ಸಮಗ್ರ ಸುದ್ದಿ

WTM London 2026ರಲ್ಲಿ ಕರ್ನಾಟಕ ಪೆವಿಲಿಯನ್‌ಗೆ ಉತ್ತಮ B2B ಸ್ಪಂದನೆ; ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಮೆಚ್ಚುಗೆ

Share

ಲಂಡನ್:World Travel Market (WTM) London 2026*ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಪೆವಿಲಿಯನ್‌ಗೆ ಅಂತರರಾಷ್ಟ್ರೀಯ ಟ್ರಾವೆಲ್ ಆಪರೇಟರ್‌ಗಳು, ಪ್ರವಾಸೋದ್ಯಮ ಸಂಸ್ಥೆಗಳು ಮತ್ತು ವಿವಿಧ ಮಾರುಕಟ್ಟೆ ಪಾಲುದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕರ್ನಾಟಕವನ್ನು ಒಳಗೊಂಡ ಹೊಸ ಪ್ರವಾಸಿ ಪ್ಯಾಕೇಜ್‌ಗಳು ಮತ್ತು ಸಹಭಾಗಿತ್ವಗಳನ್ನು ರೂಪಿಸುವ ಕುರಿತು B2B ಸಭೆಗಳು ನಡೆಯುತ್ತಿವೆ.

ಕರ್ನಾಟಕ ಪೆವಿಲಿಯನ್ ಅನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಸಂಸದೆ ಶ್ರೀಮತಿ ಸುಧಾ ಮೂರ್ತಿ ಉದ್ಘಾಟಿಸಿದರು.

ಕರ್ನಾಟಕ ನಿಯೋಗದೊಂದಿಗೆ ಸಂವಾದ ನಡೆಸಿದ ಗಜೇಂದ್ರ ಸಿಂಗ್ ಶೇಖಾವತ್ ಅವರು, ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರಚಾರಕ್ಕೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟಗಳು, ಕರಾವಳಿ ತಾಣಗಳು, ಪ್ರಕೃತಿ, ಸ್ಥಳೀಯ ಸಂಸ್ಕೃತಿ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಜೋಡಿಸುವ ನಿಟ್ಟಿನ ಪ್ರಯತ್ನಗಳು ಗಮನಾರ್ಹವೆಂದು ಅಭಿಪ್ರಾಯಪಟ್ಟರು.

WTM ವೇದಿಕೆಯಲ್ಲಿ ಕರ್ನಾಟಕವು ಪರಂಪರೆ, ವನ್ಯಜೀವಿ, ಕರಾವಳಿ, ಮಲೆನಾಡು, ಕಾಫಿ ಪ್ರವಾಸೋದ್ಯಮ, ವೆಲ್‌ನೆಸ್, ಐಷಾರಾಮಿ ಮತ್ತು ವ್ಯವಹಾರ ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ವೈವಿಧ್ಯಮಯ ಪ್ರವಾಸಿ ಅನುಭವಗಳನ್ನು ಪರಿಚಯಿಸುತ್ತಿದೆ.

ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಕಾಫಿ ಅನುಭವಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಒತ್ತು

ವಿಶೇಷವಾಗಿ ಚಿಕ್ಕಮಗಳೂರು ಮತ್ತು ಕೊಡಗು ಪ್ರದೇಶಗಳ ಕಾಫಿ ತೋಟಗಳು, ತೋಟ ವಾಸ್ತವ್ಯ, ಸ್ಥಳೀಯ ಆಹಾರ, ಪ್ರಕೃತಿ ಮತ್ತು ಅನುಭವಾಧಾರಿತ ಪ್ರವಾಸೋದ್ಯಮವನ್ನು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಪ್ರತ್ಯೇಕ ಪ್ರವಾಸಿ ಉತ್ಪನ್ನವಾಗಿ ಪರಿಚಯಿಸಲಾಗುತ್ತಿದೆ. ಅದೇ ರೀತಿ ಕರಾವಳಿ ಕರ್ನಾಟಕವನ್ನು ಬೀಚ್‌ಗಳು, ಪರಂಪರೆ, ಆಹಾರ ಮತ್ತು ಹೊಸ ಪ್ರವಾಸಿ ಸರ್ಕ್ಯೂಟ್‌ಗಳ ಮೂಲಕ ಮಾರುಕಟ್ಟೆಗಿಳಿಸಲು ಒತ್ತು ನೀಡಲಾಗಿದೆ.

ಕರ್ನಾಟಕ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ B2B ಸಭೆಗಳಲ್ಲಿ ಅಂತರರಾಷ್ಟ್ರೀಯ ಟೂರ್ ಆಪರೇಟರ್‌ಗಳು, ಟ್ರಾವೆಲ್ ಕಂಪನಿಗಳು ಮತ್ತು ಪ್ರವಾಸೋದ್ಯಮ ಪಾಲುದಾರರೊಂದಿಗೆ ನೇರ ಚರ್ಚೆಗಳು ನಡೆಯುತ್ತಿದ್ದು, ಯು.ಕೆ. ಮತ್ತು ಯೂರೋಪ್ ಪ್ರವಾಸಿ ಪ್ಯಾಕೇಜ್‌ಗಳಲ್ಲಿ ಕರ್ನಾಟಕವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುವುದು ಪ್ರಮುಖ ಗುರಿಯಾಗಿದೆ.

*ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವ ಮತ್ತು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ನಮ್ಮ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಪ್ರಚಾರವನ್ನು ನೈಜ ವ್ಯವಹಾರ ಅವಕಾಶಗಳಾಗಿ ಪರಿವರ್ತಿಸುವತ್ತ ಗಮನ ಹರಿಸಲಾಗಿದೆ. WTM Londonನಲ್ಲಿ ವಿಶೇಷವಾಗಿ ಕರಾವಳಿ–ಮಲೆನಾಡು, ಕಾಫಿ ಅನುಭವ, ವನ್ಯಜೀವಿ ಮತ್ತು ಪರಂಪರೆ ಪ್ರವಾಸೋದ್ಯಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಈ B2B ಸಂಪರ್ಕಗಳನ್ನು ಹೊಸ ಕರ್ನಾಟಕ ಪ್ರವಾಸಿ ಪ್ಯಾಕೇಜ್‌ಗಳು ಮತ್ತು ಹೆಚ್ಚಿನ ಪ್ರವಾಸಿಗರ ಆಗಮನವಾಗಿ ಪರಿವರ್ತಿಸುವುದು ನಮ್ಮ ಗುರಿ,” ಎಂದರು.

ಕರ್ನಾಟಕ ಪ್ರವಾಸೋದ್ಯಮದ ಯು.ಕೆ. ಮಾರುಕಟ್ಟೆ ಸಂಪರ್ಕ ಅಭಿಯಾನದ ಭಾಗವಾಗಿ ಈಗಾಗಲೇ ಮ್ಯಾಂಚೆಸ್ಟರ್‌ನಲ್ಲಿ ಮೊದಲ ಬಾರಿಗೆ ರೋಡ್ ಶೋ ಆಯೋಜಿಸಲಾಗಿದ್ದು, ಮುಂದಿನ ಹಂತದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ವಿಶೇಷ ರೋಡ್ ಶೋ ನಡೆಯಲಿದೆ.

WTMನಲ್ಲಿ ಸಂಪರ್ಕಿಸಿದ ಟ್ರಾವೆಲ್ ಆಪರೇಟರ್‌ಗಳು ಮತ್ತು ಪ್ರವಾಸೋದ್ಯಮ ಪಾಲುದಾರರೊಂದಿಗೆ ಮುಂದಿನ ಹಂತದ ಚರ್ಚೆ ನಡೆಸಿ, ಮಾರುಕಟ್ಟೆ ಆಧಾರಿತ ಪ್ರವಾಸ ಪ್ಯಾಕೇಜ್‌ಗಳು ಮತ್ತು ದೀರ್ಘಕಾಲಿಕ ಸಹಭಾಗಿತ್ವಗಳನ್ನು ರೂಪಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ.


Share

You cannot copy content of this page