ಸಮಗ್ರ ಸುದ್ದಿ

ವಿಮಾನದ ಎಜೆಕ್ಷನ್ ಸೀಟು ಉತ್ಪಾದನೆ: ಮಾರ್ಟಿನ್ ಬೇಕರ್ 380 ಕೋಟಿ ಹೂಡಿಕೆ: ಎಂ ಬಿ ಪಾಟೀಲ

Share

ಬೆಂಗಳೂರು: ಯುನೈಟೆಡ್ ಕಿಂಗಡಮ್ ಮೂಲದ ಮಾರ್ಟಿನ್-ಬೇಕರ್ 380 ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧ ತಮ್ಮನ್ನು ಭೇಟಿಯಾದ ಎರಡೂ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಅವರು ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸೇನಾ ವಿಮಾನಗಳಲ್ಲಿ ಬಳಕೆಯಾಗುವ ಎಜೆಕ್ಷನ್ ಸೀಟುಗಳು ಮತ್ತು ವಿಮಾನ ಸಹ ಸಿಬ್ಬಂದಿಯ ಜೀವರಕ್ಷಣೆಗೆ ಬೇಕಾಗುವ ಸುರಕ್ಷಾ ಸಾಧನಗಳನ್ನು ತಯಾರಿಸುವ ಮಾರ್ಟಿನ್-ಬೇಕರ್ ಕಂಪನಿಯು ಜಾಗತಿಕ ಮಟ್ಟದ ಉದ್ಯಮವಾಗಿದೆ. ಅದು ಉನ್ನತ ಮಟ್ಟದ ಕೌಶಲ್ಯ ಬೇಡುವ 500ಕ್ಕೂ ಹೆಚ್ಚು ಉದ್ಯೋಗಸೃಷ್ಟಿ ಮಾಡಲಿರುವ ತನ್ನ ತಯಾರಿಕಾ ಸ್ಥಾವರ ನಿರ್ಮಾಣ ಯೋಜನೆಗೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿ 10 ಎಕರೆ ಕೇಳಿದೆ. ಇದನ್ನು ಶೀಘ್ರವೇ ಒದಗಿಸಲಾಗುವುದು ಎಂದಿದ್ದಾರೆ.

ಮಾರ್ಟಿನ್ ಬೇಕರ್ ಕಂಪನಿ ತಯಾರಿಸಿರುವ 900ಕ್ಕೂ ಹೆಚ್ಚು ಎಜೆಕ್ಸನ್ ಸೀಟುಗಳು ನಮ್ಮ ದೇಶದ ವಾಯುಪಡೆ ಮತ್ತು ನೌಕಾಪಡೆಯ ವಿಮಾನಗಳಲ್ಲಿ ಬಳಕೆಯಲ್ಲಿವೆ. ಕಂಪನಿಯು ಹೊಂದಿರುವ ಆಧುನಿಕ ತಂತ್ರಜ್ಞಾನವು ಪೈಲಟ್ ಗಳ ಸುರಕ್ಷತೆ ಮತ್ತು ಸೇನಾ ವಿಮಾನ ಕಾರ್ಯಾಚರಣೆಗಳಲ್ಲಿ ಕಣ್ಗಾವಲು ವ್ಯವಸ್ಥೆಯಲ್ಲಿ ಮಹತ್ತ್ವದ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ ಅದು ಮಾಡುತ್ತಿರುವ ಹೂಡಿಕೆಯಿಂದ ಸ್ವದೇಶಿ ತಯಾರಿಕೆ, ನಿರ್ವಹಣೆ ಮತ್ತು ದುರಸ್ತಿ, ಪೂರೈಕೆ ಸರಪಳಿಯ ಬಲವರ್ಧನೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ವಿಜಯಪುರದಲ್ಲಿ ಟಾನ್ಬೋ ಇಮೇಜಿಂಗ್ ಹೂಡಿಕೆ

ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಎಲೆಕ್ಟ್ರೋ-ಆಪ್ಟಿಕಲ್, ಇನ್ಫ್ರಾರೆಡ್ ವ್ಯವಸ್ಥೆ, ಥರ್ಮಲ್ ಇಮೇಜಿಂಗ್, ಆಧುನಿಕ ಸೆನ್ಸರ್ ತಂತ್ರಜ್ಞಾನ, ಸ್ವಯಂಚಾಲಿತ ರಕ್ಷಣಾ ಸಾಧನಗಳು ಮುಂತಾದವನ್ನು ತಯಾರಿಸುವ ಟಾನ್ಬೋ ಇಮೇಜಿಂಗ್ ಇಂಡಿಯಾ ಲಿಮಿಟೆಡ್ ಕೂಡ ರಾಜ್ಯದಲ್ಲಿ ಹೂಡಿಕೆ ಮಾಡಲಿದೆ. ಡೀಪ್-ಟೆಕ್ ಪರಿಣತಿ ಹೊಂದಿರುವ ಕಂಪನಿಯು ಹೈ-ಪವರ್ ಮೈಕ್ರೋವೇವ್ ತಯಾರಿಕೆ ಘಟಕದ ಅಭಿವೃದ್ಧಿಗೆ ಬೆಂಗಳೂರಿನ ಐಟಿಐಆರ್ ವ್ಯಾಪ್ತಿಯಲ್ಲಿ 5 ಎಕರೆ ಮತ್ತು ತನ್ನ ಪರೀಕ್ಷಾ ಸೌಲಭ್ಯಗಳ ಘಟಕ ನಿರ್ಮಾಣಕ್ಕೆ ವಿಜಯಪುರ ಜಿಲ್ಲೆಯ ಮುಳವಾಡದಲ್ಲಿ 130 ಎಕರೆ ಜಾಗ ಕೇಳಿದೆ ಎಂದು ಅವರು ವಿವರಿಸಿದ್ದಾರೆ.

ಮುಳವಾಡದಲ್ಲಿ ಕಂಪನಿಯು ತನ್ನ ಎಲ್ಲ ಪರೀಕ್ಷೆ, ಮೌಲ್ಯಮಾಪನ, ಪ್ರದರ್ಶನ ಮುಂತಾದವುಗಳನ್ನು ನಡೆಸಲಿದೆ. ಬೆಂಗಳೂರಿನ ಉದ್ದೇಶಿತ ಸ್ಥಾವರದಲ್ಲಿ ಹೈಪವರ್ ಮೈಕ್ರೋವೇಸ್ ಸಿಸ್ಟಂ ಮತ್ತು ಅದಕ್ಕೆ ಪೂರಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಕಾರ್ಯತಂತ್ರ ರೂಪಿಸಿದೆ ಎಂದು ಪಾಟೀಲ ನುಡಿದಿದ್ದಾರೆ.

ಮಾತುಕತೆಯಲ್ಲಿ ಮಾರ್ಟಿನ್-ಬೇಕರ್ ಕಂಪನಿಯ ಸಿಎಫ್ಒ ರಾಬರ್ಟ್ ಮಾರ್ಗನ್, ಟಾಮ್ ಡಟನ್ ಮತ್ತು ಕೃಷ್ಣಕುಮಾರ್, ಟಾನ್ಬೋ ಕಂಪನಿಯ ಪರವಾಗಿ ಸಿಎಫ್ಒ ಟಿ ಎಸ್ ಶಿವಶಂಕರ್, ಸಹಸಂಸ್ಥಾಪಕಿ ಸಿಸಿಲಿಯಾ ಡಿಸೋಜ ಮತ್ತು ಉಪಾಧ್ಯಕ್ಷ ಡಿ.ರಾಜೇಂದ್ರಕುಮಾರ್ ಇದ್ದರು.

ಈ ಸಂದರ್ಭದಲ್ಲಿ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಇದ್ದರು.


Share

You cannot copy content of this page