ಬೆಂಗಳೂರು:ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಇದೆ. ಆ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ಹಾಗೂ ಎಲ್ಲರಿಗೂ ಬದುಕು ಕಟ್ಟಿಕೊಟ್ಟಿರುವ ಇಡೀ ನಗರವನ್ನು ಒಂದು ದೊಡ್ಡ ಊರಿನಂತೆ ಕಂಡು ಜನರೆಲ್ಲರೂ ಒಟ್ಟಾಗಿ ಸಂಭ್ರಮಿಸುವ ಉದ್ದೇಶದಿಂದ “ಬೆಂಗಳೂರು ಜಾತ್ರೆ” ಹೆಸರಿನಲ್ಲಿ ಬೆಂಗಳೂರು ಊರಹಬ್ಬವನ್ನು ಡಿಸೆಂಬರ್ 4ರಿಂದ 13ರವರೆಗೆ ಆಯೋಜಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ನಗರದ ಬೆಳವಣಿಗೆಗೆ ತಕ್ಕಂತೆ ಜನರ ಜೀವನದ ಗುಣಮಟ್ಟವೂ ಸುಧಾರಿಸಬೇಕು. ಜೀವನದ ಗುಣಮಟ್ಟ ಕೇವಲ ಮೂಲಸೌಕರ್ಯಕ್ಕೆ ಸೀಮಿತವಲ್ಲ; ಕಲೆ, ಸಾಹಿತ್ಯ, ಸಂಸ್ಕೃತಿ, ಹವ್ಯಾಸಗಳು ಮತ್ತು ಸಾರ್ವಜನಿಕ ಚಟುವಟಿಕೆಗಳೂ ವ್ಯಕ್ತಿಯ ಜೀವನವನ್ನು ಸಮಗ್ರವಾಗಿಸುತ್ತವೆ. 2023 ರಲ್ಲೇ ಮೂಡಿದ ಈ ಆಲೋಚನೆಯನ್ನು ಈ ವರ್ಷ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಜನರ ಭಾಗವಹಿಸುವಿಕೆ ಮತ್ತು ವಿಕೇಂದ್ರೀಕೃತ ಆಯೋಜನೆ:
ಬೆಂಗಳೂರು ಜಾತ್ರೆ ಕೇವಲ ಸರ್ಕಾರದ ಕಾರ್ಯಕ್ರಮವಾಗಿರದೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಕಲಾವಿದರು ಮತ್ತು ವಿವಿಧ ಸಮುದಾಯಗಳೇ ಭಾಗಿಯಾಗುವ ಜನಹಬ್ಬವಾಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ. ಹಿಂದೆ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಸುಮಾರು 300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಬೆಂಗಳೂರು ಇಂದು ಸುಮಾರು 750 ಚದರ ಕಿಲೋಮೀಟರ್ಗೆ ವಿಸ್ತರಿಸಿದೆ. ಇದಕ್ಕೆ ಅನುಗುಣವಾಗಿ, ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಪಾಲಿಕೆಗಳು, ರಸ್ತೆಗಳು, ಉದ್ಯಾನವನಗಳು, ಸಭಾಂಗಣಗಳು, ಕಾಲೇಜು ಮೈದಾನಗಳು, ಮಾಲ್ಗಳು, ಟೆಕ್ ಪಾರ್ಕ್ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ವಿಕೇಂದ್ರೀಕೃತವಾಗಿ ನಡೆಸಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊಲೀಸ್ ಇಲಾಖೆ, ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ, ಬೆಂಗಳೂರು ಮೆಟ್ರೋ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು ಹಾಗೂ ನಾಗರಿಕ ಸಂಘಟನೆಗಳ ಸಹಯೋಗದಲ್ಲಿ ಹಬ್ಬ ಜರುಗಲಿದೆ.
ಉದ್ಘಾಟನೆ, ಸ್ಥಳೀಯ ವೇದಿಕೆಗಳು ಮತ್ತು ಸಮಾರೋಪ
ಡಿಸೆಂಬರ್ 4 (ಉದ್ಘಾಟನೆ): ಹಳೆಯ ಬೆಂಗಳೂರಿನ ಪ್ರಮುಖ ಗುರುತುಗಳಲ್ಲೊಂದಾದ ಬ್ರಿಗೇಡ್ ರಸ್ತೆ ಮತ್ತು ಎಂ.ಜಿ. ರಸ್ತೆಯ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸಲಾಗುವುದು. ಸಂಚಾರ ಕಡಿಮೆ ಇರುವ ಎಂ.ಜಿ. ರಸ್ತೆ ಮತ್ತು ಕಬ್ಬನ್ ರಸ್ತೆ ನಡುವಿನ ಕಾಮರಾಜ ರಸ್ತೆ ಸಂಪರ್ಕ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು 500 ಜನಪದ ಕಲಾವಿದರು 20 ಕಲಾತಂಡಗಳೊಂದಿಗೆ ಆಗಮಿಸಿ ಕರ್ನಾಟಕದ ಬಹುಸಂಸ್ಕೃತಿಯನ್ನು ಪ್ರದರ್ಶಿಸುವ ಮೆರವಣಿಗೆನಡೆಸಲಿದ್ದಾರೆ. ಅಲ್ಲದೆ, ಕಲಾ ಪ್ರದರ್ಶನ ನೀಡಲಿದ್ದಾರೆ.
ಡಿಸೆಂಬರ್ 4 ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳಾ ಡಿ.ಕೆ. ಶಿವಕುಮಾರ್ ಅವರು ಈ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 6 ಗಂಟೆಯ ನಂತರ ಖ್ಯಾತ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಫ್ರೀಡಂ ಪಾರ್ಕ್ (ಡಿ. 5 ಮತ್ತು 6): ಮೆಜೆಸ್ಟಿಕ್ ಸಮೀಪದ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮೇಳ ಮತ್ತು ಆಹಾರ ಮೇಳ ಆಯೋಜಿಸಲಾಗುವುದು.
ವಿವಿಧ ವಲಯಗಳಲ್ಲಿ ವೇದಿಕೆಗಳು: ಬೆಂಗಳೂರು ಕೇಂದ್ರ ಭಾಗದ ಜೊತೆಗೆ ಉಳಿದ ನಾಲ್ಕು ಪಾಲಿಕೆಗಳಲ್ಲಿಯೂ ಮೂರು-ನಾಲ್ಕು ದಿನಗಳ ಕಾಲ ಸ್ಥಳೀಯ ಮೈದಾನಗಳಲ್ಲಿ ಶಾಸ್ತ್ರೀಯ, ಜನಪದ ಮತ್ತು ಆಧುನಿಕ ನೃತ್ಯ, ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ. ಪಶ್ಚಿಮ ಭಾಗದಲ್ಲಿ ರಾಮಮಂದಿರ ಮೈದಾನ, ದಕ್ಷಿಣದಲ್ಲಿ ಶಾಲಿನಿ ಮೈದಾನ ಹಾಗೂ ಪೂರ್ವದಲ್ಲಿ ಐಟಿಐ ಮೈದಾನ ಸೇರಿದಂತೆ ವಿವಿಧೆಡೆ ವೇದಿಕೆಗಳನ್ನು ರೂಪಿಸಲಾಗುತ್ತಿದೆ.
ಡಿಸೆಂಬರ್ 13 (ಸಮಾರೋಪ): ಮಾಣೆಕ್ಷಾ ಪರೇಡ್ ಮೈದಾನದಲ್ಲಿ ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು, ಖ್ಯಾತ ಕನ್ನಡ ಕಲಾವಿದರಾದ ಸಂಜಿತ್ ಹೆಗಡೆ ಹಾಗೂ ಪ್ರಸಿದ್ಧ ಕಲಾವಿದೆ ಸುನಿಧಿ ಚೌಹಾಣ್ ಪಾಲ್ಗೊಳ್ಳಲಿದ್ದಾರೆ.
ಪುಸ್ತಕ ಮೇಳ ಮತ್ತು ಬೆಂಗಳೂರು ಇತಿಹಾಸದ ಅನಾವರಣ:
ಹಿಂದೆ ಪ್ರಸಿದ್ಧವಾಗಿದ್ದ ಬೆಂಗಳೂರು ಪುಸ್ತಕ ಮೇಳವನ್ನು ಬೆಂಗಳೂರು ಜಾತ್ರೆಯಲ್ಲಿ ಪುನರಾರಂಭಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪ್ರಾಧಿಕಾರ ಹಾಗೂ ಜಿಬಿಎ ಸಹಯೋಗದಲ್ಲಿ ಡಿಸೆಂಬರ್ 11, 12 ಮತ್ತು 13ರಂದು ಪುಸ್ತಕ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಶೀಘ್ರವೇ ಸ್ಥಳವನ್ನು ನಿಗದಿಪಡಿಸಲಾಗುವುದು. ಪುಸ್ತಕ ಮೇಳ ನಡೆಯುವ ಸ್ಥಳದಲ್ಲೇವೇದಿಕೆ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಲಿದ್ದು, ಕಲಾವಿದರ ಆಹ್ವಾನ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಸಂಬಂಧಿಸಿದ ಸಂಸ್ಥೆಗಳು ನಡೆಸಲಿವೆ.
ಇದರ ಜೊತೆಗೆ, ಫೋರ್ಟ್ ಹೈ ಸ್ಕೂಲ್ ಮೈದಾನದಲ್ಲಿ ಕೆಂಪೇಗೌಡರು ರೂಪಿಸಿದ ಬೆಂಗಳೂರಿನ ಮೂಲ ಪರಿಕಲ್ಪನೆ ಮತ್ತು ಹಳೆಯ ಕುಲಕಸುಬುಗಳನ್ನು ಪರಿಚಯಿಸುವ ಮಾದರಿಯನ್ನು ನಿರ್ಮಿಸಲಾಗುವುದು. ಇದರಲ್ಲಿ ಇಂದಿನ ಗಿಗ್ ವರ್ಕರ್ಸ್, ಸೇವಾ ವಲಯದ ನೌಕರರು, ರೆಸ್ಟೋರೆಂಟ್ ಮತ್ತು ಸಲೂನ್ ಕಾರ್ಮಿಕರ ಬದುಕು ಹಾಗೂ ಕೊಡುಗೆಯನ್ನು ರೂಪಕಗಳ ಮೂಲಕ ಪ್ರದರ್ಶಿಸಿ, ಸುಮಾರು 500 ವರ್ಷಗಳ ಹಿಂದಿನ ಮತ್ತು ಇಂದಿನ ಬೆಂಗಳೂರನ್ನು ಒಟ್ಟುಗೂಡಿಸುವ ವಿಶೇಷ ರೂಪಕ ಪ್ರಸ್ತುತಪಡಿಸಲಾಗುವುದು.
ಕಲಾಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಹುಸಂಸ್ಕೃತಿ ಆಚರಣೆ
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 9 ದಿನಗಳ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂಡಿಯನ್ ಮ್ಯೂಸಿಕ್ ಅಕಾಡೆಮಿ, ರಂಗಶಂಕರ, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ಆರ್ವಿ ಟ್ರಸ್ಟ್, ಬಿಎಂಎಸ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ, ರಾಮಯ್ಯ ಕಾಲೇಜು, ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಅಂಡ್ ಡಿಸೈನ್, ಕ್ರೈಸ್ಟ್ ಜಯಂತಿ ಮತ್ತು ಎನ್ಎಂಕೆಆರ್ವಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ.
ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷಿಕರು ಹಾಗೂ ದೇವಾಂಗ, ತಿಗಳ, ಮಡಿವಾಳ ಮುಂತಾದ ಸಮುದಾಯಗಳು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಬೆಂಗಳೂರು ಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಶಿವಾಜಿನಗರದ ರಸೆಲ್ ಮಾರುಕಟ್ಟೆ ಸಮೀಪದ ಚೌಕದಲ್ಲಿ ವೈವಿಧ್ಯತೆಯ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ದೊಡ್ಡ ಗಣೇಶ, ಹಲಸೂರು, ಅಣ್ಣಮ್ಮ, ಚಾಮುಂಡಿ ಬೆಟ್ಟ, ದೊಡ್ಡ ಬಸವಣ್ಣ ದೇವಸ್ಥಾನಗಳು, ಹಳೆಯ ಚರ್ಚ್ಗಳು, ಮಸೀದಿಗಳು, ಬೆಂಗಳೂರು ಕಡಲೆಕಾಯಿ ಪರಿಷೆ ಮತ್ತು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ಗಳನ್ನೂ ಸಂಯೋಜಿಸುವ ಪ್ರಯತ್ನ ನಡೆದಿದೆ.
ಮಾಲ್, ಟೆಕ್ ಪಾರ್ಕ್, ಉದ್ಯಾನ, ಮೆಟ್ರೋ, ಆಹಾರ ಮೇಳ ಮತ್ತು ಟ್ರೆಷರ್ ಹಂಟ್
ಫೋರಂ, ಫೀನಿಕ್ಸ್ ಮಾಲ್ಗಳು, ಮಾನ್ಯತಾ, ಪ್ರೆಸ್ಟೀಜ್ ಟೆಕ್ ಪಾರ್ಕ್ಗಳು ಹಾಗೂ ಇನ್ಫೋಸಿಸ್ ಆವರಣಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ. ‘ಅನ್ಬಾಕ್ಸಿಂಗ್ ಬೆಂಗಳೂರು’ ವತಿಯಿಂದ ಸುಮಾರು 50 ಉದ್ಯಾನಗಳಲ್ಲಿ ಸಣ್ಣ ಅವಧಿಯ ಕಾರ್ಯಕ್ರಮಗಳು ನಡೆಯಲಿವೆ. ಮೆಟ್ರೋ ನಿಲ್ದಾಣಗಳು ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೂ ನೋಂದಾಯಿತ ಉದಯೋನ್ಮುಖ ಮತ್ತು ಹವ್ಯಾಸಿ ಕಲಾವಿದರಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಿವಿಧ ಸ್ಥಳಗಳಲ್ಲಿ ಬೆಂಗಳೂರಿನ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಮೇಳಗಳು ನಡೆಯಲಿವೆ. ಯುವಜನರಿಗೆ ಬೆಂಗಳೂರಿನ ಇತಿಹಾಸ ಮತ್ತು ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಲು ಆನ್ಲೈನ್ ನೋಂದಣಿ ಮೂಲಕ ಐತಿಹಾಸಿಕ ಮತ್ತು ಪ್ರಾಮುಖ್ಯತೆ ಇರುವ ಸ್ಥಳಗಳಿಗೆ ಖುದ್ದು ಭೇಟಿ ಮಾಡುವ ‘ಬೆಂಗಳೂರು ಟ್ರೆಷರ್ ಹಂಟ್’ ಆಯೋಜಿಸಲಾಗುತ್ತಿದೆ.
ಕಾರ್ಯಕ್ರಮಗಳ ಸಂಖ್ಯೆ, ವೆಚ್ಚ ಮತ್ತು ಪ್ರವೇಶ ನಿಯಮ
200ಕ್ಕೂ ಹೆಚ್ಚು ಕಾರ್ಯಕ್ರಮಗಳು: ಜಿಬಿಎ ವತಿಯಿಂದ ಸುಮಾರು 50 ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ಒಟ್ಟು 200ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುವ ನಿರೀಕ್ಷೆಯಿದೆ.
ಅಂದಾಜು ಬಜೆಟ್: ಕಾರ್ಯಕ್ರಮಗಳ ಆಯೋಜನೆಗೆ ಪ್ರಸ್ತುತ ಸುಮಾರು ₹20 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ (ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆಯೂ ಇದೆ). ಹೆಚ್ಚಿನ ಮೊತ್ತ ಕಲಾವಿದರು ಮತ್ತು ಕಾರ್ಯಕ್ರಮಗಳ ಆಯೋಜನೆಗೆ ಬಳಕೆಯಾಗಲಿದೆ. ಅಗತ್ಯವಿರುವ ಸಂಸ್ಥೆಗಳಿಗೆ ವೇದಿಕೆ, ಧ್ವನಿ-ಬೆಳಕಿನ ವ್ಯವಸ್ಥೆಯಂತಹ ಕನಿಷ್ಠ ಮೂಲಸೌಕರ್ಯ ನೆರವನ್ನು ಸರ್ಕಾರ ನೀಡಲಿದೆ.
ಮಾಣಿಕ್ ಷಾ ಪರೇಡ್ ಮೈದಾನ – ಉಚಿತ ಆದರೆ ಪೂರ್ವ ನೋಂದಣಿ ಕಡ್ಡಾಯ: ಕೇಂದ್ರ ಭಾಗದಲ್ಲಿದ್ದು ಉತ್ತಮ ಮೆಟ್ರೋ ಸಂಪರ್ಕ ಹೊಂದಿರುವ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸೇನಾ ಅಧಿಕಾರಿಗಳ ಷರತ್ತು ಮತ್ತು ಭದ್ರತಾ ನಿಯಮಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲ್ಲಿ ಪ್ರವೇಶ ಉಚಿತವಾಗಿದ್ದರೂ, ಜನಸಂದಣಿ ನಿಯಂತ್ರಣಕ್ಕಾಗಿ ಪೂರ್ವ ನೋಂದಣಿ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಕಡ್ಡಾಯವಾಗಿದೆ.
ಸಂಚಾರ ನಿರ್ವಹಣೆ, ಅಧಿವೇಶನದ ನಡುವೆಯೂ ಡಿಸೆಂಬರ್ ನಲ್ಲೇ ಏಕೆ ಜಾತ್ರೆ?
ಕಾರ್ಯಕ್ರಮಗಳ ವಿಕೇಂದ್ರೀಕರಣದಿಂದಾಗಿ ಜನಸಂದಣಿ ಮತ್ತು ಸಂಚಾರ ನಿಯಂತ್ರಣ ಸುಲಭವಾಗಲಿದೆ. ಉದ್ಘಾಟನಾ ದಿನದಂದು ಮಾತ್ರ ಸುಮಾರು ಎರಡು ಗಂಟೆಗಳ ಕಾಲ ಒಂದು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆಯೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆ ರೂಪಿಸಿ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಬೆಳಗಾವಿ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲೂ ಜಿಬಿಎ, ಪೊಲೀಸ್ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಪಾಲಿಕೆ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಡಿಸೆಂಬರ್ ನಲ್ಲಿ ಜಿಬಿಎ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ ಡಿಸೆಂಬರ್ ನಲ್ಲಿ ರಜಾ ವಾತಾವರಣ, ಕುಟುಂಬಗಳ ಭಾಗವಹಿಸುವಿಕೆ ಮತ್ತು ಪ್ರವಾಸಿಗರ ಆಕರ್ಷಣೆಗೆ ಪೂರಕವಾಗಿರುವುದರಿಂದ ಈ ತಿಂಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಕಾರ್ಯಕ್ರಮಗಳ ಮಾಹಿತಿ
ಬೆಂಗಳೂರು ಜಾತ್ರೆಯಡಿ ನಡೆಯುವ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ಪ್ರತಿದಿನವೂ ನವೀಕರಿಸುತ್ತಾ ಬೆಂಗಳೂರು ಜಾತ್ರೆಯ ಅಧಿಕೃತ ವೆಬ್ಸೈಟ್ www.bengalurujatre.in ನಲ್ಲಿ ಪ್ರಕಟಿಸಲಾಗುತ್ತಿದೆ. ಸಾರ್ವಜನಿಕರು, ಹಿರಿಯ ನಾಗರಿಕರು ನಿಯಮಿತವಾಗಿ ವೆಬ್ಸೈಟ್ ಪರಿಶೀಲಿಸಿ ತಮ್ಮ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ತಮ್ಮ ಆಸಕ್ತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದರು.
