ಸಮಗ್ರ ಸುದ್ದಿ

ಬರ ಪರಿಹಾರವಾಗಿ ರೈತರಿಗೆ ₹5,000; ಮೊದಲ ಕಂತಿನಲ್ಲಿ ₹2,500 ನೇರ ಖಾತೆಗೆ- ಡಿಸಿಎಂ ಡಾ.ಜಿ.ಪರಮೇಶ್ವರ್

Share

ಬೆಂಗಳೂರು:ಬರದಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಮೊದಲ ಕಂತಿನ ಮಧ್ಯಂತರ ಇನ್‌ಪುಟ್‌ ಸಬ್ಸಿಡಿ ನೆರವು ಬಿಡುಗಡೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಚಾಲನೆ ನೀಡಿದರು.

2026ರ ಮುಂಗಾರು ಹಂಗಾಮಿನಲ್ಲಿ ತೀವ್ರ ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣದ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೊದಲ ಕಂತಿನ ಮಧ್ಯಂತರ ಇನ್‌ಪುಟ್‌ ಸಬ್ಸಿಡಿ ಪರಿಹಾರ ₹2,500 ಅನ್ನು ಬಿಡುಗಡೆ ಮಾಡಿದೆ.

ಬರದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ನೆರವಾಗಲು ಎನ್‌ಡಿಆರ್‌ಎಫ್ ನಿಯಮಗಳಂತೆ ರಾಜ್ಯ ಸರ್ಕಾರವು ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟರ್‌ಗೆ ಮಿತಿಗೊಳಿಸಿ ₹5,000 ಪರಿಹಾರ ನೀಡಲು ತೀರ್ಮಾನಿಸಿದೆ. ಅದರಂತೆ ಮೊದಲ ಕಂತಿನಲ್ಲಿ ₹2,500 ಬಿಡುಗಡೆ ಮಾಡಲು‌ ಕ್ರಮ ವಹಿಸಲಾಗಿದೆ. ಎರಡನೇ ಕಂತನ್ನು ಮುಂದಿನ ಮೂರು ವಾರದೊಳಗೆ ಬಿಡುಗಡೆ ಮಾಡಲಾಗುವುದು.

ಇದು ಮೊದಲ ಕಂತಿನ ಪರಿಹಾರವಷ್ಟೇ. ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ (NDRF) ಅಡಿಯಲ್ಲಿ ಬರ ಪರಿಹಾರದ ಅನುದಾನ ಬಿಡುಗಡೆಯಾದ ತಕ್ಷಣವೇ ಪರಿಷ್ಕೃತ ಮಾನದಂಡಗಳ ಅನ್ವಯ ರೈತರಿಗೆ ಬಾಕಿ ಇರುವ ಪರಿಹಾರ ಮೊತ್ತವನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇವೆ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಒದಗಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ.

ರಾಜ್ಯದ 226 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ:

2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಒಟ್ಟು 226 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಅಧಿಕೃತವಾಗಿ ಘೋಷಿಸಿದೆ.

ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದು, ಕೇವಲ 551 ಮಿ.ಮೀ. ಮಳೆಯಾಗಿದೆ. ಇದರಿಂದ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಉತ್ತರ ಒಳನಾಡಿನಲ್ಲಿ ಶೇ.42, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಕರ್ನಾಟಕದಲ್ಲಿ ಶೇ.28ರಷ್ಟು ಮಳೆ ಕೊರತೆ ಕಂಡುಬಂದಿದೆ.

ರಾಜ್ಯದಲ್ಲಿ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 69.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಡೆಸಿದ ಜಂಟಿ ಬೆಳೆಹಾನಿ ಸಮೀಕ್ಷೆಯ ಪ್ರಕಾರ, ಇದರಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ. ಇದು ಬಿತ್ತನೆಯಾದ ಒಟ್ಟು ಪ್ರದೇಶದ ಶೇ.83.26ರಷ್ಟಾಗಿದ್ದು, ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ.

ಕೇಂದ್ರ ಸರ್ಕಾರಕ್ಕೆ ₹22,400.58 ಕೋಟಿ ಪರಿಹಾರದ ಮನವಿ:

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ವಿವರಿಸಿ, ಎನ್‌ಡಿಆರ್‌ಎಫ್ ಅಡಿಯಲ್ಲಿ ಒಟ್ಟು ₹22,400.58 ಕೋಟಿ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಈ ಮೊತ್ತದಲ್ಲಿ ಬೆಳೆಹಾನಿ ಇನ್‌ಪುಟ್ ಸಬ್ಸಿಡಿಗಾಗಿ ₹7,943.55 ಕೋಟಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ₹1,727 ಕೋಟಿ, ಜಾನುವಾರುಗಳ ರಕ್ಷಣೆಗಾಗಿ ₹583.04 ಕೋಟಿ ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಗ್ರಹ ಪರಿಹಾರಕ್ಕಾಗಿ ₹12,146.99 ಕೋಟಿ ಸೇರಿದೆ.

ಬರ ಪರಿಹಾರಕ್ಕೆ ಸಂಬಂಧಿಸಿದ ಎನ್‌ಡಿಆರ್‌ಎಫ್ ಮಾನದಂಡಗಳನ್ನು ಮರುಪರಿಶೀಲಿಸಿ ಸಡಿಲಗೊಳಿಸಬೇಕು ಹಾಗೂ ರಾಜ್ಯಕ್ಕೆ ಅಗತ್ಯ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಐದಕ್ಕೂ ಹೆಚ್ಚು ಬಾರಿ ಪತ್ರ ಬರೆದು ಒತ್ತಾಯಿಸಲಾಗಿದೆ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಭೇಟಿಗಾಗಿ ಸಮಯ ಕೋರಿರುತ್ತಾರೆ.

ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬರ ಪರಿಹಾರದ ಅನುದಾನವನ್ನು ವಿಳಂಬ ಮಾಡದೆ ಬಿಡುಗಡೆ ಮಾಡಬೇಕು. ರೈತರು ಅನುಭವಿಸಿರುವ ನಷ್ಟದ ಪ್ರಮಾಣವನ್ನು ಪರಿಗಣಿಸಿ, ರಾಜ್ಯದ ಮನವಿಗೆ ಆದಷ್ಟು ಶೀಘ್ರವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಅರ್ಹ ರೈತರಿಗೆ ಈ ಪರಿಷ್ಕೃತ ದರಗಳ ಅನ್ವಯ ಬಾಕಿ ಉಳಿದಿರುವ ಪರಿಹಾರವನ್ನು ಒಂದೇ ಕಂತಿನಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.

ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ:

ಪರಿಹಾರ ವಿತರಣೆಯಲ್ಲಿ ವಿಳಂಬ, ಅಕ್ರಮ ಹಾಗೂ ಅನಗತ್ಯ ತೊಂದರೆಗಳನ್ನು ತಪ್ಪಿಸಲು ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ‘ಪರಿಹಾರ’ ಪೋರ್ಟಲ್, ಡಿಜಿಟಲ್ ಬೆಳೆ ಸಮೀಕ್ಷೆ ಹಾಗೂ ‘ಫ್ರೂಟ್ಸ್’ (FRUITS) ದತ್ತಾಂಶಗಳನ್ನು ಸಂಯೋಜಿಸಿ ಅರ್ಹ ರೈತರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಪರಿಹಾರ ಪಡೆಯಲು ರೈತರು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಥವಾ ಹೊಸದಾಗಿ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಆಧಾರಿತ ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರದ ಹಣ ಜಮೆಯಾಗಲಿದೆ.

ಯಾದಗಿರಿ ಜಿಲ್ಲೆಯಲ್ಲಿ ಪರಿಹಾರ ವಿತರಣೆಗೆ ಚಾಲನೆ:

ಇಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ 2,500 ರೂ.ಗಳಂತೆ ಒಟ್ಟು 1,743.53 ಲಕ್ಷ ರೂ.ಗಳ ಇನ್‌ಪುಟ್‌ ಸಬ್ಸಿಡಿಯನ್ನು ವಿತರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಗೆ ಒಟ್ಟು ಅರ್ಹ ರೈತರಿಗೆ ಪಾವತಿಸಬೇಕಾಗಿರುವ ಇನ್‌ಪುಟ್‌ ಸಬ್ಸಿಡಿ ಮೊತ್ತವು ರೂ.16,830 ಲಕ್ಷಗಳಾಗಿರುತ್ತದೆ. ಉಳಿದ ಜಿಲ್ಲೆಗಳಿಗೆ ಪರಿಹಾರ ಬಿಡುಗಡೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ಇನ್‌ಪುಟ್ ಸಬ್ಸಿಡಿಯ ಜೊತೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (WBCIS) ಅಡಿಯಲ್ಲಿಯೂ ಅರ್ಹ ರೈತರಿಗೆ ವಿಮಾ ಪರಿಹಾರವನ್ನು ತ್ವರಿತವಾಗಿ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬರದಿಂದ ಬೆಳೆ ಕಳೆದುಕೊಂಡಿರುವ ರೈತರ ಪರಿಸ್ಥಿತಿ ನಮಗೆ ತಿಳಿದಿದೆ. ಅವರಿಗೆ ಅಗತ್ಯ ನೆರವು ಒದಗಿಸುವ ಜವಾಬ್ದಾರಿಯಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವುದಿಲ್ಲ. ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನ ಪಡೆಯಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುವುದರ ಜೊತೆಗೆ, ರೈತರಿಗೆ ಸಲ್ಲಬೇಕಾದ ಪರಿಹಾರವನ್ನು ತಲುಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.


Share

You cannot copy content of this page