ಸಮಗ್ರ ಸುದ್ದಿ

ಕರ್ನಾಟಕದ ಒಂದು ಕಡೆ ಜಪಾನ್ ಮಾದರಿ ರೈಲ್ವೆ ನಿಲ್ದಾಣ ನಿರ್ಮಿಸುವ ಅಭಿಲಾಷೆ: ಸಿಎಂ ಡಿ ಕೆ ಶಿವಕುಮಾರ್

Share

ಜಪಾನ್:ಕರ್ನಾಟಕದಲ್ಲಿಯೂ ಜಪಾನ್ ಮಾದರಿಯ ಅತ್ಯಾಧುನಿಕ ರೈಲ್ವೆ ನಿಲ್ದಾಣವನ್ನು ನಿರ್ಮಿಸುವ ಪ್ರಯತ್ನ ಮಾಡಬೇಕು ಎಂಬ ಅಭಿಲಾಷೆ ಹೊಂದಿರುವುದಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಜಪಾನ್‌ನಲ್ಲಿ ರೈಲ್ವೆ ಪ್ರಯಾಣದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿರುವ ಸಿಎಂ ಅವರು, ಅಲ್ಲಿನ ರೈಲ್ವೆ ನಿಲ್ದಾಣಗಳ ಸ್ವಚ್ಛತೆ, ಆಧುನಿಕ ಸೌಲಭ್ಯಗಳು, ರೈಲುಗಳ ವೇಗ ಹಾಗೂ ಸಮಯಪಾಲನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

“ಜಪಾನ್‌ನಲ್ಲಿರುವ ರೈಲ್ವೆ ನಿಲ್ದಾಣಗಳನ್ನು ನೋಡಿದಾಗ ವಿಶೇಷ ಅನುಭವವಾಗುತ್ತದೆ. ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿಯೂ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ದೊಡ್ಡ ದೊಡ್ಡ ಶಾಪಿಂಗ್ ಸೆಂಟರ್‌ಗಳು, ಪಂಚತಾರಾ ಹೋಟೆಲ್‌ಗಳಿವೆ. ವಿಮಾನ ನಿಲ್ದಾಣಗಳನ್ನು ಹೇಗೆ ಸ್ವಚ್ಛವಾಗಿ ನಿರ್ವಹಿಸುತ್ತಾರೋ ಅದೇ ರೀತಿ ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳನ್ನು ಅತ್ಯಂತ ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. ಇಂತಹ ಮಾದರಿಯನ್ನು ನಮ್ಮ ಕರ್ನಾಟಕದಲ್ಲಿಯೂ ಕನಿಷ್ಠ ಒಂದು ಕಡೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು ಎಂಬ ಆಸೆ ಇದೆ” ಎಂದು ಹೇಳಿದರು.

“ಇಲ್ಲಿನ ರೈಲುಗಳ ವೇಗ, ಸ್ವಚ್ಛತೆ ಮತ್ತು ಪ್ರಯಾಣಿಕರಿಗೆ ಕಲ್ಪಿಸಿರುವ ಸೌಲಭ್ಯಗಳು ಅದ್ಭುತವಾಗಿವೆ. ವಿಮಾನ ಪ್ರಯಾಣದಲ್ಲಿ ಸಿಗುವ ಸೌಲಭ್ಯಗಳಿಗಿಂತಲೂ ಉತ್ತಮವಾದ ಸ್ವಚ್ಛತೆಯನ್ನು ರೈಲ್ವೆ ವ್ಯವಸ್ಥೆಯಲ್ಲಿ ಕಾಯ್ದುಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ನಿಮಿಷವೂ ವ್ಯತ್ಯಯವಾಗದಂತೆ ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಿಗದಿತ ಸಮಯಕ್ಕೆ ರೈಲುಗಳು ಸಂಚರಿಸುತ್ತವೆ. ಇಲ್ಲಿನ ವಿವಿಧ ರೈಲ್ವೆ ನಿಲ್ದಾಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸುವ ಅವಕಾಶವೂ ಸಿಕ್ಕಿದೆ” ಎಂದರು.

ಇಂತಹ ಅನೇಕ ಹೊಸ ಪ್ರಯತ್ನಗಳಿಗೆ ನಾವು ಕೈಹಾಕಬೇಕು. ನಮ್ಮ ದೇಶವೂ ಅಭಿವೃದ್ಧಿಯ ಹಾದಿಯಲ್ಲಿ ಇನ್ನಷ್ಟು ವೇಗವಾಗಿ ಮುನ್ನಡೆಯಲು ಇಂತಹ ಅತ್ಯುತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಜಪಾನ್ ಪ್ರವಾಸ ನನ್ನ ಜೀವನದಲ್ಲಿ ಹೊಸ ಅನುಭವ ನೀಡಿದೆ ಎಂದು ವಿಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.


Share

You cannot copy content of this page