ಸಮಗ್ರ ಸುದ್ದಿ

ಕೊಪ್ಪಳದಲ್ಲಿ ಶೀಘ್ರವೇ ಪ್ರತ್ಯೇಕ ಎಸ್‌ಟಿ ಜಿಲ್ಲಾ ಕಚೇರಿ ಸ್ಥಾಪನೆ: ಸಚಿವ ಶಿವರಾಜ್ ತಂಗಡಗಿ

Share

ಕೊಪ್ಪಳ:ಕೊಪ್ಪಳ ಜಿಲ್ಲೆಯಲ್ಲಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಜಿಲ್ಲಾ ಕಚೇರಿಯನ್ನು ಶೀಘ್ರದಲ್ಲೇ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ಭರವಸೆ ನೀಡಿದರು.

ಕಾರಟಗಿಯಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಪರಿಶಿಷ್ಟ ಪಂಗಡದ ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಟಿ ಜಿಲ್ಲಾ ಕಚೇರಿ ಸ್ಥಾಪನೆ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದು, ಕಚೇರಿ ಸ್ಥಾಪನೆಗೆ ಭರವಸೆ ದೊರೆತಿದೆ ಎಂದು ತಿಳಿಸಿದರು.

ದೇವಾಲಯ ನಿರ್ಮಾಣಕ್ಕೆ ಹತ್ತು ಲಕ್ಷ ದೇಣಿಗೆ: ಕನಕಗಿರಿ ಮತ್ತು ಕಾರಟಗಿಯಲ್ಲಿ ಬೃಹತ್ ವಾಲ್ಮೀಕಿ ಸಮುದಾಯ ಭವನಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ತಲಾ ಎರಡು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ ಎಸ್ಟಿ ಸಮುದಾಯ ಭವನಗಳ ನಿರ್ಮಾಣಕ್ಕೆ 7.79 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅಗತ್ಯ ಬಿದ್ದರೆ ಕಾಮಗಾರಿ ಪ್ರಗತಿಯ ಹಂತದಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು. ಇನ್ನು ಎಸ್ಟಿ ಸಮುದಾಯದ ದೇವಾಲಯ ನಿರ್ಮಾಣಕ್ಕೆ ಹತ್ತು ಲಕ್ಷ ದೇಣಿಗೆ ನೀಡುವುದಾಗಿ ಸಚಿವರು ಹೇಳಿದರು.

ಕನಕದಾಸರು, ಮಹಾತ್ಮ ಗಾಂಧೀಜಿ, ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣ ಸೇರಿದಂತೆ ಮಹನೀಯರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ನಾಡಿಗೆ ನೀಡಿದ ಕೊಡುಗೆ ಮತ್ತು ಅವರ ತತ್ವಾದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ. ಅಂಬೇಡ್ಕರ್ ಅವರ ಕೊಡುಗೆಯಿಂದಲೇ ಇಂದು ನಾನು ಈ ಸ್ಥಾನದಲ್ಲಿರಲು ಸಾಧ್ಯವಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ನನ್ನ ಗೆಲುವಿನಲ್ಲಿ ವಾಲ್ಮೀಕಿ ಸಮುದಾಯದ ಕೊಡುಗೆ ಅಪಾರವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಐದು ವರ್ಷಗಳ ಕಾಲ ನೀವು ನನ್ನನ್ನು ಪ್ರಶ್ನಿಸಬಹುದು. ಆದರೆ, ನಾನು ಐದು ವರ್ಷಕ್ಕೊಮ್ಮೆ ನಿಮ್ಮನ್ನು ಭೇಟಿಯಾಗಿ ನಿಮ್ಮ ಬೆಂಬಲ ಕೋರುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಏಷ್ಯಾದಲ್ಲೇ ಅತಿ ದೊಡ್ಡ ರೈಸ್ ಟೆಕ್ನಾಲಜಿ ಪಾರ್ಕ್, ಪ್ರಜಾಸೌಧ ಹಾಗೂ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೆರೆ ತುಂಬಿಸುವ ಯೋಜನೆ ಜಾರಿಗೆ ತರುವ ಮೂಲಕ ನೀರಿನ ಬವಣೆ ನಿವಾರಿಸುವ ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಶ್ರೀಮಂತ‌ ಇತಿಹಾಸ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಜಗತ್ತಿಗೆ ಆದರ್ಶ ಜೀವನದ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ವಾಲ್ಮೀಕಿ ಸಮುದಾಯಕ್ಕೆ ಶೌರ್ಯ, ಸಾಹಸ, ಸ್ವಾಭಿಮಾನ ಹಾಗೂ ತ್ಯಾಗದ ಶ್ರೀಮಂತ ಇತಿಹಾಸವಿದೆ. ಕನ್ನಡ ನಾಡಿನ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಗಂಡುಗಲಿ ಕುಮಾರರಾಮ ಅವರು ಈ ಸಮುದಾಯದ ಹೆಮ್ಮೆಯ ಪ್ರತೀಕವಾಗಿದ್ದಾರೆ. ಅವರ ಶೌರ್ಯ, ಪರಾಕ್ರಮ ಮತ್ತು ನಾಡಿನ ರಕ್ಷಣೆಗೆ ತೋರಿದ ಧೈರ್ಯ ಇಂದಿನ ಯುವಜನತೆಗೆ ಸದಾ ಸ್ಫೂರ್ತಿಯಾಗಬೇಕು.

ಮೈಸೂರು ದಸರಾ ಸೇರಿದಂತೆ ನಮ್ಮ ನಾಡಿನ ಐತಿಹಾಸಿಕ ಪರಂಪರೆ ಮತ್ತು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸುವಾಗ ಕುಮಾರರಾಮರಂತಹ ವೀರರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ವಾಲ್ಮೀಕಿ ಸಮುದಾಯದ ಇತಿಹಾಸ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ; ಅದು ಇಡೀ ಕನ್ನಡ ನಾಡಿನ ಹೆಮ್ಮೆಯ ಇತಿಹಾಸವಾಗಿದೆ. ಈ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.


Share

You cannot copy content of this page