ಸಮಗ್ರ ಸುದ್ದಿ

ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಹುಡುಕುವುದು ನಮ್ಮ ಉದ್ದೇಶ: ಸಿಎಂ‌ ಡಿ ಕೆ ಶಿವಕುಮಾರ್

Share

ಓಸಾಕಾ ತ್ಯಾಜ್ಯ ದಹನ ಘಟಕಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರ ನಿಯೋಗ ಭೇಟಿ

ಜಪಾನ್ :ನಮ್ಮ‌ ನಗರ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಹುಡುಕುವುದು. ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಜಾಗತಿಕ ವಿನೂತನ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡುವುದು ಈ ಭೇಟಿಯ ಉದ್ದೇಶವಾಗಿದೆ” ಎಂದು ಸಿಎಂ‌ ಡಿಕೆ‌ ಶಿವಕುಮಾರ್ ಅವರು ತಿಳಿಸಿದರು.

ಜಪಾನ್‌ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ನಿಯೋಗ ಓಸಾಕಾದ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಯೋಜಿತ ನಗರ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಪರಿಶೀಲಿಸಿತು.

ಮೈಶಿಮಾ ತ್ಯಾಜ್ಯ ದಹನ ಘಟಕದಲ್ಲಿ ದಿನಕ್ಕೆ 900 ಟನ್ ಪುರಸಭೆ ತ್ಯಾಜ್ಯವನ್ನು ವಿದ್ಯುತ್ ಆಗಿ ಪರಿವರ್ತಿಸುವ ಬಹಳ ಮುಂದುವರಿದ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿತು.

ಪ್ರತಿದಿನ 900 ಟನ್ ನಗರ ತ್ಯಾಜ್ಯವನ್ನು ವಿದ್ಯುತ್ ಆಗಿ ಪರಿವರ್ತಿಸುವ ಅತ್ಯಾಧುನಿಕ ತಂತ್ರಜ್ಞಾನದ ಪರಿಶೀಲನೆ

ಮೈಶಿಮಾ ದ್ವೀಪದಲ್ಲಿರುವ ಈ ಘಟಕ 2001ರಿಂದ ಕಾರ್ಯನಿರ್ವಹಿಸುತ್ತಿದೆ. ಇಂಥ ಎರಡು ದಹನಕಾರಿ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸಿ, 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಿಂದ ತ್ಯಾಜ್ಯವನ್ನು ವಿದ್ಯುತ್ತಾಗಿ ಪರಿವರ್ತಿಸಲಾಗುತ್ತದೆ. ಘಟಕವು ತನ್ನ ಸ್ವಂತ ಬಲದಿಂದಲೇ ವಿದ್ಯುತ್ ಅಗತ್ಯವನ್ನು ಪೂರೈಸಿಕೊಂಡು, ಉಳಿದ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ.

ಈ ಘಟಕವು ಸುಧಾರಿತ ದಹನ ನಿಯಂತ್ರಣ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಬಳಸುತ್ತದೆ. ಇದರಿಂದ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕ ವಾಗಿ ನಡೆದು, ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಯಾಗುತ್ತದೆ. ಈ ಘಟಕ ತನ್ನ ತಂತ್ರಜ್ಞಾನದ ಜೊತೆಗೆ ವಿಶಿಷ್ಟ ವಿನ್ಯಾಸಕ್ಕೂ ಪ್ರಸಿದ್ಧವಾಗಿದೆ.

ಆಸ್ಟ್ರಿಯನ್ ಕಲಾವಿದ ಫ್ರೀಡೆನ್ಸ್‌ರೈಕ್ ಹಂಡರ್ಟ್‌ವಾಸರ್ ಇದನ್ನು ವಿನ್ಯಾಸಗೊಳಿಸಿದ್ದು, ವರ್ಣರಂಜಿತ ಹೊರನೋಟ, ವಿಭಿನ್ನ ಆಕಾರಗಳು ಮತ್ತು ವ್ಯಾಪಕ ಹಸಿರು ಇದರಲ್ಲಿದೆ. ಈ ವಿನ್ಯಾಸ ಕಲೆ, ಪರಿಸರ ಮತ್ತು ಕೈಗಾರಿಕಾ ಮೂಲಸೌಕರ್ಯದ ಸಂಗಮವಾಗಿದೆ. ನಗರದ ಅಗತ್ಯ ಸೌಲಭ್ಯಗಳು ಪರಿಸರ ಜಾಗೃತಿ ಮೂಡಿಸುವ ಸ್ಥಳಗಳನ್ನಾಗಿಯೂ ರೂಪಿಸಬಹುದು ಎಂಬುದನ್ನು ಇದು ತೋರಿಸುತ್ತದೆ.

ಕರ್ನಾಟಕದ ಮೂಲಸೌಕರ್ಯ ಬಲ ಪಡಿಸಲು ಸಹಾಯಕ

“ನಗರ ಯೋಜನೆ, ಮೂಲಸೌಕರ್ಯ ಮತ್ತು ಪರಿಸರ ನಿರ್ವಹಣೆಯಲ್ಲಿ ಜಾಗತಿಕ‌ ಮನ್ನಣೆ ಪಡೆದ ಇಂಥ ಮಾದರಿಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಇಂತಹ ಘಟಕಗಳ ಅಧ್ಯಯನ ಮಾಡುವುದರಿಂದ ಕರ್ನಾಟಕದ ನಗರಗಳ ಮೂಲಸೌಕರ್ಯವನ್ನು ಬಲಪಡಿಸಲು, ವೈಜ್ಞಾನಿಕ ಮತ್ತು ದಕ್ಷ ತ್ಯಾಜ್ಯ ವಿಲೇವಾರಿಯನ್ನು ಉತ್ತೇಜಿಸಬಹುದು. ತ್ಯಾಜ್ಯದಿಂದ ಇಂಧನ ಪರಿಹಾರಗಳನ್ನು ಅನ್ವೇಷಿಸಲು ಮತ್ತು ಸ್ವಚ್ಛ, ಸುಸ್ಥಿರ ಹಾಗೂ ವಾಸಯೋಗ್ಯ ನಗರಗಳನ್ನು ನಿರ್ಮಿಸಲು ನೆರವಾಗುತ್ತದೆ” ಎಂದು ಸಿಎಂ‌ ಹೇಳಿದರು.


Share

You cannot copy content of this page