ಯುವ ಕ್ರೀಡಾಪಟುಗಳಿಗೆ ದಿವ್ಯಾ ಟಿ.ಎಸ್. ಅವರ ಸಾಧನೆ ಮಾದರಿಯಾಗಲಿ: ಡಾ. ಜಿ. ಪರಮೇಶ್ವರ
ಬೆಂಗಳೂರು:ದೋಹಾದಲ್ಲಿ ಇತ್ತೀಚೆಗೆ ನಡೆದ ಐಎಸ್ಎಸ್ಎಫ್ (ISSF) ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟು ದಿವ್ಯಾ ಟಿ.ಎಸ್. ಅವರನ್ನು ಉಪಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಇಂದು ಸದಾಶಿವನಗರದ ತಮ್ಮ ಗೃಹಕಚೇರಿಯಲ್ಲಿ ಅಭಿನಂದಿಸಿ ಶುಭಹಾರೈಸಿದರು.
ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದು ಸುಲಭದ ಸಾಧನೆಯಲ್ಲ. ದಿವ್ಯಾ ಅವರು ತಮ್ಮ ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ಈ ಸಾಧನೆ ಮಾಡಿದ್ದಾರೆ. ವಿಶ್ವಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿರುವುದು ಸಂತಸದ ಸಂಗತಿ. ಇದು ಕನ್ನಡಿಗರಿಗೆ ಹೆಮ್ಮೆ ತಂದುಕೊಟ್ಟಿದೆ ಎಂದು ಡಾ. ಜಿ. ಪರಮೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದಿವ್ಯಾ ಅವರ ಸಾಧನೆ ರಾಜ್ಯದ ಯುವ ಕ್ರೀಡಾಪಟುಗಳಿಗೆ, ವಿಶೇಷವಾಗಿ ಶೂಟಿಂಗ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಸ್ಫೂರ್ತಿಯಾಗಲಿ. ಪ್ರತಿಭೆಯ ಜೊತೆಗೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಮತ್ತು ಸಾಧಿಸುವ ಛಲವಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಯಶಸ್ಸು ಗಳಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿಯೂ ದಿವ್ಯಾ ಅವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲಲಿ. ಅವರ ಕ್ರೀಡಾ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ. ದೇಶ ಮತ್ತು ರಾಜ್ಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಡಾ. ಜಿ. ಪರಮೇಶ್ವರ ಅವರು ಈ ಸಂದರ್ಭದಲ್ಲಿ ಮನದುಂಬಿ ಹಾರೈಸಿದರು.
