ಸಮಗ್ರ ಸುದ್ದಿ

ಇವಿ ವಾಹನಗಳಿಗೆ ನೀಡುವ ಸಬ್ಸಿಡಿಯನ್ನು ಟ್ಯಾಕ್ಸಿ, ಆಟೋ ವಲಯಕ್ಕೂ ವಿಸ್ತರಿಸಿ | ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಆಟೋ, ಟ್ಯಾಕ್ಸಿ ಚಾಲಕರು

Share

ಬೆಂಗಳೂರು:ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮತ್ತು ಇನ್ನಿತರ ಸೌಲಭ್ಯಗಳನ್ನು ಆಟೋ ಮತ್ತು ಟ್ಯಾಕ್ಸಿ ವಲಯಕ್ಕೂ ವಿಸ್ತರಿಸಬೇಕು ಎಂದು ಆಟೋ ಚಾಲಕರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ಜೈ ಕರ್ನಾಟಕ ಸಾರಥಿ ಸೇನೆ ಅಡಿಯಲ್ಲಿ ನೋಂದಾಯಿತರಾಗಿರುವ ನೂರಾರು ಆಟೋ ಚಾಲಕರು ಬೆಂಗಳೂರಿನಲ್ಲಿ ಸೋಮವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸೇರಿಸಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದರು.

ಮುಖ್ಯವಾಗಿ ಸ್ವಯಂ ಉದ್ಯೋಗದ ಭಾಗವಾಗಿ ದುಡಿಮೆ ಮಾಡುತ್ತಿರುವ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಇನ್ನಿತರ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಚಾಲಕರು ವಿನಂತಿಸಿದರು.

ಈ ಬಗ್ಗೆ ಕೂಡಲೇ ದೂರವಾಣಿಯಲ್ಲಿ ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯದ ಉನ್ನತ ಅಧಿಕಾರಗಳ ಜತೆ ಚರ್ಚಿಸಿದ ಸಚಿವ ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ನಮ್ಮ ಸಚಿವಾಲಯ ಏನಾದರೂ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವೇ? ಹಾಗೂ ಎಲೆಕ್ಟ್ರಿಕ್ ವಾಹನಗಳ ನೀತಿಯಲ್ಲಿ ರಿಯಾಯಿತಿ ಅಥವಾ ಸೌಲಭ್ಯಗಳನ್ನು ಕೊಡಲು ಅವಕಾಶವಿದೆಯೇ ಎಂದು ಚರ್ಚಿಸಿದರು.

ಈ ಬಗ್ಗೆ ಚರ್ಚಿಸಲು ನವದೆಹಲಿಯಲ್ಲಿ ಸಭೆಯೊಂದನ್ನು ಆಯೋಜಿಸುವಂತೆ ಸಚಿವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದರು.

ಹಾಗೆಯೇ, ಗ್ರೀನ್ ಎಸ್ ಎಂ / ವಿನ್ ಫಾಸ್ಟ್ ಸಂಸ್ಥೆಯು ಕರ್ನಾಟಕದಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ 100 ವಾಹನಗಳ ಹೊರತಾಗಿ ಹೆಚ್ಚುವರಿ ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಬಾರದು. ಈ ಸಂಸ್ಥೆಯ ಕಾರ್ಯಾಚರಣೆಯನ್ನು ವಿಸ್ತರಿಸಲು ಬಿಡಬಾರದು ಎಂದು ಆಟೋ ಚಾಲಕರು ಸಚಿವರನ್ನು ಕೋರಿದರು.

ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿ ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೈಕ್ ಟ್ಯಾಕ್ಸಿಗಳ ನಿಷೇಧ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರದ ಸಾರಿಗೆ ಸಚಿವಾಲಯ ಜತೆ ಚರ್ಚೆ ನಡೆಸಬೇಕಾಗಿರುವ ಮನವಿಯನ್ನು ಆಟೋ ಚಾಲಕರು ಸಚಿವರು ಮುಂದೆ ಮಂಡಿಸಿದರು.

ಸಾರಿಗೆ ವಲಯಕ್ಕೆ ಸಂಬಂಧಿಸಿದ ಯಾವುದೇ ಹೊಸ ನೀತಿಗಳನ್ನು ರೂಪಿಸುವಾಗ ಈಗಾಗಲೇ ಸಾಲ ಮಾಡಿ ಸ್ವಯಂ ಉದ್ಯೋಗದ ಅಡಿಯಲ್ಲಿ ಜೀವನೋಪಾಯ ಕಂಡುಕೊಂಡಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರ ಆರ್ಥಿಕ ಹಿತವನ್ನು ರಕ್ಷಣೆ ಮಾಡಬೇಕು ಎಂದು ಆಟೋ ಚಾಲಕರು ಸಚಿವ ಕುಮಾರಸ್ವಾಮಿ ಅವರನ್ನು ವಿನಂತಿ ಮಾಡಿದರು.

ಸಿಎನ್‌ಜಿ ಮತ್ತು ಎಲ್ ಎನ್ ಜಿ ತ್ರಿಚಕ್ರ ವಾಹನಗಳನ್ನು ಇವಿ ವಾಹನಗಳನ್ನಾಗಿ ಪರಿವರ್ತಿಸುವಾಗ ಆಗುವ ವೆಚ್ಚದಲ್ಲಿ ರಿಯಾಯಿತಿ ನೀಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಟೋ ಚಾಲಕರು, ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್ಎಂ ರಮೇಶ್ ಗೌಡ, ಜೈ ಕರ್ನಾಟಕ ಸಾರಥಿ ಸೇನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.


Share

You cannot copy content of this page