ಸಮಗ್ರ ಸುದ್ದಿ

ಎನ್‌ವಿಡಿಯಾ ಸಹಯೋಗದಲ್ಲಿ ಭಾರತದ ಮೊದಲ ಶೈಕ್ಷಣಿಕ ‘ಎಐ ಫಸ್ಟ್ ಫ್ಯಾಕ್ಟರಿ’ ಸ್ಥಾಪನೆ: ಪ್ರಿಯಾಂಕ್ ಖರ್ಗೆ ಮೆಚ್ಚುಗೆ

Share


ಬೆಂಗಳೂರು: ದಯಾನಂದ ಸಾಗರ್ ವಿಶ್ವವಿದ್ಯಾಲಯವು ಜಾಗತಿಕ ತಂತ್ರಜ್ಞಾನ ಸಂಸ್ಥೆ ಎನ್‌ವಿಡಿಯಾ (NVIDIA) ಸಹಯೋಗದಲ್ಲಿ ಭಾರತದ ಮೊದಲ ಶೈಕ್ಷಣಿಕ ‘ಎಐ ಫಸ್ಟ್ ಫ್ಯಾಕ್ಟರಿ’ಯನ್ನು ಸ್ಥಾಪಿಸಿರುವುದು ರಾಜ್ಯದ ಎಐ ಮತ್ತು ಡೀಪ್‌ಟೆಕ್ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಲಿದೆ ಎಂದು ಗೃಹ, ಐಟಿ ಮತ್ತು ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಯಾನಂದ ಸಾಗರ್ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಹಾಗೂ ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ಪ್ರೇಮಚಂದ್ರ ಸಾಗರ್ ಅವರನ್ನು ಭೇಟಿ ಮಾಡಿದ ಸಚಿವರು, ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಸ್ಥಾಪಿಸಿರುವ ಅತ್ಯಾಧುನಿಕ ಎಐ ಮೂಲಸೌಕರ್ಯದ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರೇಮಚಂದ್ರ ಸಾಗರ್, ಎನ್‌ವಿಡಿಯಾ ಸಹಯೋಗದಲ್ಲಿ ಸ್ಥಾಪಿಸಿರುವ ಎಐ ಫಸ್ಟ್ ಫ್ಯಾಕ್ಟರಿಯು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು, 20 NVIDIA DGX B200 ಸೂಪರ್‌ಕಂಪ್ಯೂಟಿಂಗ್ ನೋಡ್‌ಗಳನ್ನು ಒಳಗೊಂಡಿದೆ ಎಂದು ವಿವರಿಸಿದರು. ಈ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಕೇವಲ ಪಠ್ಯಪುಸ್ತಕಗಳ ಮೂಲಕ ಕಲಿಯುವುದಕ್ಕೆ ಸೀಮಿತಗೊಳಿಸದೆ, ನೈಜ ತಂತ್ರಜ್ಞಾನ ಮೂಲಸೌಕರ್ಯವನ್ನು ಬಳಸಿಕೊಂಡು ಕಲಿಯಲು ಅವಕಾಶ ಕಲ್ಪಿಸುತ್ತದೆ. ಬೃಹತ್ ಪ್ರಮಾಣದ ಎಐ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ತರಬೇತುಗೊಳಿಸುವುದು ಮತ್ತು ಕಾರ್ಯರೂಪಕ್ಕೆ ತರುವ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳು ಇಲ್ಲಿ ಪಡೆಯಬಹುದು ಎಂದು ತಿಳಿಸಿದರು.

ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ತಾಂತ್ರಿಕ ಪರಿಣತಿ ಹಾಗೂ ನವೀನ ಆವಿಷ್ಕಾರಗಳಿಗೆ ಅಗತ್ಯವಾದ ಸಾಮರ್ಥ್ಯವನ್ನು ಬೆಳೆಸಲು ನೆರವಾಗಲಿದೆ. ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಐ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕದ ವಿಶ್ವವಿದ್ಯಾಲಯಗಳು ಅತ್ಯಾಧುನಿಕ ಎಐ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಶಿಕ್ಷಣ ಸಂಸ್ಥೆಗಳು ಇಂತಹ ಸುಧಾರಿತ ತಂತ್ರಜ್ಞಾನ ಮೂಲಸೌಕರ್ಯಗಳನ್ನು ನಿರ್ಮಿಸುವುದರಿಂದ ರಾಜ್ಯದ ಯುವಜನರಿಗೆ ಜಾಗತಿಕ ಮಟ್ಟದ ತಂತ್ರಜ್ಞಾನದಲ್ಲಿ ಪರಿಣತಿ ಪಡೆಯಲು ಉತ್ತಮ ಅವಕಾಶಗಳು ಸಿಗಲಿವೆ ಎಂದರು.

ಕರ್ನಾಟಕದ ಎಐ ಮತ್ತು ಡೀಪ್‌ಟೆಕ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮ ವಲಯದ ನಡುವೆ ಸಹಯೋಗ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ದಯಾನಂದ ಸಾಗರ್ ವಿಶ್ವವಿದ್ಯಾಲಯದೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಕೆಐಟಿಎಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Share

You cannot copy content of this page