ಸಮಗ್ರ ಸುದ್ದಿ

ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ರೀತಿಯ ಸಿದ್ಧತೆ|ಸುವರ್ಣಸೌಧಕ್ಕೆ ನಿರಂತರ ವಿದ್ಯುತ್ ಪೂರೈಕೆಗಾಗಿ ವಿಶೇಷ ಕಾರ್ಯ ನಿರ್ವಹಣೆ ಹಾಗೂ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಿಲ್ಲ

Share

ಬೆಳಗಾವಿ: ರಾಜ್ಯದ ಆಡಳಿತಾತ್ಮಕ ಪ್ರಮುಖ ಕೇಂದ್ರವಾಗಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2 ರಿಂದ 11ರವರೆಗೆ ನಡೆಯಲಿರುವ 2026ರ ಚಳಿಗಾಲದ ಅಧಿವೇಶನಕ್ಕೆ ನಿರಂತರ, ಗುಣಮಟ್ಟದ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಕಲ್ಪಿಸಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಕಲ ರೀತಿಯಲ್ಲಿ ಸಜ್ಜಾಗಿದೆ.

ಅಧಿವೇಶನದ ಹತ್ತು ದಿನಗಳ ಅವಧಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಹೆಸ್ಕಾಂ, ಸುವರ್ಣಸೌಧ ಸೇರಿದಂತೆ ಬೆಳಗಾವಿ ನಗರದ ಪ್ರಮುಖ ಪ್ರದೇಶಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ವಿಶೇಷ ನಿರ್ವಹಣಾ ಕಾರ್ಯಾಚರಣೆಗೆ ಚಾಲನೆ ನೀಡಿದೆ.

ಅಧಿವೇಶನಕ್ಕೆ ಆಗಮಿಸುವ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಹೆಸ್ಕಾಂನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಮಾರ್ಗಗಳ ಪರಿಶೀಲನೆ, ನಿರ್ವಹಣೆ ಹಾಗೂ ಅಗತ್ಯ ದುರಸ್ತಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಸಂಭವನೀಯ ತಾಂತ್ರಿಕ ದೋಷಗಳು ಮತ್ತು ವಿದ್ಯುತ್ ವ್ಯತ್ಯಯಗಳನ್ನು ಮುಂಚಿತವಾಗಿಯೇ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯ ಭಾಗವಾಗಿ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವತಿಯಿಂದ ಈ ವಾರದಲ್ಲಿ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ನವೆಂಬರ್ 14 ರಂದು ಸುವರ್ಣ ಸೌಧದ ಫೀಡರಗಳಿಗೆ ಸಂಬಂಧಿಸಿದಂತೆ ನಿರ್ವಹಣಾ ಕಾರ್ಯ ಕೈಗೊಂಡಿದ್ದು, ಈ ಕುರಿತು ಮುಂಚಿತವಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ. ಚಳಿಗಾಲದ ಅಧಿವೇಶನಕ್ಕೆ ಯಾವುದೇ ಅಡಚಣೆಯಿಲ್ಲದೆ ನಿರಂತರ, ಗುಣಮಟ್ಟದ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಕಲ್ಪಿಸುವುದು ಹೆಸ್ಕಾಂನ ಪ್ರಮುಖ ಆದ್ಯತೆಯಾಗಿದೆ. ಸುವರ್ಣಸೌಧದಕ್ಕೆ ಸಂಬಂಧಿಸಿದಂತೆ ವಿದ್ಯುತ್ ಬಳಕೆಯ ಬಿಲ್‌ಗಳು ಕಾಲಕಾಲಕ್ಕೆ ನಿಗದಿತ ಅವಧಿಯೊಳಗೆ ನಿಯಮಿತವಾಗಿ ಸಂದಾಯವಾಗುತ್ತಿದೆ ಹಾಗೂ ಯಾವುದೇ ರೀತಿಯ ಸಮಸ್ಯೆಯಿರುವುದಿಲ್ಲ. ಈ ಕಾರಣಕ್ಕಾಗಿ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಿಲ್ಲ.

ಸುವರ್ಣಸೌಧಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಮುಖ ವಿದ್ಯುತ್ ಮಾರ್ಗಗಳಾದ ಬಸವೇಶ್ವರ ಸರ್ಕಲ್, ಹರಿಕಾಕಾ ಕಾಂಪೌಂಡ್ ಹಾಗೂ ಯಡಿಯೂರಪ್ಪ ರಸ್ತೆ ಫೀಡರ್‌ಗಳ ಸಮಗ್ರ ಪರಿಶೀಲನೆ, ನಿರ್ವಹಣೆ ಮತ್ತು ಅಗತ್ಯ ದುರಸ್ತಿ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆ. ಈ ಮೂಲಕ ವಿದ್ಯುತ್ ವಿತರಣಾ ಜಾಲದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದರ ಜತೆಗೆ ಅಧಿವೇಶನದ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ವಿದ್ಯುತ್ ವ್ಯವಸ್ಥೆಯಲ್ಲಿ ಉಂಟಾಗಬಹುದಾದ ಸಂಭಾವ್ಯ ತಾಂತ್ರಿಕ ದೋಷಗಳನ್ನು ಮೊದಲ ಹಂತದಲ್ಲಿಯೇ ಗುರುತಿಸಿ ಪರಿಹರಿಸುವುದರ ಜತೆಗೆ, ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಸ್ಪಂದಿಸಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ಸನ್ನದ್ಧರಾಗಿರಬೇಕು. ಸಾರ್ವಜನಿಕರಿಗೆ ಹಾಗೂ ಅಧಿವೇಶನದ ಕಾರ್ಯಕಲಾಪಗಳಿಗೆ ನಿರಂತರ ವಿದ್ಯುತ್ ಸೇವೆ ಒದಗಿಸುವ ನಿಟ್ಟಿನಲ್ಲಿ ಹೆಸ್ಕಾಂ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಚಳಿಗಾಲದ ಅಧಿವೇಶನ ಸುಗಮವಾಗಿ ನಡೆಯಲು ಅಗತ್ಯವಿರುವ ವಿದ್ಯುತ್ ಮೂಲಸೌಕರ್ಯವನ್ನು ಸಜ್ಜುಗೊಳಿಸುವಲ್ಲಿ ಹೆಸ್ಕಾಂ ಕಾರ್ಯಪ್ರವೃತ್ತವಾಗಿದ್ದು, ಮುನ್ನೆಚ್ಚರಿಕೆ, ಸಮರ್ಪಕ ನಿರ್ವಹಣೆ ಹಾಗೂ ತ್ವರಿತ ಸ್ಪಂದನೆಯ ಮೂಲಕ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಸೇವೆ ಒದಗಿಸಲು ಬದ್ಧವಾಗಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಚಳಿಗಾಲದ ಅಧಿವೇಶನಕ್ಕೆ ಯಾವುದೇ ಅಡಚಣೆಯಿಲ್ಲದೆ ನಿರಂತರ, ಗುಣಮಟ್ಟದ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಕಲ್ಪಿಸುವುದು ಹೆಸ್ಕಾಂನ ಪ್ರಮುಖ ಆದ್ಯತೆಯಾಗಿದೆ. ವಿದ್ಯುತ್ ವ್ಯತ್ಯಯಕ್ಕೆ ಅವಕಾಶವಾಗದಂತೆ ಮುಂಚಿತವಾಗಿಯೇ ಹೆಸ್ಕಾಂ ಹಾಗೂ ಕೆಪಿಟಿಸಿಎಲ್‌ನಿಂದ ಅಗತ್ಯ ನಿರ್ವಹಣೆ, ತಾಂತ್ರಿಕ ಪರಿಶೀಲನೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸುವರ್ಣಸೌಧದಕ್ಕೆ ಸಂಬಂಧಿಸಿದಂತೆ ವಿದ್ಯುತ್ ಬಳಕೆಯ ಬಿಲ್‌ಗಳು ಕಾಲಕಾಲಕ್ಕೆ ನಿಗದಿತ ಅವಧಿಯೊಳಗೆ ನಿಯಮಿತವಾಗಿ ಸಂದಾಯವಾಗುತ್ತಿದೆ ಹಾಗೂ ಯಾವುದೇ ರೀತಿಯ ಸಮಸ್ಯೆಯಿರುವುದಿಲ್ಲ.-ಹೇಮಂತ್‌ ಎನ್. ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ


Share

You cannot copy content of this page