ನವದೆಹಲಿ: ಜ್ಞಾನ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಗಮವಾದ ‘ಕಾಶಿ-ತಮಿಳು ಸಂಗಮಂ 5.0’ ಐತಿಹಾಸಿಕ ಸಮಾರಂಭ ವೀಕ್ಷಣೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ AI ತಂತ್ರಜ್ಞಾನ ಸಂಪರ್ಕ ಸೇತುವಾಗಿದೆ.
ದೇಶವಾಸಿಗಳಿಗೆ ಸಮಾರಂಭದ ಸಂಭ್ರಮದಲ್ಲಿ ಭಾಗಿಯಾಗಲೆಂದು ಅವರವರ ಮಾತೃಭಾಷೆ, ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಿಸಲು ಕೇಂದ್ರ ಶಿಕ್ಷಣ ಇಲಾಖೆ “ಅನುವಾದಿನಿ AI’-(Anuvadini AI) ತಂತ್ರಜ್ಞಾನದ ಅವಕಾಶ ಕಲ್ಪಿಸಿಕೊಟ್ಟಿದೆ.
ಪ್ರಧಾನಿ ಮೋದಿ ಅವರ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಧ್ಯೇಯ, ಆಶಯದಂತೆ ವಾರಣಾಸಿಯಲ್ಲಿ “ಕಾಶಿ ಮತ್ತು ತಮಿಳುನಾಡಿನ ನಡುವೆ ಬಾಂಧವ್ಯ ಬೆಸೆಯುವ ಈ ಐತಿಹಾಸಿಕ ಸಮಾರಂಭವನ್ನು ನಮ್ಮ ಕನ್ನಡಿಗರೂ ಸಹ ‘ಅನುವಾದಿನಿ AI’ ತಂತ್ರಜ್ಞಾನದ ಮೂಲಕ ನೇರ ವೀಕ್ಷಣೆಯಲ್ಲಿ ಭಾಗಿಯಾಗಿ ಸಂಭ್ರಮಿಸಬಹುದು ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
QR ಕೋಡ್ ಸ್ಕ್ಯಾನ್ ಮಾಡಿ: ಭಾಷೆ ಅಡೆತಡೆಯಿಲ್ಲದೆ ಕಾರ್ಯಕ್ರಮ ವೀಕ್ಷಿಸಲು, ‘ಅನುವಾದಿನಿ AI’ ಮೂಲಕ ಆಯಾ ಭಾಷೆಯಲ್ಲೇ ಸಬ್ಟೈಟಲ್ಗಳು ಲಭ್ಯವಿವೆ. QR ಕೋಡ್ ಸ್ಕ್ಯಾನ್ ಮಾಡಿ, ಭಾಷೆ ಆಯ್ಕೆ ಮಾಡಿ ಈ ಸಂಭ್ರಮದ ಸಮಾರಂಭದಲ್ಲಿ ಭಾಗಿಯಾಗಬಹುದು. ಇಂದಿನಿಂದ ಡಿಸೆಂಬರ್ 12ರವರೆಗೆ ನಿರಂತರ 15 ದಿನಗಳ ಕಾಲ ಜರುಗುವ ಅದ್ಧೂರಿ ಸಮಾರಂಭದ ನೇರ ಪ್ರಸಾರಕ್ಕಾಗಿ https://anuvadini.aicte.gov.in/kashi #KashiTamilSangamam5 ಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸಲಾಗಿದೆ.
AI ವಿಶೇಷ ಆಕರ್ಷಣೆ: ಕಾಶಿ ಮತ್ತು ತಮಿಳುನಾಡಿನ ಶತಮಾನಗಳ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಭಾಷಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಆಯೋಜಿಸಿರುವ ಈ 5ನೇ ಆವೃತ್ತಿಯ ಕಾಶಿ-ತಮಿಳು ಸಂಗಮದಲ್ಲಿ ಈ ಬಾರಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಿಶೇಷ ಆಕರ್ಷಣೆಯಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ನುಡಿಗಳನ್ನು ವಿವಿಧ ಭಾಷೆಗಳಲ್ಲಿ ನೇರವಾಗಿ ವೀಕ್ಷಿಸುವ ವಿನೂತನ ವ್ಯವಸ್ಥೆ ಕಲ್ಪಿಸಲಾಗಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅಭಿವೃದ್ಧಿಪಡಿಸಿರುವ ‘ಅನುವಾದಿನಿ ಎಐ’ (Anuvadini AI) ತಂತ್ರಜ್ಞಾನದ ಮೂಲಕ ಗಣ್ಯರ ಭಾಷಣಗಳನ್ನು ಆಯ್ದ ಭಾಷೆಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಪಠ್ಯ ರೂಪದಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ರಾಜ್ಯದಲ್ಲಿ ತಮಿಳು ಅಥವಾ ಇಂಗ್ಲಿಷ್ ಭಾಷಾಜ್ಞಾನ ಇಲ್ಲದವರು ಸಹ ಕನ್ನಡದಲ್ಲಿಯೇ ತಿಳಿದುಕೊಳ್ಳಲು ಅವಕಾಶವಾಗಿದೆ.
AI ತಂತ್ರಜ್ಞಾನದ ಮೂಲಕ ಭಾಷಾಂತರ ನಿವಾರಿಸಿ ದೇಶದ ವಿವಿಧ ಭಾಗಗಳ ಜನರು ಒಂದೇ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೇ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿದೆ.
ಕನ್ನಡಿಗರು ಹೇಗೆ ವೀಕ್ಷಿಸಬಹುದು: ಕನ್ನಡಿಗರು ಮೊಬೈಲ್ನಲ್ಲಿ https://anuvadini.aicte.gov.in/kashi ವೆಬ್ಸೈಟ್ ತೆರೆಯಬೇಕು. ನಂತರ ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಗಣ್ಯರ ಭಾಷಣದ ವೇಳೆ ಅದರ ಅನುವಾದ ಆಯ್ದ ಭಾಷೆಯಲ್ಲಿ ಪರದೆ ಮೇಲೆ ಪಠ್ಯ ರೂಪದಲ್ಲಿ ಮೂಡಿಬರುತ್ತದೆ. ಈ ವ್ಯವಸ್ಥೆಯಿಂದ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದರ ಜೊತೆಗೆ ತಂತ್ರಜ್ಞಾನವನ್ನು ಸಾಂಸ್ಕೃತಿಕ ಏಕತೆಯ ಸಾಧನವನ್ನಾಗಿ ಬಳಸುವ ಪ್ರಯತ್ನ ಇದಾಗಿದೆ.
