ಬೆಂಗಳೂರು: ಪರಿಶಿಷ್ಟ ಪಂಗಡಗಳ ಯುವಕ/ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಬೇಕು ಎಂಬ ಮುಖ್ಯ ಧ್ಯೇಯದೊಂದಿಗೆ ಕಾಂಗ್ರೆಸ್ ಸರ್ಕಾರ ಈಗ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ.
ಇದರಿಂದ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಆಶಯವನ್ನು ಹೊಂದಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರ ಕಾಳಜಿಯಿಂದ ಈ ವಿಶೇಷ ಸೌಲಭ್ಯ ಜಾರಿಗೆ ಬರುತ್ತಿದೆ.
ಪರಿಶಿಷ್ಟ ಪಂಗಡದ ಯುವಕ/ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಆರಂಭಿಸಲು ಪರಿಶಿಷ್ಟ ಪಂಗಡಗಳ ಇಲಾಖೆಯ ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಅವಕಾಶ ಕಲ್ಪಿಸಲಾಗುತ್ತಿದೆ.
ಇದಕ್ಕಾಗಿ ಘಟಕ ವೆಚ್ಚದ ಶೇ. 75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಈ ವಿಶೇಷ ಯೋಜನೆಗೆ ಕಳೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ಕಳೆದ ಬಜೆಟ್ನಲ್ಲಿ ಈ ಯೋಜನೆ ಆರಂಭಿಸುವ ಬಗ್ಗೆ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಘೋಷಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ಸಚಿವರಾಗಿ ಟಿ. ರಘುಮೂರ್ತಿ ಜವಾಬ್ದಾರಿ ವಹಿಸಿಕೊಂಡ ನಂತರ ಇದನ್ನು ಕಾರ್ಯರೂಪಕ್ಕೆ ತರುವ ಕುರಿತು ಗಮನ ಹರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವಂತೆ ಮುತುವರ್ಜಿ ವಹಿಸಿದರಲ್ಲದೇ ಅದಕ್ಕೆ ಅನುಮೋದನೆ ದೊರೆಯುವಂತೆ ಕ್ರಮ ವಹಿಸಿದ್ದಾರೆ.
ಉದ್ದೇಶಿಸಿರುವ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಬ್ಯಾಂಕ್/ಹಣಕಾಸು ಸಂಸ್ಥೆಗಳಿಂದ ಸೌಲಭ್ಯ ಒದಗಿಸಲು ಹಾಗೂ ಸಹಾಯಧನ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಎಂ. ಕನಗವಲ್ಲಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಅಶೋಕ್ ಡಿ.ಆರ್. ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಆದಿವಾಸಿಗಳೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಮುದಾಯಗಳು ಬರುತ್ತವೆ. ಈ ಆಹಾರ ಮಳಿಗೆ/ಟ್ರಕ್/ಕಿಯೋಸ್ಕ್ ಯೋಜನೆಗಳು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಎಲ್ಲಾ ಸಮುದಾಯಗಳಿಗೆ ಅನ್ವಯಿಸುತದೆ.
ಪರಿಶಿಷ್ಟ ಪಂಗಡ ಸಮುದಾಯದವರ ಆರ್ಥಿಕ ಸಬಲೀಕರಣವಾಗಲಿದೆ ಮತ್ತು ಮುಖ್ಯವಾಗಿ ಅನಿಯಂತ್ರಿತ ಬೀದಿ ಮಾರಾಟಕ್ಕೆ ಹೋಲಿಸಿದರೆ ಪ್ರಮಾಣೀಕೃತ ಮೊಬೈಲ್ ಘಟಕಗಳು ಉತ್ತಮ ಮತ್ತು ಗುಣಮಟ್ಟದ ಆಹಾರ ಒದಗಿಸಬಹುದಾಗಿದೆ. ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂದೆಯೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಯೋಜನೆ ಸಾವಿರಾರು ಮಂದಿಗೆ ನೆರವಾಗಲಿ, ಅವರು ಇನ್ನಷ್ಟು ಸಾವಿರಾರು ಮಂದಿಗೆ ಉದ್ಯೋಗ ಕೊಡಿಸಲಿ ಎನ್ನುವುದೇ ನಮ್ಮ ಉದ್ದೇಶ.– ಟಿ. ರಘುಮೂರ್ತಿ
ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ*
