ಸಮಗ್ರ ಸುದ್ದಿ

ನ್ಯಾಷನಲ್‌ ಹೆರಾಲ್ಡ್ ಪ್ರಕರಣ: ದೆಹಲಿ ಪೊಲೀಸ್ ನೋಟೀಸ್ ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಸಿಎಂ ಡಿ.ಕೆ. ಶಿವಕುಮಾರ್

Share

ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸೋಮವಾರ ದೆಹಲಿ ಪೊಲೀಸರಿಗೆ ಉತ್ತರ ನೀಡಲು ನಿರ್ಧರಿಸಿದ್ದೆ. ಆದರೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಾವಣಗೆರೆಗೆ ತೆರಳುತ್ತಿದ್ದು, ಅಧಿವೇಶನ ಮುಗಿದ ಬಳಿಕ ಉತ್ತರ ನೀಡಲು ಕಾಲಾವಕಾಶ ಕೇಳುತ್ತೇನೆ ಎಂದು ತಿಳಿಸಿದರು.

ಪೊಲೀಸರು ನೀಡಿರುವ ನೋಟಿಸ್ ಗೆ ನನ್ನ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ. ಏಕೆಂದರೆ ಅವರು ಎಫ್ಐಆರ್ ಪ್ರತಿಯನ್ನು ಲಗತ್ತಿಸಿಲ್ಲ. ಇ.ಡಿ.ಗೆ ಈಗಾಗಲೇ ಉತ್ತರ ನೀಡಿದ್ದೇವೆ. ಎಫ್ಐಆರ್ ಪ್ರತಿಯಲ್ಲಿ ಏನಿದೆ ಎಂದು ಓದಿಲ್ಲ. ಕೇವಲ ನೋಟಿಸ್ ಮಾತ್ರ ನೀಡಿದ್ದಾರೆ. ಎಫ್ಐಅರ್ ಪ್ರತಿ ನೀಡಿ ಎಂದು ಕೇಳುತ್ತೇನೆ ಎಂದು ತಿಳಿಸಿದರು.

ಕೆ.ಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲ ಅವರನ್ನು ಭೇಟಿಯಾಗಿರುವ ಬಗ್ಗೆ ಕೇಳಿದಾಗ, ನಾನು ದೆಹಲಿಗೆ ಬಂದಾಗ ಎಲ್ಲರನ್ನೂ ಭೇಟಿ ಮಾಡಬೇಕು. ಸುರ್ಜೆವಾಲ ಅವರನ್ನು, ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಬೇಕು. ನಿನ್ನೆ ಇಂದಿರಾ ಭವನದಲ್ಲಿ ನಡೆದ ಭೋಜನ ಕೂಟದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿದ್ದೆ ಎಂದು ತಿಳಿಸಿದರು.


Share

You cannot copy content of this page