ಸಮಗ್ರ ಸುದ್ದಿ

‎ಬೆಂಗಳೂರಿನಲ್ಲಿ ಲೆಕ್ಕಪರಿಶೋಧನೆ ಇಲಾಖೆಯಿಂದ ಬೃಹತ್ ವಾಕಥಾನ್

Share

ಬೆಂಗಳೂರು:ದೈಹಿಕ ಸದೃಢತೆಯೇ ಜೀವನದ ಅಡಿಪಾಯ ಎಂಬ ಸಂದೇಶ ಸಾರುತ್ತ, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ (Indian Audit and Accounts Department) ವತಿಯಿಂದ ನಗರದಲ್ಲಿ ಭಾನುವಾರ ಬೃಹತ್ ವಾಕಥಾನ್ ನಡೆಯಿತು.
‎
‎ಇಂದು ಬೆಳಿಗ್ಗೆ ಕೆಪಿಎಸ್ಸಿ ಎದುರಿನ ಎ.ಜಿ.ಎಸ್. ಕಚೇರಿಯಿಂದ ಆರಂಭವಾದ ಈ ವಾಕಥಾನ್‌ನಲ್ಲಿ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬ ಸಮೇತ ಉತ್ಸಾಹದಿಂದ ಹೆಜ್ಜೆ ಹಾಕಿದರು.
‎
‎ವಾಕಥಾನ್ ಎ.ಜಿ.ಎಸ್. ಕಚೇರಿಯಿಂದ ಆರಂಭವಾಗಿ, ಹೈಕೋರ್ಟ್, ವಿ.ವಿ. ಟವರ್, ಕಬ್ಬನ್ ಪಾರ್ಕ್, ಎಂ.ಎಸ್. ಬಿಲ್ಡಿಂಗ್ ಮಾರ್ಗವಾಗಿ ಸುಮಾರು 5 ಕಿ.ಮೀ. ಕ್ರಮಿಸಿ, ಮತ್ತೆ ಎ.ಜಿ.ಎಸ್. ಕಚೇರಿಗೆ ತಲುಪಿತು.
‎
‎ಅಂತಾರಾಷ್ಟ್ರೀಯ ಕ್ರೀಡಾಪಟು ಚಾಲನೆ
‎
‎ಅಂತಾರಾಷ್ಟ್ರೀಯ ಕ್ರೀಡಾಪಟು ಜಯಪ್ರಕಾಶ್ ಸಿ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಾಕಥಾನ್‌ಗೆ ಚಾಲನೆ ನೀಡಿದರು.
‎
‎ನಂತರ ಅವರು, ತಮ್ಮ ಕ್ರೀಡಾ ಜೀವನದ ಅನುಭವ ಹಂಚಿಕೊಂಡರಲ್ಲದೆ, “ದಿನಕ್ಕೆ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಟ್ಟರೆ, ಜೀವನವಿಡೀ ಆರೋಗ್ಯವಾಗಿರಬಹುದು” ಎಂದು ಹೇಳಿದರು.
‎
‎ಹಿರಿಯ ಅಧಿಕಾರಿಗಳ ಭಾಗವಹಿಸುವಿಕೆ
‎
‎ಕಾರ್ಯಕ್ರಮದಲ್ಲಿ ಪ್ರಧಾನ ಮಹಾಲೇಖಪಾಲರ ಕಚೇರಿಯ ಹಿರಿಯ ಅಧಿಕಾರಿಗಳಾದ ರಾಜೀವ್ ಸಿಂಗ್, ಇನಾಂದಾರ್, ಅಶೋಕ್ ಸಿನ್ಹಾ, ಅನಿತಾ ಬಾಲಕೃಷ್ಣ, ಹಿರಿಯ ಉಪ ಮಹಾಲೇಖಪಾಲರಾದ ವಿನೋದ್, ಅರುಣ್, ಲಿಂಗರಾಜ್ ಮತ್ತು ಸುಬ್ಬಯ್ಯ, ಕಲ್ಯಾಣ ಅಧಿಕಾರಿಗಳಾದ ಮಂಜುಳಾ ಗೋಪಾಲಕೃಷ್ಣ, ಶಶಿಕಲಾ, ಕಾರ್ಯಕ್ರಮ ಸಂಯೋಜಕ ಕೆ. ಗೋಪಾಲಕೃಷ್ಣ ಮತ್ತಿತರರು ಪಾಲ್ಗೊಂಡರು.
‎
‎ವಿವಿಧ ಕಚೇರಿಗಳು – ಒಂದೇ ಹೆಜ್ಜೆ
‎
‎ಕೇವಲ ನಡಿಗೆಯಲ್ಲ, ಇದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಒಂದು ಜನಾಂದೋಲನದಂತೆ ಕಂಡುಬಂದಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಇಲಾಖೆಯ ವಿವಿಧ ಕ್ಷೇತ್ರ ಕಚೇರಿಗಳು ಒಂದೇ ವೇದಿಕೆಯಲ್ಲಿ ಒಂದಾದುದು.
‎
‎ಮಹಾಲೇಖಪಾಲರ ಕಚೇರಿ (ಲೆಕ್ಕ ಮತ್ತು ಹಕ್ಕುಪತ್ರ), ಪ್ರಧಾನ ಮಹಾಲೇಖಪಾಲರ ಕಚೇರಿ (ಲೆಕ್ಕಪರಿಶೋಧನೆ), ರಕ್ಷಣಾ ವಾಣಿಜ್ಯ ವಿಭಾಗದ ಲೆಕ್ಕಪರಿಶೋಧನೆಯ ಮಹಾನಿರ್ದೇಶಕರ ಕಚೇರಿ ಸೇರಿದಂತೆ ಇತರ ಸಹೋದರ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ, ಇಲಾಖೆಯ ಏಕತೆ, ಸಹಕಾರ ಮತ್ತು ತಂಡಭಾವನೆಯನ್ನು ಪ್ರದರ್ಶಿಸಿದರು.
‎
‎ವಾಕಥಾನ್ ಉದ್ದೇಶವೇನು?
‎
‎ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ದೈನಂದಿನ ಬದುಕಿನಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು ಎಂಬುದು ಈ ವಾಕಥಾನ್‌ನ ಮುಖ್ಯ ಸಂದೇಶವಾಗಿತ್ತು.
‎
‎ವೃತ್ತಿಪರ ಒತ್ತಡಗಳ ನಡುವೆಯೂ ಆರೋಗ್ಯಕ್ಕೆ ಆದ್ಯತೆ ನೀಡುವುದು, ಪರಸ್ಪರ ಸೌಹಾರ್ದತೆ ಬೆಳೆಸುವುದು ಮತ್ತು ಆರೋಗ್ಯಕರ ಕಾರ್ಯಸಂಸ್ಕೃತಿಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
‎
‎ವಿವಿಧ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದ ವಾಕಥಾನ್ ಅರ್ಥಪೂರ್ಣವಾಗಿ ಯಶಸ್ವಿಯಾಯಿತು.
‎
‎ಇದರ ಮೂಲಕ ಇಲಾಖೆಯು, ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಆರೋಗ್ಯ, ಕ್ಷೇಮ ಮತ್ತು ಸಕ್ರಿಯ ಜೀವನಶೈಲಿಯ ಸಂಸ್ಕೃತಿಯನ್ನು ಉತ್ತೇಜಿಸುವ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿತು.
‎
‎


Share

You cannot copy content of this page