ಸಮಗ್ರ ಸುದ್ದಿ

ಸಾರಿಗೆ ನಿಗಮಗಳಿಗೆ 5,650 ಕೋಟಿ ರೂ. ಬಾಕಿ, ತನ್ನ ತಪ್ಪಿಗೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಿದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

Share

ಬೆಂಗಳೂರು:ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ 5,650.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಿದ್ದರೆ ಬಸ್‌ ಟಿಕೆಟ್‌ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಇದನ್ನು ಕೊಡದೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಘಲಕ್‌ ಸರ್ಕಾರಕ್ಕಿಂತ ಹೀನಾಯವಾದ ಕಾಂಗ್ರೆಸ್‌ ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್‌ ಟಿಕೆಟ್‌ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನೂ ಯಾವುದೇ ಸರ್ಕಾರ ಈವರೆಗೆ ಮಾಡಿಲ್ಲ. ಮನಸೋ ಇಚ್ಛೆ ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳುವಂತೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದ್ದಾರೆ. ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದರೂ, ಜನರ ಬದುಕಲ್ಲಿ ಕತ್ತಲಿನ ಆಚರಣೆಯಾಗಲಿದೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನವಾಗಿದೆ. ಸುಮಾರು 40% ವರೆಗೂ ಟಿಕೆಟ್‌ ದರ ಏರಿಸಲಾಗಿದೆ ಎಂದರು.

ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿಯಲ್ಲಿ 12 ರೂ. ಇದ್ದು, ಈಗ 18 ರೂ. ಆಗಿದೆ. ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ 18 ರೂ. ಇದ್ದು, ಈಗ 25 ರೂ. ಆಗಿದೆ. ಮೆಜೆಸ್ಟಿಕ್‌ನಿಂದ ಬನಶಂಕರಿಗೆ 12 ರೂ., ಅತ್ತಿಬೆಲೆಗೆ 12 ರೂ. ಜಾಸ್ತಿಯಾಗಿದೆ. ನೆಲಮಂಗಲ, ಕಾಡುಗೋಡಿಗೆ 10 ರೂ, ಹೊಸಕೋಟೆಗೆ 12 ರೂ. ಹೆಚ್ಚಳವಾಗಿದೆ. ವೇಗದೂತದಲ್ಲಿ ಬೆಂಗಳೂರು-ಕೋಲಾರಕ್ಕೆ 19 ರೂ. ಹೆಚ್ಚಳ, ಬೆಂಗಳೂರು-ತುಮಕೂರು 81 ರೂ. ಇದ್ದು, ಈಗ 100 ರೂ. ಆಗಿದೆ. ಬೆಂಗಳೂರು-ಮಂಡ್ಯ 110 ರಿಂದ 136 ರೂ., ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗುವವರಿಗೆ ಬೆಂಗಳೂರು-ಮೈಸೂರು ಟಿಕೆಟ್‌ನಲ್ಲಿ 37 ರೂ. ಹೆಚ್ಚಳವಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಹೋಗುವವರಿಗೆ ಬೆಂಗಳೂರು-ಹಾಸನಕ್ಕೆ 51 ರೂ. ಜಾಸ್ತಿಯಾಗಿದೆ. ಚಿಕ್ಕಮಗಳೂರಿಗೆ ದತ್ತ ಪೀಠಕ್ಕೆ ಹೋಗುವವರಿಗೆ ಬೆಂಗಳೂರು-ಚಿಕ್ಕಮಗಳೂರಿಗೆ 68 ರೂ. ಏರಿಕೆಯಾಗಿದೆ. ಹೀಗೆ ಕರಾಳವಾದ ದರಗಳನ್ನು ಹೇರಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಎಂದು ಹೇಳಿ ಈಗ ಹೊರೆ ಹಾಕಿದ್ದಾರೆ ಎಂದರು.

ದರ ಏರಿಕೆ ಮಾಡಲು ಒಂದು ಕಾರಣ ಬೇಕು. ಆದರೆ ಇಲ್ಲಿ ಸಾಲ ಮಾಡಿರುವುದರಿಂದ ದರ ಏರಿಕೆ ಎನ್ನುತ್ತಿದ್ದಾರೆ. ಸಚಿವ ಬೈರತಿ ಸುರೇಶ್‌ ಸಾಲದಲ್ಲಿದ್ದೇವೆ ಎಂದಿದ್ದಾರೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಐದು ವರ್ಷ ಲಾಭದಲ್ಲಿತ್ತು. ಆಗ ಸ್ವಂತ ಹಣದಿಂದಲೇ 1,110 ಎಕರೆ ಜಮೀನು ಖರೀದಿಸಿ ಲ್ಯಾಂಡ್‌ ಬ್ಯಾಂಕ್‌ ಮಾಡಲಾಗಿತ್ತು. ಈಗ ಅದಕ್ಕೆ 10,000 ಕೋಟಿ ರೂ. ಮೌಲ್ಯವಿದೆ. ನಾನು ಟಿಟಿಎಂಸಿ ಮಾಡಿದ್ದೆ. ಬಾಡಿಗೆಯಿಂದಲೇ 40-50 ಕೋಟಿ ರೂ. ಬರುತ್ತಿತ್ತು ಎಂದರು.

ಸರ್ಕಾರದಿಂದ ಬಾಕಿ

ರಾಜ್ಯ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಈಗ ₹5,650.95 ಕೋಟಿ ಬಾಕಿ ಬರಬೇಕಿದೆ. KSRTC ಗೆ ₹2,943 ಕೋಟಿ NWKRTC ಗೆ ₹1,306 ಕೋಟಿ, BMTC ಗೆ ₹1,019 ಕೋಟಿ, KKRTC ಗೆ ₹999 ಕೋಟಿ ಕೊಡಬೇಕಿದೆ. ಇಷ್ಟು ಹಣ ಕೊಟ್ಟಿದ್ದರೆ ದರ ಏರಿಕೆ ಮಾಡಬೇಕಿರಲಿಲ್ಲ. ಸರ್ಕಾರ ಮಾಡಿರುವ ತಪ್ಪಿಗೆ ಸಚಿವ ಸುರೇಶ್‌ ಜನರ ಮೇಲೆ ಹೊರೆ ಹೇರುತ್ತಿದ್ದಾರೆ. ನಮ್ಮಿಂದ ಹಣ ಕೊಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದ್ದರಿಂದಲೇ ಹೀಗೆ ಮಾಡಲಾಗಿದೆ. ದೇಶದಲ್ಲೇ ನಂಬರ್‌ 1 ಎಂಬ ಹೆಸರು ಸಾರಿಗೆ ನಿಗಮಗಳಿಗೆ ಇತ್ತು. ಅಂತಹ ಸಂಸ್ಥೆಯನ್ನು ಕಾಂಗ್ರೆಸ್‌ ಹಾಳು ಮಾಡಿ ಬೀದಿಗೆ ತಂದಿದೆ ಎಂದರು.

ಸಾಲ ಪಡೆಯಲು 2,000 ಕೋಟಿ ರೂ. ಗ್ಯಾರಂಟಿ ನೀಡಲಾಗಿದೆ. ಬಾಕಿ ಪಾವತಿ ಮಾಡಿದ್ದರೆ ಈ ಗ್ಯಾರಂಟಿಯ ಅಗತ್ಯವೇ ಇರಲಿಲ್ಲ. ನೌಕರರಿಗೂ ಸಾರಿಗೆ ನಿಗಮಗಳಿಂದ ಬಾಕಿ ಇಟ್ಟುಕೊಳ್ಳಲಾಗಿದೆ. ಭವಿಷ್ಯ ನಿಧಿ ₹2,901.53 ಕೋಟಿ ಬಾಕಿ ಹಾಗೂ ಇಂಧನ ಬಾಕಿ ₹827.37 ಕೋಟಿ ಇದೆ. ಇತ್ತೀಚೆಗೆ ಬಸ್‌ ಚಲಾಯಿಸುತ್ತಿದ್ದಾಗ ಸ್ಟಿಯರಿಂಗ್‌ ಕಳಚಿಕೊಂಡು ಚಾಲಕನ ಕೈಗೆ ಬಂದಿತ್ತು. ಮತ್ತೊಂದು ಕಡೆ ಬಸ್‌ಗಳನ್ನು ಜನರೇ ತಳ್ಳಿದ್ದರು. ಹೆಡ್‌ಲೈಟ್‌ ಇಲ್ಲದೆ ಮೊಬೈಲ್‌ ಟಾರ್ಚ್‌ ಹಾಕಿಕೊಂಡು ಬಸ್‌ ಚಲಾಯಿಸಿದ ಘಟನೆ ಕಲಬುರ್ಗಿಯ ಚಿಂಚೋಳಿ ಮಾರ್ಗದಲ್ಲಿ ನಡೆದಿತ್ತು ಎಂದರು.

2026ರ ಮೇ ತಿಂಗಳಲ್ಲಿ, ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ₹7,130.80 ಕೋಟಿ ಇತ್ತು. ಇದರಲ್ಲಿ ವೇತನ, ಪಿಎಫ್, ಗ್ಯಾಚ್ಯುಟಿ ಎಲ್ಲ ಸೇರಿದೆ. ಕೋವಿಡ್‌ ಸಮಯದಲ್ಲಿ ಎಲ್ಲ ಕಡೆ ನಷ್ಟ ಇದ್ದಿದ್ದರಿಂದ ಸಾರಿಗೆ ನಿಗಮಗಳಿಗೂ ನಷ್ಟವಾಗಿತ್ತು. ಅದನ್ನು ಹೊರತುಪಡಿಸಿ ಬಿಜೆಪಿ ಅವಧಿಯಲ್ಲಿ ಉಳಿದ ಸಮಯದಲ್ಲಿ ಸಂಪೂರ್ಣ ಲಾಭವಾಗಿದೆ ಎಂದರು.

ಹಿರಿಯೂರಿಗೆ ಹೋದ ಸಿಎಂ ಡಿ.ಕೆ.ಶಿವಕುಮಾರ್‌, ನಾನು ಲಕ್ಷ್ಮಿ ಜೊತೆ ಬಂದಿದ್ದೇನೆ ಎಂದು ಹೇಳಿದ್ದರು. ಅದು ದರಿದ್ರ ಲಕ್ಷ್ಮಿ ಎಂದು ಹೇಳಬೇಕಿತ್ತು. 12,000 ಕೋಟಿ ರೂ. ನಿಗಮಗಳಿಗೆ ಬಾಕಿ ಇದೆ. ಡಿ.ಕೆ.ಶಿವಕುಮಾರ್‌ ರಾಜ್ಯದ ಯಾವುದೇ ಸ್ಥಳಕ್ಕೆ ಹೋಗಿ ಲಕ್ಷ್ಮಿಯನ್ನು ತರುತ್ತೇನೆ ಎಂದರೆ, ಸಾಲ ತರುತ್ತಾರೆ ಎಂದೇ ಅರ್ಥ. ಅನುದಾನ ನೀಡುತ್ತೇನೆ ಎಂದರೆ, ಆರ್ಥಿಕ ಇಲಾಖೆಯಲ್ಲಿ ಕ್ಲಿಯರೆನ್ಸ್‌ ಸಿಕ್ಕಿದೆಯೇ ಎಂದು ಪ್ರಶ್ನೆ ಮಾಡಬೇಕು. ಸಾಲ ಇಟ್ಟುಕೊಂಡು ಕೇವಲ ಬುರುಡೆ ಬಿಡುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದರು.

ಬಿಡಿಭಾಗಗಳನ್ನು ಖರೀದಿ ಮಾಡಲು ಕೂಡ ನಿಗಮಗಳ ಬಳಿ ಹಣವಿಲ್ಲ. ಹಳೆ ಬಿಡಿಭಾಗಗಳನ್ನೇ ಬಳಸಲಾಗುತ್ತಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಮಾತಾಡುವ ಆವೇಶದಲ್ಲಿ ನಿಜ ಹೇಳುತ್ತಾರೆ. ನಮ್ಮ ಬಳಿ ಡೀಸೆಲ್‌ಗೂ ಹಣವಿಲ್ಲ ಎಂದರು. ರೈತರ ಬಳಿ ಹೋಗಿ ಬೊಕ್ಕಸದಲ್ಲಿ ಹಣವಿಲ್ಲ ಎಂದರು. ಇಂತಹ ಸ್ಥಿತಿಯಲ್ಲೂ ಜನರ ಬಳಿಗೆ ಹೋಗಿ ಲಕ್ಷ್ಮಿಯನ್ನು ತರುತ್ತೇನೆ ಎನ್ನಲು ನಾಚಿಕೆಯಾಗಬೇಕು ಎಂದರು.

ಹಾಲಿನ ದರ ಏರಿಕೆ

ಹಾಲಿನ ಪ್ರೋತ್ಸಾಹಧನವನ್ನು 7 ರೂ. ಗೆ ಏರಿಸುವುದಾಗಿ ಮಾತು ಕೊಟ್ಟ ಕಾಂಗ್ರೆಸ್‌ ನಂತರ ಅದನ್ನು ಮಾಡದೆ ಜನರ ಮೇಲೆ ಹೊರೆ ಹಾಕಿದೆ. ಲೀಟರ್‌ಗೆ 8 ರೂ. ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಶುಭಂ ಸ್ಟಾಂಡರ್ಡ್‌ ಹಾಲಿನ ದರ 12 ರೂ., ಮತ್ತೊಂದು ಶುಭಂ ಹಾಲಿನ ದರ 13 ರೂ. ಏರಿಸಲಾಗಿದೆ. ಮೊಸರು ಒಂದು ಕೆಜಿಗೆ 25 ರೂ. ಜಾಸ್ತಿ ಮಾಡಲಾಗಿದೆ. ಲಸ್ಸಿಗೆ 14 ರೂ. ನಿಂದ 16 ರೂ. ಮಾಡಲಾಗಿದೆ. ರೈತರಿಗೆ 7 ರೂ. ನೀಡಲಿದ್ದು, ಉಳಿದ ಹಣ ಕಾಂಗ್ರೆಸ್‌ ನಾಯಕರ ಜೇಬಿಗೆ ಹೋಗುತ್ತದೆ ಎಂದರು.

ಪ್ರತಿ ದಿನ ಬಳಸುವ ಆಹಾರದ ಮೇಲೆ ದರ ಏರಿಕೆ ಮಾಡುವುದನ್ನು ತಪ್ಪಿಸಬೇಕಿತ್ತು. ಈಗ ತಿಂಗಳಿಗೆ ಒಂದು ಕುಟುಂಬ 390 ರೂ. ಅಧಿಕ ಖರ್ಚು ಮಾಡಬೇಕಾಗುತ್ತದೆ. ಜನರಿಗಾಗಿ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದು ಅನ್ಯಾಯ ಮಾಡಿದೆ ಎಂದರು.

ದರ ಏರಿಕೆ ಬಗ್ಗೆ ನಾನು ಅಧಿವೇಶನದಲ್ಲೇ ಹೋರಾಟ ಮಾಡಿದ್ದೆ. ಮುಂದೆಯೂ ಮಾಡುತ್ತೇನೆ. ಜನರು ಇದಕ್ಕೆ ಇನ್ನಷ್ಟು ಸ್ಪಂದಿಸಿದರೆ ನಿಜವಾದ ಹೋರಾಟವಾಗುತ್ತದೆ. ಇಲ್ಲವಾದರೆ ರಾಜಕೀಯ ಪ್ರತಿಭಟನೆ ಎಂದು ವಾದ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಸಿಎಂ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು, ಸುರಂಗ ರಸ್ತೆ, ಮೇಕೆದಾಟು, ಬರ ಪರಿಹಾರ ಎಂದು ಹೇಳಿದರೂ ಯಾವುದನ್ನೂ ಮಾಡಿಲ್ಲ. ಇವರು ಖಾಲಿ ಡಬ್ಬವನ್ನು ಇಟ್ಟುಕೊಂಡು ಶಬ್ದ ಮಾಡುವ ಭರವಸೆಗಳ ಸರದಾರ. ಗೃಹಲಕ್ಷ್ಮಿ ಹಣವನ್ನು ಬೇರೆ ಕಡೆ ಬಳಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದ್ದರೆ ಅದು ಅಕ್ರಮ. ಇನ್ನು ಏನಾದರೂ ಭರವಸೆ ನೀಡಿದರೆ ಜನರು ನಂಬಬಾರದು. ಆರ್ಥಿಕ ಇಲಾಖೆಯಲ್ಲಿ ಎಷ್ಟು ಹಣವಿದೆ ಎಂದು ಮೊದಲು ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಸಿಎಂ ಡಿ.ಕೆ.ಶಿವಕುಮಾರ್‌ ಕಡೆಯ ಅಭ್ಯರ್ಥಿ ಎಂದರೆ ಯಾರೂ ಮತ ನೀಡುವುದಿಲ್ಲ. ಅದಕ್ಕೆ ಪುಟ್ಟಣ್ಣ ಸೋತುಹೋದರು. ಅವರು ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೆಸರಾಗಿದ್ದಾರೆ. ನನ್ನನ್ನು ಬಂಧನ ಮಾಡುವ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ತುರ್ತು ಪರಿಸ್ಥಿತಿ ಹೇರಲು ಸಾಧ್ಯವಿಲ್ಲ. ಆ ಸಮಯದಲ್ಲೇ ನಾನು ಜೈಲಿಗೆ ಹೋಗಿದ್ದೆ. ಈಗಲೂ ಪೊಲೀಸರು ಬಂದು ಎಲ್ಲಿಗೆ ಬರಬೇಕೆಂದು ತಿಳಿಸಲಿ. ಈ ಸರ್ಕಾರಕ್ಕೆ ಇರುವುದೇ ಒಂದು ವರ್ಷದ ಅವಧಿ ಎಂದರು.

ದರ ಏರಿಕೆ ವಿರುದ್ಧ ಹೋರಾಟ

ಈ ದರ ಏರಿಕೆಯ ವಿರುದ್ಧ ಬಿಜೆಪಿ ನವೆಂಬರ್‌ 5 ರಂದು ರಾಜ್ಯದಾದ್ಯಂತ ಹೋರಾಟ ಮಾಡಲಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ತೀವ್ರವಾದ ಹೋರಾಟ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.


Share

You cannot copy content of this page