ಹಿರಿಯೂರು: ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಕಲ್ಪಿಸುವಂತೆ ಈ ಹಿಂದೆ ನಮ್ಮ ಸರ್ಕಾರ ಮೂಲಕ ಕೇಂದ್ರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಇದು ನೋವಿನ ಸಂಗತಿ. ಚುನಾವಣಾ ನೀತಿಸಂಹಿತೆ ಇಲ್ಲದೇ ಇದ್ದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸಿ, ಕಾನೂನು ತಜ್ಞರ ಸಲಹೆ ಪಡೆದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಹಿರಿಯೂರಿನಲ್ಲಿ ಒಕ್ಕಲಿಗರ ಭವನ ಹಾಗೂ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿ ಹಾಗೂ ನಂತರ ನಡೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ಕಳೆದ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಕಾಡುಗೊಲ್ಲರ ಎಸ್ಟಿ ಪ್ರಮಾಣಪತ್ರ ನನ್ನ ಜೇಬಿನಲ್ಲಿದೆ. ನಾನು ಮೀಸಲಾತಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಯಿತೇ? ನಾವು ಜನರಿಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.
“ಗೊಲ್ಲ ಸಮುದಾಯದ ಮುಖಂಡರು ತಮ್ಮನ್ನು ಭೇಟಿಯಾಗಿ ಮೀಸಲಾತಿ ವಿಚಾರ ಪ್ರಸ್ತಾಪಿಸಿದ್ದಾರೆ. ಗೊಲ್ಲರು, ಕಾಡುಗೊಲ್ಲರು, ಒಕ್ಕಲಿಗರು, ವೀರಶೈವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುವುದು ಸರ್ಕಾರದ ಆಶಯ. ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ತತ್ವದಡಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದರು.
ಹಿರಿಯೂರು ಕ್ಷೇತ್ರದಲ್ಲಿ 40 ಸಾವಿರ ಜನ ಕಾಡುಗೊಲ್ಲರು ಇದ್ದಾರೆ. ಅಕ್ಕಪಕ್ಕದ ಕ್ಷೇತ್ರದಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದವರು ಇದ್ದಾರೆ. ಇವರಿಗೆ ಕೇಂದ್ರ ಬಿಜೆಪಿ ಸರ್ಕಾರ ಎಸ್ ಟಿ ಮೀಸಲಾತಿ ನೀಡದೆ ದ್ರೋಹ ಎಸಗಿದೆ” ಎಂದು ಹೇಳಿದರು.
“ಸಿದ್ದರಾಮಯ್ಯ ಆವರ ಕಾಲದಿಂದಲೂ ಕಾಡುಗೊಲ್ಲರ ಕುಲಶಾಸ್ತ್ರೀಯ ಅಧ್ಯಯನವನ್ನ ನಾವು ಕೇಂದ್ರ ಸರ್ಕಾರಕ್ಕೆ 4-5 ಬಾರಿ ಸಲ್ಲಿಕೆ ಮಾಡಿದ್ದೇವೆ. ಆದರೂ ಅವರು ಇದನ್ನು ತಿರಸ್ಕಾರ ಮಾಡಿಕೊಂಡೆ ಬಂದು ಅನ್ಯಾಯ ಎಸಗಲಾಗಿದೆ. ರಾಜಕೀಯ ಶೈಕ್ಷಣಿಕವಾಗಿ ಮೋಸ ಮಾಡಲಾಗಿದೆ” ಹೇಳಿದರು.
ಹಿರಿಯೂರಿನ 10 ಸಾವಿರ ಬಡ ಕುಟುಂಬಗಳಿಗೆ ನಿವೇಶನ
“ಹಿರಿಯೂರು ಕ್ಷೇತ್ರದಲ್ಲಿ ಸುಮಾರು 10 ಸಾವಿರ ಬಡ ಕುಟುಂಬಗಳಿಗೆ ನಿವೇಶನ ಹಂಚಲು ಜಾಗ ಹುಡುಕಲಾಗುತ್ತಿದೆ. ಈ ವರ್ಷ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಸಚಿವರಾದ ಪರಮೇಶ್ವರ್ ಮತ್ತು ಜಮೀರ್ ಅಹಮದ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಬಡವರಿಗೆ ಮನೆ ಹಾಗೂ ನಿವೇಶನ ಒದಗಿಸುವ ಮೂಲಕ ಅವರ ಬದುಕಿಗೆ ಭದ್ರತೆ ಕಲ್ಪಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಿದರು.
ಒಕ್ಕಲಿಗರ ಭವನಕ್ಕೆ ₹5 ಕೋಟಿ, ಯುಜಿಡಿಗೆ ₹100 ಕೋಟಿ
“ಹಿರಿಯೂರಿನ ಅಭಿವೃದ್ಧಿಗೆ ಸುಮಾರು ₹2,500 ಕೋಟಿ ಅನುದಾನ ತಂದಿದ್ದೇವೆ. ಒಕ್ಕಲಿಗರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹5 ಕೋಟಿ ಅನುದಾನ ಬಿಡುಗಡೆಗೆ ಆದೇಶ ನೀಡಲಾಗಿದೆ. ಒಟ್ಟು ₹12 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣವಾಗಲಿದ್ದು, ಮಾಜಿ ಶಾಸಕ ಸುಧಾಕರ್ ಅವರು ಈ ಹಿಂದೆ ₹1.5 ಕೋಟಿ ಕೊಡುಗೆ ನೀಡಿದ್ದರು. ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದವರು ಸಹಕರಿಸಿ ಭವ್ಯ ಭವನ ನಿರ್ಮಿಸಬೇಕು” ಎಂದು ಮನವಿ ಮಾಡಿದರು.
“ಹಿರಿಯೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು ₹100 ಕೋಟಿ ವೆಚ್ಚದ ಯುಜಿಡಿ ಯೋಜನೆಗೆ ಚಾಲನೆ ನೀಡಲಾಗಿದೆ” ಎಂದರು.
ಯುವಕರಿಗೆ ಸ್ವಯಂ ಉದ್ಯೋಗಕ್ಕೆ ನೆರವು
“ಬಡವರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಚಿವ ಮುನಿಯಪ್ಪ ಅವರ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ. ಯುವಕರಿಗೆ ಖಾಸಗಿ ಉದ್ಯೋಗ ದೊರಕಿಸುವುದರ ಜತೆಗೆ ಸ್ವಂತ ಉದ್ಯೋಗ ಆರಂಭಿಸಲು, ವಾಹನ ಖರೀದಿಸಲು, ಬೋರ್ವೆಲ್ ಕೊರೆಸಲು ಹಾಗೂ ಅಂಗಡಿ ವ್ಯಾಪಾರ ನಡೆಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ” ಎಂದರು.
ಆರನೇ ಗ್ಯಾರಂಟಿಯಾಗಿ ಶಾಶ್ವತ ಭೂಮಿ ದಾಖಲೆ
“ಐದು ಗ್ಯಾರಂಟಿಗಳ ಜತೆಗೆ ಜನರಿಗೆ ಆರನೇ ಗ್ಯಾರಂಟಿಯಾಗಿ ಶಾಶ್ವತ ಭೂಮಿ ದಾಖಲೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಆಸ್ತಿ ದಾಖಲೆಗಳಿಗೆ ಪೋಡಿ, ಇ-ಖಾತಾ, ಛಾಯಾಚಿತ್ರ ಹಾಗೂ ಅಳತೆ ಮಾಡಿಸಿ ಜನರ ಆಸ್ತಿ ಹಕ್ಕುಗಳನ್ನು ದಾಖಲಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ” ಎಂದರು.
ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್ ಸರ್ಕಾರ
“ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಾವಿಬ್ಬರೂ ಒಂದಾಗಿದ್ದೇವೆ ಎಂದು ಹೇಳಿಕೊಂಡು ಚುನಾವಣೆ ಎದುರಿಸಲು ಬರುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಹಿರಿಯೂರು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಜನರು ಅವರನ್ನು ಪ್ರಶ್ನಿಸಬೇಕು. ಹಿಂದೆ ಕಾಂಗ್ರೆಸ್ ಸರ್ಕಾರವೇ 10 ಎಚ್ ಪಿ ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದು, ಉಳುವವನಿಗೆ ಭೂಮಿ ನೀಡಿದೆ. ರೈತರ ಬದುಕಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರವೂ ಮುಂದುವರಿಸುತ್ತಿದೆ” ಎಂದು ಹೇಳಿದರು.
“ರೈತರಿಗೆ ಪ್ರತಿದಿನ 6ರಿಂದ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಸರ್ಕಾರ ಸುಮಾರು ₹30 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಈ ವರ್ಷ ವಿದ್ಯುತ್ ಪೂರೈಕೆಯ ವೆಚ್ಚದಲ್ಲಿ ₹10 ಸಾವಿರ ಕೋಟಿ ಹೆಚ್ಚಳವಾಗಿದೆ. ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದರೂ ರೈತರಿಗೆ ನೆರವಾಗಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಕೇಂದ್ರದಿಂದ ನಿರೀಕ್ಷಿತ ನೆರವು ದೊರೆಯದಿದ್ದರೂ ಜನರ ಹಿತ ಕಾಪಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರದಿಂದ ಕಾಡುಗೊಲ್ಲ ಸಮುದಾಯಕ್ಕೆ ಅನ್ಯಾಯ
ಕಾರ್ಯಕ್ರಮದ ನಂತರ ಮಾದ್ಯಮಗೋಷ್ಠಿ ಉದ್ದೇಶಿಸಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆ ಬಗ್ಗೆ ಕೇಳಿದಾಗ, “ನಾವು ಈ ಚುನಾವಣೆಗಳನ್ನು ನಡೆಸಲು ಬದ್ದರಿದ್ದೇವೆ. ಯಾವ ಮತಪಟ್ಟಿಯನ್ನು ಬಳಸಿಕೊಂಡು ಚುನಾವಣೆ ಮಾಡಬೇಕು ಎಂದು ತೀರ್ಮಾನ ಮಾಡಲಾಗುವುದು” ಎಂದರು.
ಹಿರಿಯೂರಿನ ಶೇ. 72 ರಷ್ಟು ಜನರಿಂದ ಕಾಂಗ್ರೆಸ್ ಗೆ ಬೆಂಬಲ
ಸುಹಾಸ್ ಸುಧಾಕರ್ ಅವರ ವಿರುದ್ದ ಹಿರಿಯೂರು ಕ್ಷೇತ್ರದ ಜನರ ಅಭಿಪ್ರಾಯವಿದೆ ಎಂದು ಕೇಳಿದಾಗ, “ಇದೆಲ್ಲವೂ ವಿರೋಧ ಪಕ್ಷದವರ ಮಾತುಗಳು. ಹಿರಿಯೂರಿನ ಶೇ 72 ರಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಗತ್ಯಬಿದ್ದರೆ ನಾನು ಸಮೀಕ್ಷೆ ಬಿಡುಗಡೆ ಮಾಡುತ್ತೇನೆ. ನಾಲ್ಕು ಬಾರಿ ಪ್ರಬಲವಾದ ಸಮೀಕ್ಷೆ ಮಾಡಿಸಲಾಗಿದೆ. ಹಿರಿಯೂರಿನ ಜನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ಹಾಕಲಿದ್ದಾರೆ” ಎಂದು ಹೇಳಿದರು.
ಹಿರಿಯೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿರುವ ಕೆಲಸಗಳಿಗೆ ಅನುಮತಿಗಳೇ ಇಲ್ಲ ಎನ್ನುವ ಸಂಸದ ಗೋವಿಂದ ಕಾರಜೋಳ ಅವರ ಆಕ್ಷೇಪದ ಬಗ್ಗೆ ಕೇಳಿದಾಗ, “ಕೊಟ್ಟ ಮಾತು ಉಳಿಸಿಕೊಳ್ಳಲು ಅವರಿಗೆ ಆಗಿಲ್ಲ. ಮುನಿಯಪ್ಪ ಅವರೊಟ್ಟಿಗೆ ಅವರು ಚರ್ಚೆಗೆ ತಯಾರಿದ್ದರೆ ಚರ್ಚೆಯನ್ನು ಏರ್ಪಾಡು ಮಾಡಲಾಗುವುದು. ಮೊದಲು ಅವರಿಗೆ 5,400 ಕೋಟಿಯನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಸಲು ಹೇಳಿ” ಎಂದರು.
