ಸಮಗ್ರ ಸುದ್ದಿ

ಜಪಾನಿನ ಉತ್ತಮ ವ್ಯವಸ್ಥೆಗಳನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಕ್ರಮ: ಸಿಎಂ ಡಿ ಕೆ ಶಿವಕುಮಾರ್

Share

ಬೆಂಗಳೂರು: ನಗರ ಸಾರಿಗೆ, ಕಸ ವಿಲೇವಾರಿ, ನಗರಾಭಿವೃದ್ಧಿ ಮೂಲಸೌಕರ್ಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಜಪಾನಿನಲ್ಲಿರುವ ಉತ್ತಮ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣ ʻಸಂಗಮʼದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಿಎಂ, ತಮ್ಮ ಮೂರು ದಿನಗಳ ಜಪಾನ್ ಪ್ರವಾಸದ ವಿವರಗಳನ್ನು ಶನಿವಾರ ಹಂಚಿಕೊಂಡರು.

“ನಗರಾಭಿವೃದ್ಧಿ, ಉತ್ಪಾದನಾ ಕ್ಷೇತ್ರ, ನಗರ ಸಾರಿಗೆ ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್ ದೇಶದಿಂದ ಕಲಿಯುವಂತಹದ್ದು ಬಹಳಷ್ಟಿದೆ. ಆ ದೇಶದ ಸಮಯ ಪರಿಪಾಲನೆ, ಶಿಸ್ತು, ಬದ್ಧತೆ ಅನುಕರಣೀಯವಾಗಿದೆ. ಜಪಾನ್ ಪ್ರವಾಸದ ಸಂದರ್ಭದಲ್ಲಿ ಭೇಟಿಯಾದ ಬಹಳಷ್ಟು ಕನ್ನಡಿಗರು ಸಹ ಈ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದರು.

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಆಹ್ವಾನ

“ಮುಂದಿನ ಎಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿವಿಧ ದೇಶಗಳಲ್ಲಿ ರೋಡ್ ಶೋ ನಡೆಸುತ್ತಿದ್ದೇವೆ. ಪೂರ್ವ ಏಷ್ಯಾದ ಹಲವು ದೇಶಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಬಹುದಾದ ಜಪಾನಿನ ಮಾದರಿಗಳ ಕಾರ್ಯ ಸಾಧ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆಗಳನ್ನು ರೂಪಿಸಲಾಗುವುದು. ಜಪಾನಿನ ವಿದೇಶಾಂಗ ಸಚಿವರೊಂದಿಗೆ ಹಾಗೂ ರಾಯಭಾರಿಯೊಂದಿಗೆ ಸಹ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಸಹಕರಿಸುವ ಭರವಸೆಯನ್ನು ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.

ಹೊಸ ಗ್ರೀನ್ ಫೀಲ್ಡ್ ಯೋಜನೆಗಳಿಗೆ ಒತ್ತು

“ಮೂರು ದಿನಗಳ ಭೇಟಿಯ ವೇಳೆ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಜಪಾನಿನಲ್ಲಿ ಹಲವು ನಿಯೋಗಗಳ ಜತೆ ಮಾತುಕತೆ ನಡೆಸಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನಾಚೆಗೂ ಹೊಸ ಗ್ರೀನ್ ಫೀಲ್ಡ್ ಯೋಜನೆಗಳನ್ನು ಪ್ರಾರಂಭಿಸಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ” ಎಂದರು.

“ಜಪಾನಿನಲ್ಲಿ ಹೊಸ ನಗರಗಳ ನಿರ್ಮಾಣ, ಟೌನ್ ಶಿಪ್ ಗಳು, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಬಗ್ಗೆಯೂ ಪರಿಶೀಲನೆ ಮಾಡಿದ್ದೇವೆ. ಜಪಾನಿನಲ್ಲಿ ತ್ಯಾಜ್ಯ ವಿಲೇವಾರಿ ಮೂಲಕ ಕನಿಷ್ಟ 24 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕಕ್ಕೆ ಭೇಟಿ ನೀಡಿದ್ದು, ಕರ್ನಾಟಕದಲ್ಲಿಯೂ ಅಂತಹ ಯೋಜನೆ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಆಹ್ವಾನ ನೀಡಿದ್ದೇನೆ. ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ ಧಾರವಾಡ, ಮೈಸೂರಿನಂತಹ ನಗರಗಳಲ್ಲೂ ಇಂತಹ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೊಳಿಸಬಹುದಾಗಿದೆ. ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ನೆರವು ಒದಗಿಸಲಿದೆ” ಎಂದು ಹೇಳಿದರು.

“ಜಪಾನಿನ ನಗರ ಸಾರಿಗೆ ವ್ಯವಸ್ಥೆ ಮಾದರಿ ಯೋಗ್ಯವಾಗಿದ್ದು, ಮೆಟ್ರೋ ಸೌಲಭ್ಯದ ಗರಿಷ್ಠ ಉಪಯೋಗ ಪಡೆಯುತ್ತಿದ್ದಾರೆ. ಅಲ್ಲಿನ ಮೆಟ್ರೋ ನಿಲ್ದಾಣಗಳು ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ರೈಲ್ವೇ ನಿಲ್ದಾಣ ವಿಮಾನ ನಿಲ್ದಾಣಕ್ಕಿಂತ ಚೆನ್ನಾಗಿದೆ. ಸಮಯ ಪರಿಪಾಲನೆ, ಸ್ವಚ್ಛತೆಗೆ ಮಾದರಿ. ನಮ್ಮಲ್ಲಿಯೂ ಮೆಟ್ರೋ ನಿಲ್ದಾಣಗಳ ಗರಿಷ್ಠ ಉಪಯೋಗ ಪಡೆದುಕೊಳ್ಳಲು ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಕುರಿತು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ” ಎಂದರು.

ಟೊಯೋಟಾ ಘಟಕ ವಿಸ್ತರಣೆಗೆ ಒಲವು

“ಪ್ರಸ್ತುತ ಜಪಾನಿನ 525 ಉದ್ದಿಮೆ ಸಂಸ್ಥೆಗಳು ಕರ್ನಾಟಕದಲ್ಲಿವೆ. ಹಲವು ಉತ್ಪಾದನಾ ಘಟಕಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಹೊಸ ಹೂಡಿಕೆಗಳ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಟೊಯೋಟಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಪ್ರಸ್ತುತವಿರುವ ಉತ್ಪಾದನಾ ಘಟಕವನ್ನು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ” ಎಂದರು.

ಹಾರೋಹಳ್ಳಿಯಲ್ಲಿ 600 ಉದ್ಯೋಗ ಸೃಷ್ಠಿ

“ಕವಾಸಕಿ ಹೆವಿ ಇಂಡಸ್ಟ್ರೀಸ್ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ 600 ಜನರಿಗೆ ತಾಂತ್ರಿಕ ಉದ್ಯೋಗ ದೊರಕಿಸುವ ಕುರಿತು ಒಪ್ಪಂದ ಮಾಡಲಾಗಿದೆ. ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಂಪೆನಿಯು ಬಂಡವಾಳ ಹೂಡಿಕೆಗೆ ಉತ್ಸುಕತೆ ತೋರಿಸಿದೆ” ಎಂದರು.

ಹೈಬ್ರಿಡ್ ಮಾದರಿ ಕಾರು ಉತ್ಪಾದನೆಗೆ ಆಹ್ವಾನ

“ಟೋಕಿಯೋ ಒಲಿಂಪಿಕ್ಸ್ ಸಮಯದಲ್ಲಿ ಟ್ಯಾಕ್ಸಿ ಮಾದರಿಯ ಹೈಬ್ರಿಡ್ ಕಾರು ಬಿಡುಗಡೆ ಮಾಡಲಾಗಿತ್ತು. ಇದೇ ಮಾದರಿಯ ಕಾರನ್ನು ನಮ್ಮ ರಾಜ್ಯದಲ್ಲಿ ಉತ್ಪಾದನೆ ಮಾಡಲು ಆಹ್ವಾನ ನೀಡಿದ್ದೇವೆ. ಇದು ಸ್ಥಳೀಯ ಆಟೋಗಳಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಆಟೋಗಳಿಗೂ ನಾವು ಉತ್ತೇಜನ ನೀಡಬೇಕಾಗುತ್ತದೆ. ನಾವು ನೋಡಿದ ಟ್ಯಾಕ್ಸಿ ಕಾರು ಹೆಚ್ಚು ಅನುಕೂಲಕರವಾಗಿತ್ತು” ಎಂದರು.

“ನಯೋಗ ನಗರದಲ್ಲಿ ವಾಣಿಜ್ಯ ಹಾಗೂ ಸಾರ್ವಜನಿಕ ಸಂಚಾರ ಮೂಲಸೌಕರ್ಯ ಪರಿಶೀಲಿಸಿದ್ದೇವೆ ನ.24ರಂದು ಒಸಾಕೋಗೆ ಭೇಟಿ ನೀಡಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಪರಿಶೀಲಿಸಿದ್ದೇವೆ. ಪ್ಯಾನಸೋನಿಕ್, ಜೆಎಫ್ ಸಿ ಸ್ಟೀಲ್ ಸಂಸ್ಥೆಯೊಂದಿಗೂ ಚರ್ಚೆ ಮಾಡಿ ಒಪ್ಪಂದ ಮಾಡಿಕೊಂಡಿದ್ದೇವೆ. ಸುಮೊಟೋ, ಅಂಜಿನ ಮೋಟೋ, ಅಕೆಡಾ, ಶೇಕ್ ಫಾರ್ಮಾ, ಯೊಕಸಾವಾ ಸಂಸ್ಥೆಗಳೊಂದಿಗೆ ಎಂ ಬಿ ಪಾಟೀಲ್ ಅವರು ಸಭೆ ಮಾಡಿದ್ದಾರೆ” ಎಂದರು.

“ವಿದೇಶಿ ಹೂಡಿಕೆಯನ್ನು ಸುಗಮಗೊಳಿಸಲು ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ. ಉದ್ದಿಮೆಗಳ ಪ್ರಾರಂಭಕ್ಕೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸಿ, ವಿಳಂಬವನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ” ಎಂದು ಹೇಳಿದರು.

ಪಿಪಿಪಿ ಮಾದರಿಯಲ್ಲಿ ತುಮಕೂರಿಗೆ ಮೆಟ್ರೋ ತುಮಕೂರಿಗೆ ಮೆಟ್ರೋ ವಿಸ್ತರಣೆ ಕುರಿತು ಶುಕ್ರವಾರ ಸಭೆ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ತುಮಕೂರಿಗೆ ಮೆಟ್ರೋ ತುಮಕೂರಿಗೆ ಮೆಟ್ರೋ ವಿಸ್ತರಣೆ ಬಗ್ಗೆ ಪಿಪಿಪಿ ಮಾದರಿಯಲ್ಲಿ ಪ್ರಸ್ತಾವವಿದೆ. ಮೆಟ್ರೋದ ಜತೆಗೆ ನಗರಗಳು ಅಭಿವೃದ್ಧಿ ಹೊಂದುತ್ತವೆ. ಜನರ ಅನುಕೂಲ ಮುಖ್ಯ. ರಾಜ್ಯ ಸರ್ಕಾರ ಯಾವುದೇ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮೆಟ್ರೋ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ” ಎಂದು ತಿಳಿಸಿದರು.


Share

You cannot copy content of this page