ಸಮಗ್ರ ಸುದ್ದಿ

ಎಲ್ಇಡಿ ಬೀದಿ ದೀಪ ಯೋಜನೆಯಿಂದ ಸಮಾರು 100 ಕೋಟಿ ರೂ.(ಶೇ.50ರಷ್ಟು) ಉಳಿತಾಯ : ಕೃಷ್ಣ ಬೈರೇಗೌಡ

Share

ಬೆಂಗಳೂರು:ನಗರದ ಬೀದಿ ದೀಪಗಳ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಇಂಧನ ದಕ್ಷ ಎಲ್‌ಇಡಿ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ(CCMS)ಯನ್ನು ಅಳವಡಿಸಿಕೊಳ್ಳುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಿಂದ ಸುಮಾರು 100 ಕೋಟಿ ರೂ‌.(ಶೇ.54ರಷ್ಟು) ಹಣ ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ದಕ್ಷಿಣ ನಗರ ಪಾಲಿಕೆಯಿಂದ ಜಯನಗರದಲ್ಲಿ ಮೊದಲ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CCMS) ಸ್ಥಾಪನೆಯ ಸ್ಥಳಕ್ಕೆ ಭೇಟಿ ನೀಡಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯು ಸಾರ್ವಜನಿಕ ಬೆಳಕಿನ ವ್ಯವಸ್ಥೆಯನ್ನು ಸುಧಾರಿಸುವುದು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಬೆಂಗಳೂರಿನ ನಾಗರಿಕ ಸೇವೆಗಳ ಗುಣಮಟ್ಟವನ್ನು ಮತ್ತಷ್ಟು ಉತ್ತಮಪಡಿಸುವ ಗುರಿಯನ್ನು ಹೊಂದಿದೆ.

ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯವೆಂದರೆ ದೋಷಯುಕ್ತ ಅಥವಾ ಕಾರ್ಯನಿರ್ವಹಿಸದ ಬೀದಿ ದೀಪಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ಸಾಮರ್ಥ್ಯ. ಇದರಿಂದ ಸಾರ್ವಜನಿಕರು ದೂರು ಸಲ್ಲಿಸುವವರೆಗೆ ಕಾಯದೆ, ತಾಂತ್ರಿಕ ತಂಡಗಳೇ ದೋಷಗಳನ್ನು ಗುರುತಿಸಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ. ಇದರಿಂದ ಸಮಸ್ಯೆಗಳಿಗೆ ತ್ವರಿತ ಪರಿಹಾರ, ಹೆಚ್ಚಿನ ಹೊಣೆಗಾರಿಕೆ ಹಾಗೂ ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗಲಿದೆ.

ಬೆಂಗಳೂರಿನಲ್ಲಿ ನಾಗರಿಕರಿಂದ ಅತಿ ಹೆಚ್ಚು ದೂರುಗಳು ದಾಖಲಾಗುತ್ತಿರುವ ಸಮಸ್ಯೆಗಳಲ್ಲಿ ಬೀದಿ ದೀಪಗಳ ಸಮರ್ಪಕ ಕಾರ್ಯನಿರ್ವಹಣೆಯ ಕೊರತೆಯೂ ಒಂದಾಗಿದೆ. ಬೀದಿ ದೀಪಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದರಿಂದ ಮೂಲಭೂತ ನಗರ ಸೇವೆಗಳ ಗುಣಮಟ್ಟ ಹೆಚ್ಚುವುದರ ಜೊತೆಗೆ, ಉತ್ತಮ ಬೆಳಕಿನ ವ್ಯವಸ್ಥೆಯು ನಗರದ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಸ್ಮಾರ್ಟ್ ಹಾಗೂ ಇಂಧನ ದಕ್ಷ ಬೀದಿ ದೀಪಗಳ ನಿರ್ವಹಣೆಗೆ ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆ ಜಾರಿ

ಬೀದಿ ದೀಪಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ಜಬಿಎ ವ್ಯಾಪ್ತಿಯಲ್ಲಿ ನಾಲ್ಕು ಪ್ರತ್ಯೇಕ ಬೀದಿ ದೀಪಗಳ ಕೇಂದ್ರೀಕೃತ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದೆ. ಈ ನಿಯಂತ್ರಣ ಕೊಠಡಿಗಳ ಮೂಲಕ ಡಿಜಿಟಲ್ ಡ್ಯಾಶ್‌ಬೋರ್ಡ್‌ನಲ್ಲಿ ಬೀದಿ ದೀಪಗಳ ಕಾರ್ಯನಿರ್ವಹಣೆ, ವಿದ್ಯುತ್ ಬಳಕೆ ಹಾಗೂ ದೋಷಗಳ ಕುರಿತು ಬರುವ ಎಚ್ಚರಿಕೆ ಸಂದೇಶಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಗುರುತಿಸಲಾದ ದೋಷಗಳು ಹಾಗೂ ನಾಗರಿಕರಿಂದ ಸ್ವೀಕರಿಸಲಾದ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ಕ್ಷೇತ್ರ ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗುತ್ತದೆ. ದೋಷ ಪತ್ತೆಯಾದ ಅಥವಾ ದೂರು ದಾಖಲಾದ 24ರಿಂದ 48 ಗಂಟೆಗಳ ಒಳಗಾಗಿ ಸಮಸ್ಯೆಯನ್ನು ಪರಿಹರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ದೋಷಗಳನ್ನು ಸರಿಪಡಿಸಲು ವಿಫಲವಾದಲ್ಲಿ, ನಿರ್ವಹಣಾ ಗುತ್ತಿಗೆದಾರರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಈ ಯೋಜನೆಯಡಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ಇಂಧನ ದಕ್ಷ ಎಲ್‌ಇಡಿ ದೀಪಗಳಾಗಿ ಬದಲಾಯಿಸುವುದರ ಜೊತೆಗೆ, ಈಗಾಗಲೇ ಅಳವಡಿಸಲಾಗಿರುವ ಎಲ್‌ಇಡಿ ಬೀದಿ ದೀಪಗಳನ್ನು ಬುದ್ಧಿವಂತ, ಜಿಎಸ್‌ಎಂ (GSM) ಸೌಲಭ್ಯ ಹೊಂದಿರುವ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗೆ ಸಂಪರ್ಕಿಸಲಾಗುತ್ತಿದೆ.

ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 5,00,381 ಎಲ್‌ಇಡಿ ಬೀದಿ ದೀಪಗಳನ್ನು ಈ ಯೋಜನೆಯಡಿ ಒಳಪಡಿಸಲಾಗಿದ್ದು, ಇದರಲ್ಲಿ 3,02,919 ಹೊಸ ಎಲ್‌ಇಡಿ ದೀಪಗಳ ಅಳವಡಿಕೆ, 1,97,432 ಈಗಾಗಲೇ ಅಳವಡಿಸಿರುವ ಎಲ್‌ಇಡಿ ದೀಪಗಳನ್ನು ಸಿಸಿಎಂಎಸ್ ವ್ಯವಸ್ಥೆಗೆ ಸಂಯೋಜಿಸುವುದು ಹಾಗೂ 24,677 ಸಿಸಿಎಂಎಸ್ ಘಟಕಗಳ ಅಳವಡಿಕೆ ಸೇರಿವೆ. ಈ ಯೋಜನೆಯಿಂದ ಶೇ.54ಕ್ಕೂ ಅಧಿಕ ವಿದ್ಯುತ್ ಉಳಿತಾಯವಾಗುವ ನಿರೀಕ್ಷೆಯಿದ್ದು, ವಿದ್ಯುತ್ ವೆಚ್ಚದಲ್ಲಿ ಗಣನೀಯ ಇಳಿಕೆಯಾಗುವುದರ ಜೊತೆಗೆ ಸುಸ್ಥಿರ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ.

ಅತ್ಯಾಧುನಿಕ ಸಿಸಿಎಂಎಸ್ ವ್ಯವಸ್ಥೆಯ ಮೂಲಕ ಎಲ್ಲಾ ಬೀದಿ ದೀಪಗಳನ್ನು ಕೇಂದ್ರೀಕೃತವಾಗಿ ಹಾಗೂ ಪ್ರತ್ಯೇಕವಾಗಿ ಮೇಲ್ವಿಚಾರಣೆ ಮಾಡಬಹುದು. ನಿಗದಿತ ಸಮಯಕ್ಕೆ ಸ್ವಯಂಚಾಲಿತವಾಗಿ ದೀಪಗಳನ್ನು ಆನ್ ಮತ್ತು ಆಫ್ ಮಾಡುವುದು, ಜಿಪಿಎಸ್ ಆಧಾರಿತ ಆಸ್ತಿಗಳ ಗುರುತಿಸುವಿಕೆ ಮತ್ತು ಸ್ಥಳ ಮಾಹಿತಿ, ನೈಜ ಸಮಯದಲ್ಲಿ ವಿದ್ಯುತ್ ಬಳಕೆಯ ಮೇಲ್ವಿಚಾರಣೆ ಹಾಗೂ ಬೆಳಗದ, ಮಿನುಗುವ ಮತ್ತು ಭಾಗಶಃ ಬೆಳಗುವ ಬೀದಿ ದೀಪಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಸೌಲಭ್ಯಗಳನ್ನು ಈ ವ್ಯವಸ್ಥೆ ಒಳಗೊಂಡಿದೆ.

ನಗರವ್ಯಾಪಿ ಅನುಷ್ಠಾನಗೊಳ್ಳುತ್ತಿರುವ ಈ ಮಹತ್ವದ ಯೋಜನೆಯ ಮೊದಲ ಹಂತದ ಮೈಲಿಗಲ್ಲಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವತಿಯಿಂದ ಜಯನಗರದಲ್ಲಿ ಮೊದಲ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ತಂತ್ರಜ್ಞಾನ ಆಧಾರಿತ ಬೀದಿ ದೀಪಗಳ ನಿರ್ವಹಣೆ ಹಾಗೂ ನಗರ ಮೂಲಸೌಕರ್ಯಗಳ ದೋಷಗಳನ್ನು ಮುಂಚಿತವಾಗಿಯೇ ಗುರುತಿಸಿ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ವಿದ್ಯುತ್ ಉಳಿತಾಯ ಮತ್ತು ವೆಚ್ಚ ಕಡಿತದ ಜೊತೆಗೆ, ಈ ಯೋಜನೆಯಿಂದ ರಸ್ತೆಗಳ ಬೆಳಕಿನ ಗುಣಮಟ್ಟ ಸುಧಾರಣೆ, ಸಾರ್ವಜನಿಕ ಸುರಕ್ಷತೆ ಹೆಚ್ಚಳ, ನಿರ್ವಹಣಾ ಕಾರ್ಯಗಳ ತ್ವರಿತ ಸ್ಪಂದನೆ ಹಾಗೂ ಇಂಧನ ವ್ಯರ್ಥವಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ.

ಈ ಮಹತ್ವದ ಯೋಜನೆಯ ಮೂಲಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಗರದ ಅಗತ್ಯ ಮೂಲಸೌಕರ್ಯಗಳನ್ನು ಆಧುನೀಕರಿಸುವುದು, ನಾಗರಿಕ ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು ಹಾಗೂ ಸ್ಮಾರ್ಟ್, ಸುರಕ್ಷಿತ ಮತ್ತು ಸುಸ್ಥಿರ ಬೆಂಗಳೂರನ್ನು ನಿರ್ಮಿಸುವ ಗುರಿಯನ್ನು ಜಿಬಿಎ ಹೊಂದಿದೆ.

ಈ ವೇಳೆ ಜಯನಗರ ಶಾಸಕರಾದ ಸಿ.ಕೆ ರಾಮಮೂರ್ತಿ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page