ಸಮಗ್ರ ಸುದ್ದಿ

ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಕ್ರಮವಹಿಸಿ- ಸಚಿವ ಶಿವರಾಜ ಎಸ್. ತಂಗಡಗಿ

Share

ಕೊಪ್ಪಳ: ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಸೂಚಿಸಿದರು.

ಅವರು ಕೊಪ್ಪಳದ ಜಿಲ್ಲಾ ಪಂಚಾಯತ್ ನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಅಮೃತ 2.0 ಯೋಜನಾ ಕಾಮಗಾರಿಗಳ ಪ್ರಗತಿ ಮತ್ತು ಜಲಜೀವನ ಮಿಷನ್ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯ 7 ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು. ಜೆಇಗಳು. ಎಇಇ ಗಳು ತಮ್ಮ ವ್ಯಾಪ್ತಿಯ ಪಂಚಾಯತಿಗಳಿಗೆ ಭೇಟಿ ನೀಡಿ ಎಲ್ಲಿ ನೀರಿನ ಸಮಸ್ಯೆಗಳು ಎದುರಾಗದಂತೆ ಮುಂಚಿತವಾಗಿ ಮಾಹಿತಿ ಪಡೆಯಬೇಕು. ಜಿಲ್ಲೆಯ ಯಾವ ಒಂದು ಊರಿನಲ್ಲಿ ನೀರಿನ ಸಮಸ್ಯೆಯಾಗಬಾರದು ಎಂದು ಹೇಳಿದರು.

ಯಾವ ತಾಲೂಕಿನಲ್ಲಿ ನೀರಿನ ಸಮಸ್ಯೆಯಾಗಬಹುದೆಂದು ಗುರುತಿಸಿ ಈಗಿನಿಂದಲೇ ಆಯಾ ತಾಲ್ಲೂಕಿನ ಶಾಸಕರ ಮುಖಾಂತರ ಸಿಇಓ ಅವರಿಗೆ ಮಾಹಿತಿ ನೀಡಿ. ಈ ಕುರಿತು ನಾನು ಬರುವ ಅಧಿವೇಶನದಲ್ಲಿ ಮಾತನಾಡುತ್ತೇನೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಿಗೆ ಕೃಷ್ಣಾ ನದಿಯಿಂದ ನೀರು ಬರುತ್ತವೆ ಅಲ್ಲಿ ನೀರಿನ ಕಾಮಗಾರಿಗಳು ಸಮರ್ಪಕವಾಗಿ ಆದರೆ ನೀರಿನ ಸಮಸ್ಯೆಗಳೆ ಬರುವುದಿಲ್ಲ ಎಂದರು.

ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿನ ಎಲ್ಲಾ ಕಾಮಗಾರಿಗಳು ಮುಗಿದರೆ ನೀರಿನ ಸಮಸ್ಯೆ ಇರುವುದಿಲ್ಲ. ಕುಡಿಯುವ ನೀರಿನ ಕೆಲಸ ಮತ್ತು ಕಾಮಗಾರಿಗಳನ್ನು ಅಧಿಕಾರಿಗಳು ಮುತುವರ್ಜಿವಹಿಸಿ ಫಾಲೋ ಮಾಡಬೇಕು. ಕಾಲ ಮಿತಿಯಲ್ಲಿ ಕೆಲಸ ಮಾಡದ ಗುತ್ತಿಗೆದಾರರಿಗೆ ದಂಡ ಹಾಕಬೇಕು. ಇಲ್ಲದಿದ್ದರೆ ಆ ಕೆಲಸವನ್ನು ಸರಿಯಾಗಿ ಮಾಡುವ ಮತ್ತೊಬ್ಬ ಗುತ್ತಿಗೆದಾರರಿಗೆ ಕೊಡಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ, ಕೊಪ್ಪಳ ಸಂಸದರಾದ ಕೆ. ರಾಜಶೇಖರ ಹಿಟ್ನಾಳ. ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page