ಸಮಗ್ರ ಸುದ್ದಿ

ಡಿಸೆಂಬರ್ 1ರಂದು ಮುಖ್ಯಮಂತ್ರಿಗಳಿಂದ ನೂತನ ಜವಳಿ ನೀತಿ ಅನಾವರಣ: ₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ: ಆಯುಕ್ತ ಎ.ಬಿ. ಬಸವರಾಜು

Share

₹4,000 ಕೋಟಿ ಅನುದಾನದೊಂದಿಗೆ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೂತನ ನೀತಿ

ಬೆಂಗಳೂರು: ಕರ್ನಾಟಕವನ್ನು ಜಾಗತಿಕ ಜವಳಿ ಮತ್ತು ಸಿದ್ಧ ಉಡುಪು ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದರ ಜೊತೆಗೆ, ರಾಜ್ಯದ ವಿವಿಧ ಭಾಗಗಳಿಗೆ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಕರ್ನಾಟಕ ಜವಳಿ ಮತ್ತು ಉಡುಪು ನೀತಿ 4.0 (2026–31) ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಿಸೆಂಬರ್ 1ರಂದು ಅನಾವರಣಗೊಳಿಸಲಿದ್ದಾರೆ ಎಂದು ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ. ಬಸವರಾಜು ತಿಳಿಸಿದ್ದಾರೆ.

ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಅನಾವರಣ ಸಮಾರಂಭ ನಡೆಯಲಿದೆ.

ಮುಂದಿನ ಐದು ವರ್ಷಗಳಲ್ಲಿ ₹20,000 ಕೋಟಿ ಹೂಡಿಕೆ ಆಕರ್ಷಿಸುವುದು ಹಾಗೂ ಐದು ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ನೂತನ ನೀತಿ ಹೊಂದಿದೆ. ₹4,000 ಕೋಟಿ ಅನುದಾನದ ಮೂಲಕ ಜವಳಿ ಕ್ಷೇತ್ರದ ಆಧುನೀಕರಣ, ಉತ್ಪಾದನಾ ಸಾಮರ್ಥ್ಯ ವಿಸ್ತರಣೆ, ರಫ್ತು ಉತ್ತೇಜನ, ಕೌಶಲ್ಯಾಭಿವೃದ್ಧಿ ಹಾಗೂ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ಸಾಂಪ್ರದಾಯಿಕ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ಉತ್ತೇಜನದ ಜೊತೆಗೆ ಆಧುನಿಕ ಜವಳಿ ಉತ್ಪಾದನೆ, ತಾಂತ್ರಿಕ ಜವಳಿ (Technical Textiles), ಸಿದ್ಧ ಉಡುಪು ತಯಾರಿಕೆ ಹಾಗೂ ರಫ್ತು ಆಧಾರಿತ ಉದ್ಯಮಗಳ ಬೆಳವಣಿಗೆಗೂ ನೂತನ ನೀತಿಯಲ್ಲಿ ಒತ್ತು ನೀಡಲಾಗಿದೆ.

ನೀತಿ ಅನಾವರಣ ಸಮಾರಂಭದಲ್ಲಿ ರಾಜ್ಯದ ಜವಳಿ ಕ್ಷೇತ್ರದ ಸಾಮರ್ಥ್ಯವನ್ನು ಬಿಂಬಿಸುವ ಕಿರುಚಿತ್ರ ಪ್ರದರ್ಶನ ಹಾಗೂ ಹೊಸ ಹೂಡಿಕೆದಾರರೊಂದಿಗೆ ಒಡಂಬಡಿಕೆ ಕಾರ್ಯಕ್ರಮವೂ ನಡೆಯಲಿದೆ ಎಂದು ಹೇಳಿದ್ದಾರೆ.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್, ಜವಳಿ ಮತ್ತು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಸಚಿವರಾದ ರಿಜ್ವಾನ್ ಅರ್ಷದ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಸಚಿವ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.


Share

You cannot copy content of this page