ಸಮಗ್ರ ಸುದ್ದಿ

ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆ್ಯಪ್ ಅಭಿವೃದ್ಧಿ: ಸಚಿವ ರಘುಮೂರ್ತಿ

Share

ಮೈಸೂರು: ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವ್ಯಕ್ತಿವಾರು ಮಾಹಿತಿ ಕ್ರೋಡೀಕರಿಸಿಕೊಳ್ಳಲು, ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ವಿಶೇಷ ಆ್ಯಪ್ ರಚಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದ್ದಾರೆ.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ‌ ಜೊತೆ ಸಭೆ ನಡೆಸಿ ಮಾತನಾಡಿದರು.

ನಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಒಂದೇ ಕಡೆ ಎಲ್ಲಾ ಮಾಹಿತಿ ದೊರೆಯುವ ವ್ಯವಸ್ಥೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದು ಜನರಿಗೆ ಮಾಹಿತಿಯುಕ್ತ ಆ್ಯಪ್ ಆಗಲಿದೆ ಎಂದು ಸಚಿವರು ವಿವರಿಸಿದರು.

ಈಗಾಗಲೇ ಯುವ ಸಮುದಾಯದ ಉದ್ಯೋಗ ಸಮಸ್ಯೆ ಪರಿಹರಿಸಲು ಪರಿಶಿಷ್ಟ ಪಂಗಡದವರಿಗೆ ಫುಡ್‌ ಕಿಯೋಸ್ಕ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೂ ನಮ್ಮ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ರಘುಮೂರ್ತಿ ತಿಳಿಸಿದರು.

ವಾಲ್ಮೀಕಿ, ನಾಯಕ, ಕಾಡು ಕುರುಬ, ಜೇನು ಕುರುಬ, ಸೋಲಿಗ, ಹಕ್ಕಿಪಿಕ್ಕಿ ಸೇರಿದಂತೆ ಎಸ್‌ಟಿ ಪಂಗಡದಲ್ಲಿರುವ 50ಕ್ಕೂ ಹೆಚ್ಚು ಉಪಜಾತಿಗಳವರಿಗೆ ವಿವಿಧ ಯೋಜನೆಗಳು ಜಾರಿಯಲ್ಲಿವೆ. ಆ ಎಲ್ಲ ಮಾಹಿತಿ ಈಗ ಆ್ಯಪ್ ಮೂಲಕ ಬೆರಳು ತುದಿಯಲ್ಲೇ ಸಿಗಲಿದೆ.

ಪರಿಶಿಷ್ಟ ಪಂಗಡ ಕಲ್ಯಾಣ ಸಚಿವನಾಗಿ ಕಳೆದ ಕೆಲವು ಕೆಲವು ತಿಂಗಳುಗಳಿಂದ ವಿವಿಧ ಜಿಲ್ಲೆಯಲ್ಲಿನ ಹಲವಾರು ಹಾಡಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಮೂಲಸೌಕರ್ಯ ಕೊರತೆ ಇರುವುದು ಕಂಡುಬಂದಿದೆ. ಅವುಗಳನ್ನು ಸರಿಪಡಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಡಿಗಳಲ್ಲಿ ವಾಸಿಸುವ ಜನರಿಗೆ ಸರ್ಕಾರ ಒದಗಿಸುವ ಸೌಲಭ್ಯ ದೊರೆತು ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ವಿಶೇಷ ಶಿಬಿರ

ಪಡಿತರ ಚೀಟಿ ಪಡೆದುಕೊಳ್ಳಲು ಆಧಾರ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಿದ್ದು, ಹಾಡಿಗಳಲ್ಲಿ ಸಮೀಕ್ಷೆ ನಡೆಸಿ ಆಧಾರ್ ಕಾಡ್೯ ಹಾಗೂ ಆದಾಯ ಪ್ರಮಾಣ ಪತ್ರ ಇಲ್ಲದವರ ಪಟ್ಟಿ ಮಾಡಿಕೊಂಡು ವಿಶೇಷ ಶಿಬಿರ ನಡೆಸಿ ಅವರಿಗೆ ಒದಗಿಸಿ ಪಡಿತರ ಚೀಟಿ ಮಾಡಿಸಿಕೊಡ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೆ.ಆರ್.ಐ.ಡಿ.ಎಲ್ ವತಿಯಿಂದ ಹಾಡಿಗಳಲ್ಲಿ 100 ಮನೆಗಳು ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದ್ದು, ಇದರಲ್ಕಿ 15 ಮನೆ ಪೂರ್ಣವಾಗಿದ್ದು, ಉಳಿದ 85 ಮನೆಗಳು ವಿವಿಧ ಹಂತದಲ್ಲಿದೆ. ಮನೆ ನಿರ್ಮಾಣ ಮಾಡಲು ಸರ್ಕಾರದ ಹಂತದಲ್ಲಿಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ವಿಶೇಷ ನಿಗಾ ವಹಿಸಿ ಮನೆಗಳನ್ನು ಶೀಘ್ರವಾಗಿ ‌ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ನಿಗಮ ಹಾಗೂ ಇಲಾಖೆಗಳಿಂದ ವೈಯಕ್ತಿಕವಾಗಿ ಬೋರ್ ವೆಲ್ ಕೊರೆಯಲು ಅನುದಾನ ನೀಡಲಾಗುವುದು. ಇದು ಡೂಪ್ಲಿಕೇಷನ್ ಆಗದಂತೆ ಎಚ್ಚರಿಕೆ ವಹಿಸಲು ಸಹಕಾರವಾಗಲಿದೆ ಎಂದು ರಘಮೂರ್ತಿ ತಿಳಿಸಿದರು.

ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ. ಅನಿಲ್ ಚಿಕ್ಕಮಾದು ಅವರು ಮಾತನಾಡಿ ಆದಿವಾಸಿಗಳನ್ನು ಕಾಡಿನಿಂದ ಹೊರತರಲಾಗಿದೆ, ಅವರಿಗೆ ಕಾಡಂಚಿನಲ್ಲಿ ನಿವೇಶನ ನೀಡಲಾಗಿದೆ. ಆದರೆ ಅವರಿಗೆ ಹಕ್ಕು ಪತ್ರ ನೀಡಿಲ್ಲ. ಹಕ್ಕು ಪತ್ರವಿಲ್ಲದೆ ಮನೆಗಳ ನಿರ್ಮಾಣ ಸಹ ಕಷ್ಟಕರವಾಗಿರುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಜಿಲ್ಲಾಧಿಕಾರಿಗಳು ಈ ಕುರಿತಂತೆ ಇರುವ ಸಮಸ್ಯೆಗಳ‌ ಬಗ್ಗೆ ವರದಿ ನೀಡಿದಲ್ಲಿ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಎಂ., ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಮಹಾನಗರ ಪಾಲಿಕೆಯ ಆಯುಕ್ತರಾದ ಎಂ.ಕೆ ಸವಿತಾ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಿರ್ದೇಶಕರು ಡಾ.ಅಶೋಕ್ ಡಿ.ಆರ್,ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರು ಅಶೋಕ್ ದುಡಗುಂಟಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page