ನೆಲಮಂಗಲ:ವೈದ್ಯಕೀಯ ಸೇವೆಯ ಮೂಲಕ ವಿಶ್ವದ ಗಮನ ಸೆಳೆದಿರುವ ಡಾ. ರಮಣರಾವ್ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸಿ, ಪ್ರತಿ ಭಾನುವಾರ ನಿರಂತರವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ನೆಲಮಂಗಲ ತಾಲ್ಲೂಕಿನ ಟಿ.ಬೇಗೂರಿನ ಡಾ. ಬಿ.ರಮಣರಾವ್ ಅವರ “ಹಳ್ಳಿ ಕ್ಲಿನಿಕ್” ನಲ್ಲಿ ಭಾನುವಾರ ನಡೆದ ಗಿನ್ನೀಸ್ ಬುಕ್ ರೆಕಾರ್ಡ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ. ರಮಣರಾವ್ ಅವರ ವೈದ್ಯಕೀಯ ಸೇವೆಯನ್ನು ಗುರುತಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಗೌರವಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. 2,777 ಭಾನುವಾರ ಸುಮಾರು 33 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇಂತಹ ಅಪರೂಪದ ಸೇವಾ ಮನೋಭಾವ ಎಲ್ಲರಲ್ಲೂ ಮೂಡುವುದಿಲ್ಲ ಎಂದು ಡಿಸಿಎಂ ಪರಮೇಶ್ವರ ಅವರು ಹೇಳಿದರು.
ಹಳ್ಳಿಗೆ ತೆರಳಿ ಅಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ರಮಣರಾವ್ ಅವರ ಸೇವೆ ಅನನ್ಯವಾಗಿದೆ. ಅವರ ಈ ಮಹತ್ವದ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಚಾರ. ಇದೀಗ ಗಿನ್ನೆಸ್ ಸಂಸ್ಥೆಯೂ ಅವರ ಸೇವೆಯನ್ನು ಗುರುತಿಸಿರುವುದು ಮತ್ತಷ್ಟು ಸಂತಸ ತಂದಿದೆ ಎಂದರು.
1972ರಿಂದಲೂ ಅವರು ಸಲ್ಲಿಸುತ್ತಿರುವ ವೈದ್ಯಕೀಯ ಸೇವೆಯ ಮಾಹಿತಿಯನ್ನು ಪರಿಗಣಿಸಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ನಿರಂತರ ಸೇವೆ ಸಲ್ಲಿಸುತ್ತಿರುವ ವೈದ್ಯರ ಸಾಧನೆಯನ್ನು ವಿಶ್ವಮಟ್ಟದಲ್ಲಿ ಗುರುತಿಸಿರುವುದು ವಿಶೇಷವಾಗಿದೆ. ಈ ಸಾಧನೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಹಾಗೂ ಗೌರವಗಳು ದೊರೆಯಬೇಕು ಎಂದು ಆಶಿಸಿದರು.
ರಮಣರಾವ್ ಅವರ ಸೇವಾ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನ್ನ ಸಂತಸ ತಂದಿದೆ. ಸೇವೆ ಸಲ್ಲಿಸಬೇಕು ಎಂಬ ಮನೋಭಾವವನ್ನು ಯಾರೂ ಬಲವಂತವಾಗಿ ಕಲಿಸಲು ಸಾಧ್ಯವಿಲ್ಲ. ಅದು ಪ್ರತಿಯೊಬ್ಬರ ಮನಸ್ಸಿನಿಂದಲೇ ಮೂಡಿಬರಬೇಕು. ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದು, ಅವರೆಲ್ಲರೂ ರಮಣರಾವ್ ಅವರ ಸೇವಾ ಮನೋಭಾವವನ್ನು ಅಳವಡಿಸಿಕೊಂಡರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಪದವಿ ಪಡೆಯುವ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ವೈದ್ಯರು ಪ್ರಮಾಣ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆ ಹೆಚ್ಚು ವಾಣಿಜ್ಯೀಕರಣಗೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಣ ನೀಡಿದರೆ ಮಾತ್ರ ಚಿಕಿತ್ಸೆ ದೊರೆಯುತ್ತದೆ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಡಾ. ರಮಣರಾವ್ ಅವರ ನಿಸ್ವಾರ್ಥ ಸೇವೆ ವೈದ್ಯಕೀಯ ವೃತ್ತಿಯ ಮೂಲ ಆಶಯವನ್ನು ನೆನಪಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 6,000 ಆರೋಗ್ಯ ಕೇಂದ್ರಗಳಿದ್ದು, ಸಾವಿರಾರು ವೈದ್ಯರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬ ವೈದ್ಯರೂ ರಮಣರಾವ್ ಅವರ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ನಾನೂ ಕೂಡ ಡಾ. ರಮಣರಾವ್ ಅವರ ಬಳಿ ಚಿಕಿತ್ಸೆ ಪಡೆಯುತ್ತೇನೆ. ರೋಗಿಗಳನ್ನು ಪ್ರೀತಿ, ಗೌರವ ಹಾಗೂ ಆತ್ಮೀಯತೆಯಿಂದ ಕಾಣುವ ಅವರ ಗುಣ ನಿಜಕ್ಕೂ ಅನುಕರಣೀಯ. ಇಂತಹ ಮಾನವೀಯ ಮೌಲ್ಯಗಳನ್ನು ಕೇವಲ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ; ಅವು ನಮ್ಮ ನಡವಳಿಕೆಯಲ್ಲಿ ಪ್ರತಿಬಿಂಬಿಸಬೇಕು ಎಂದು ತಿಳಿಸಿದರು.
ಡಾ. ರಮಣರಾವ್ ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ, ಆಯುಷ್ಯ ಹಾಗೂ ಶಕ್ತಿಯನ್ನು ಕರುಣಿಸಲಿ. ಅವರ ಸೇವಾ ಕಾರ್ಯ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲಿ ಎಂದು ಹಾರೈಸಿ, ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ರಿಷಿನಾಥ್, ಡಾ. ಬಿ.ರಮಣರಾವ್, ಹೇಮ ರಮಣರಾವ್, ಡಾ. ಶರೀತ್ ಭೋಗರಾಜ್, ಡಾ. ಶಾಂತಿನಿ, ಡಾ.ಅಭಿಜಿತ್ ಭೋಗರಾಜ್, ಡಾ. ಜಾಹ್ನವಿ ಮುಂತಾದವರು ಇದ್ದರು.
