ಮಂಡ್ಯ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅವರು ಬೆಂಗಳೂರು ಮಂಡ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳೊಂದಿಗೆ ಕಾರಿನಲ್ಲೇ ಗ್ರಾಮಗಳ ಅಭಿವೃದ್ಧಿ ಕುರಿತಂತೆ ಸಮಾಲೋಚನೆ ನಡೆಸಿ, ಸಮಯದ ಸದುಪಯೋಗ ಪಡಿಸಿಕೊಂಡರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ತೆರಳುವ ಮಾರ್ಗದಲ್ಲಿ ಮಂಡ್ಯ ಗಡಿಯಿಂದ ಮೈಸೂರು ಗಡಿಯವರೆಗೆ ಸಿಇಓ ಕೆ.ಆರ್. ನಂದಿನಿ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಸಚಿವರು, ಜಿಲ್ಲೆಯಲ್ಲಿ ಹೆಚ್ಚು ಜನ ಸಂಚಾರ ಇರುವ 50 ಹಳ್ಳಿಗಳ ಬಸ್ ನಿಲುಗಡೆ ಗುರುತಿಸಿ ಅಲ್ಲಿ ವಿಬಿಜಿ ರಾಮ್ ಜಿ ಅಡಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಸೂಚನೆ ನೀಡಿದರು.
ಅಕ್ಕ ಕೆಫೆಗಳು ಲಾಭದಾಯಕವಾಗಿದ್ದು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುತ್ತಿವೆ ಎಂಬ ಮಾಹಿತಿ ಪಡೆದ ಸಚಿವರು, ವಿಬಿಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಕೆಫೆ ತೆರೆದು ಮಹಿಳಾ ಸ್ವಸಹಾಯ ಗುಂಪುಗಳಿಗೆ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸುವಂತೆಯೂ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ, ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣ ಸೇರಿದಂತೆ ಎಲ್ಲ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ಸೂಚಿಸಿದ ಈಶ್ವರ ಖಂಡ್ರೆ, ವಿಬಿಜಿ ರಾಮ್ ಜಿ ಅಡಿ 375 ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಗ್ರಾಮಗಳಲ್ಲಿ ಶಾಶ್ವತ ಮತ್ತು ಉಪಯುಕ್ತ ಆಸ್ತಿಗಳ ಸೃಜನೆಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆ ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನ ಆರಂಭಿಸಿದ್ದು, ಅರ್ಜಿಗಳು ಬಂದ ಕೂಡಲೇ ಪಿಡಿಓಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಯಾವುದೇ ವಿಳಂಬವಿಲ್ಲದಂತೆ ಇ-ಸ್ವತ್ತು ವಿತರಿಸಲು ಕ್ರಮ ವಹಿಸುವಂತೆ ಎಲ್ಲ ಪಿಡಿಓಗಳಿಗೆ ಸೂಚಿಸಲು ತಿಳಿಸಿದರು.
ನಕಲಿ ದಾಖಲೆ ಆಧರಿಸಿ ನೀಡಿದ ಇಸ್ವತ್ತುಗಳ ರದ್ದಿಗೆ ಈಶ್ವರ ಖಂಡ್ರೆ ಸೂಚನೆ
ಮಂಡ್ಯ ನಗರಕ್ಕೆ ಹೊಂದಿಕೊಂಡೇ ಇರುವ ಇಂಡವಾಳು ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಿ, 1881 ಅಕ್ರಮ ಇ-ಸ್ವತ್ತು ನೀಡಲಾಗಿದೆ ಎಂಬ ಆರೋಪ ಬಂದಿದ್ದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಈಗ ಸರ್ಕಾರ ನಡೆಸುತ್ತಿರುವ ಇ-ಸ್ವತ್ತು ಅಭಿಯಾನದಲ್ಲಿ ಯಾವುದೇ ಲೋಪ, ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಯಾವುದೇ ಪಂಚಾಯತಿಯಲ್ಲಿ ನಕಲಿ ದಾಖಲೆ ಆಧಾರದಲ್ಲಿ ಅಕ್ರಮವಾಗಿ ಇ-ಸ್ವತ್ತು ನೀಡಿದ್ದರೆ ರದ್ದು ಪಡಿಸುವಂತೆಯೂ ಸೂಚಿಸಿದರು.
ಕೆರೆಗಳ ಪುನಶ್ಚೇತನ, ಸಂಪನ್ಮೂಲದ ಸದುಪಯೋಗಕ್ಕೆ ಸೂಚನೆ
ಮಂಡ್ಯ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ 417 ಕೆರೆಗಳಿದ್ದು, 155 ಕೆರೆಗಳ 319 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಪೈಕಿ 133 ಕೆರೆಗಳ 162 ಎಕರೆ ಒತ್ತುವರಿ ತೆರವು ಮಾಡಲಾಗಿದ್ದು, ಇನ್ನೂ 22 ಕೆರೆಗಳ 158 ಎಕರೆ ಭೂಮಿ ಒತ್ತುವರಿ ತೆರವು ಮಾಡಬೇಕಾಗಿದೆ. ಮನೆಗಳ ಹೊರತು ಪಡಿಸಿ, ಉಳಿದ ಒತ್ತುವರಿ ತೆರವುಗೊಳಿಸಿ ಕೆರೆಗಳ ಸಂರಕ್ಷಣೆ ಮಾಡಿ, ರಾಜಕಾಲುವೆ ಅಡೆತಡೆ ನಿವಾರಿಸಿ, ನೀರು ತುಂಬಿಸಿ, ಅಂತರ್ಜಲಮಟ್ಟ ಹೆಚ್ಚಿಸುವಂತೆ ಹಾಗೂ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗದಂತೆ ರಕ್ಷಿಸಲು ಸೂಚಿಸಿದರು.
ವಿಬಿಜಿ ರಾಮ್ ಜಿ ಅಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ದನದ ಕೊಟ್ಟಿಗೆ, ಕುರಿ, ಮೇಕೆ ಕೊಟ್ಟಿಗೆ, ಕೊಳವೆ ಬಾವಿ ಮರುಪೂರಣ ಪಿಟ್, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆಯೂ ಸೂಚಿಸಿದರು.
ಜಿಲ್ಲಾ ಪಂಚಾಯತಿ ಸಿಇಓ ಕಡ್ಡಾಯವಾಗಿ ವಾರದಲ್ಲಿ 2 ದಿನ ಕನಿಷ್ಠ 4 ಗ್ರಾಮಗಳಿಗೆ ಭೇಟಿ ನೀಡಿ, ರಸ್ತೆ, ನೀರು, ಬೀದಿ ದೀಪ, ಇ-ಸ್ವತ್ತು, ನಕ್ಷೆ ಮಂಜೂರಾತಿ, ನೈರ್ಮಲ್ಯ, ಕೆರೆ ಅಭಿವೃದ್ಧಿ, ವಿಬಿಜಿ ರಾಮ್ ಜಿ ಪ್ರಗತಿ ಕುರಿತಂತೆ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವಂತೆಯೂ ಸೂಚಿಸಿದರು.
ಎಲ್ ನಿ ನೋ ಪ್ರಭಾವದಿಂದ ಮಳೆ ಕೊರತೆ ಆಗಿದ್ದು, ಮುಂದಿನ ಬೇಸಿಗೆಯಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಜಲ ಬಜೆಟಿಂಗ್ ಮಾಡಿ, ಯಾವ ಗ್ರಾಮದಲ್ಲಿ ಸಮಸ್ಯೆ ಎದುರಾಗಬಹುದು ಎಂದು ಅಂದಾಜು ಮಾಡಿ, ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಜಲ ಮೂಲಗಳನ್ನು ಗುರುತಿಸುವಂತೆ ಸೂಚಿಸಿದರು.
ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಆಗಬೇಕು. ಈ ಬಗ್ಗೆ ತಾಲೂಕು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಮೇಲ್ವಿಚಾರಣೆ ನಡೆಸಿ ಕೂಲಿ ಪಾವತಿ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಉಪ ಕಾರ್ಯದರ್ಶಿ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಈಶ್ವರ ಖಂಡ್ರೆ ತಿಳಿಸಿದರು.
