ ವಾರು ಆಸ್ತಿ ತೆರಿಗೆ ಸುಸ್ತಿದಾರರ ಪಟ್ಟಿಯನ್ನು ಸಿದ್ಧಪಡಿಸಿ, ಮುಂದಿನ 15 ದಿನಗಳೊಳಗೆ ಶೇ.100ರಷ್ಟು ಸುಸ್ತಿದಾರರಿಗೆ ಬೇಡಿಕೆ ನೋಟಿಸ್ (Demand Notice) ಜಾರಿಗೊಳಿಸಬೇಕು. ಯಾವುದೇ ಸುಸ್ತಿದಾರರಿಗೂ ನೋಟಿಸ್ ನೀಡದೆ ಬಾಕಿ ಉಳಿಸಬಾರದು ಎಂದು
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಿ.ಜಗದೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಾಣಿಜ್ಯ ಮತ್ತು ವಸತಿ ಬಳಕೆಯ ಸ್ವತ್ತುಗಳ ಪರಿಶೀಲನೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿ ಹಾಗೂ ಕಂದಾಯ ವಿಭಾಗದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲಿಸುವ ಉದ್ದೇಶದಿಂದ ನಿನ್ನೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿರುವ ವಸತಿ ಸ್ವತ್ತುಗಳನ್ನು ಗುರುತಿಸಲು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಸ್ವತ್ತಿನ ನೈಜ ಬಳಕೆಗೆ ಅನುಗುಣವಾಗಿ ತೆರಿಗೆ ನಿಗದಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ, ತೆರಿಗೆ ಪರಿಷ್ಕರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಷ್ಕೃತ ತೆರಿಗೆಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ತೆರಿಗೆ ಪಾವತಿಸದ ಸ್ವತ್ತುಗಳಿಗೆ ಬೀಗಮುದ್ರೆ

ಆಸ್ತಿ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ಸಾಧಿಸಲು ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ನೋಟಿಸ್ ಜಾರಿಗೊಳಿಸಿದರೂ ತೆರಿಗೆ ಪಾವತಿಸದ ಸ್ವತ್ತುಗಳ ವಿರುದ್ಧ ನಿಯಮಾನುಸಾರ ಬೀಗಮುದ್ರೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮನೆಮನೆಗೆ ಭೇಟಿ ನೀಡಿ ತೆರಿಗೆ ಪಾವತಿಗೆ ಮನವೊಲಿಸಿ

ಸುಸ್ತಿದಾರರ ಪಟ್ಟಿಯ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸ್ವತ್ತಿನ ಮಾಲೀಕರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ, ಬಾಕಿ ತೆರಿಗೆಯನ್ನು ಪಾವತಿಸುವಂತೆ ಮನವೊಲಿಸಬೇಕು. ತೆರಿಗೆ ಪಾವತಿಯ ಮಹತ್ವದ ಕುರಿತು ಅರಿವು ಮೂಡಿಸಿ ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದರು.

ತೆರಿಗೆ ವಸೂಲಾತಿಯಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಅವಕಾಶವಿಲ್ಲ

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕೃತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಆಸ್ತಿ ತೆರಿಗೆ ವಸೂಲಾತಿ ಮಾಡುವಂತಿಲ್ಲ. ಸಾರ್ವಜನಿಕರು ಅಧಿಕೃತ ಮಾರ್ಗಗಳ ಮೂಲಕವೇ ತೆರಿಗೆ ಪಾವತಿಸಬೇಕು. ತೆರಿಗೆ ವಂಚನೆ ಹಾಗೂ ಅಕ್ರಮಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್.ಜಿ ರವರು ಎಚ್ಚರಿಕೆ ನೀಡಿದರು.

ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕ ಕಡತ ನಿರ್ವಹಣೆ

ಪ್ರತಿ ವಾಣಿಜ್ಯ ಕಟ್ಟಡಕ್ಕೂ ಸಂಬಂಧಿಸಿದ ಆಸ್ತಿ ತೆರಿಗೆ ವಿವರಗಳು, ತೆರಿಗೆ ಪರಿಷ್ಕರಣೆ ಹಾಗೂ ಪಾವತಿ ಮಾಹಿತಿಯನ್ನು ಒಳಗೊಂಡ ಪ್ರತ್ಯೇಕ ಕಡತಗಳನ್ನು ನಿರ್ವಹಿಸಬೇಕು. ಇದರಿಂದ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪರಿಣಾಮಕಾರಿತ್ವ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಖಾತಾ ಮೇಳ ಆಯೋಜನೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಂದಾಯ ಸೇವೆಗಳು ಸುಲಭವಾಗಿ ಮತ್ತು ತ್ವರಿತವಾಗಿ ಲಭ್ಯವಾಗುವಂತೆ ನಾಳೆಯಿಂದ ಪುನಃ ಖಾತಾ ಮೇಳವನ್ನು ಆಯೋಜಿಸಬೇಕು. ಸಾರ್ವಜನಿಕರ ಖಾತಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಂದಾಯ ಅಪರ ಆಯುಕ್ತರಾದ ಶ್ರೀಮತಿ ಲಕ್ಷ್ಮಮ್ಮ, ಜಂಟಿ ಆಯುಕ್ತರುಗಳಾದ ಶ್ರೀಮತಿ ಸಪ್ತಶ್ರೀ.ಬಿ.ಕೆ ಹಾಗೂ ಹೇಮಂತ್ ಶರಣ್, ಕಂದಾಯ ವಿಭಾಗದ ಉಪ ಆಯುಕ್ತರುಗಳಾದ ಅಬ್ದುಲ್ ರಬ್ ಹಾಗೂ ಶ್ರೀನಿವಾಸ್, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


Share

You cannot copy content of this page