ಸಮಗ್ರ ಸುದ್ದಿ

ನ.14 ಮಕ್ಕಳ ದಿನಾಚರಣೆ, ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನ| ನ.13ರಿಂದ 30ರವರೆಗೆ “ಮಕ್ಕಳ ಗ್ರಾಮಸಭೆ’’ ನಡೆಸಲು ಈಶ್ವರ ಖಂಡ್ರೆ ಸೂಚನೆ

Share

ಬೆಂಗಳೂರು: ದೇಶದ ಪ್ರಥಮ ಪ್ರಧಾನಿ ಪಂಡಿತ್ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸುವ ಸಂದರ್ಭದಲ್ಲಿ, ಇಂದಿನ ಮಕ್ಕಳಿಗೆ ಗ್ರಾಮ ಪಂಚಾಯತಿಯ ಪರಿಕಲ್ಪನೆ ಪರಿಚಯಿಸಲು ಮಕ್ಕಳ ಗ್ರಾಮ ಸಭೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, 2006ರಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ “ಮಕ್ಕಳ ಗ್ರಾಮಸಭೆ’’ ನಡೆಸುವಂತೆ ಸುತ್ತೋಲೆ ಹೊರಡಿಸಿದ್ದರೂ, ಕೆಲವು ಪಂಚಾಯತಿಯಲ್ಲಿ ಮಾತ್ರ ಮಕ್ಕಳ ಗ್ರಾಮ ಸಭೆ ನಡೆಯುತ್ತಿದೆ. ಈ ವರ್ಷದಿಂದ ಕಡ್ಡಾಯವಾಗಿ ಎಲ್ಲ ಗ್ರಾಮ ಪಂಚಾಯತಿಯಲ್ಲೂ ಕಾರ್ಯಕ್ರಮ ಆಯೋಜಿಸಿ, ಇಂದಿನ ಮಕ್ಕಳಿಗೆ ಗ್ರಾಮ ಪಂಚಾಯತಿಯ ಕಾರ್ಯವೈಖರಿಯ ಪರಿಚಯ ಮಾಡಿಸುವುದರ ಜೊತೆಗೆ ಮಕ್ಕಳ ಹಕ್ಕುಗಳು, ಪೌಷ್ಟಿಕಾಂಶ, ಶಿಕ್ಷಣ, ಆರೋಗ್ಯದ ಕುರಿತಂತೆಯೂ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ್ದಾರೆ.

ಬೆಂಗಳೂರಿನ ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಹಳ್ಳಿ ಹೇಗಿರುತ್ತದೆ ಎಂಬ ಕಲ್ಪನೆಯೂ ಇಲ್ಲ. ಹೀಗಾಗಿ ಬೆಂಗಳೂರು ಜಕ್ಕೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿರುವ ಪಾರಂಪರಿಕ ಮಾದರಿ ಗ್ರಾಮದಲ್ಲಿ ನ.13 ರಿಂದ 30ರವರೆಗೆ ಮಕ್ಕಳ ಗ್ರಾಮಸಭೆ ಆಯೋಜಿಸಿ, ವಿವಿಧ ಶಾಲೆಯ ಮಕ್ಕಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆಯೂ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಗ್ರಾಮಸಭೆಯ ಮೂಲಕ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಜಾಗತಿಕ ತಾಪಮಾನ ಏರಿಕೆಯ ಪ್ರಸಕ್ತ ಕಾಲಘಟ್ಟದಲ್ಲಿ ನೈರ್ಮಲ್ಯ, ಜಲ ಸಂರಕ್ಷಣೆ, ಕೆರೆ ಸಂರಕ್ಷಣೆ, ಪರಿಸರ ಸಂರಕ್ಷಣೆಯ ಮಹತ್ವವನ್ನೂ ತಿಳಿಸಲು ಈಶ್ವರ ಖಂಡ್ರೆ ಸೂಚಿಸಿದ್ದಾರೆ.


Share

You cannot copy content of this page