ಸಮಗ್ರ ಸುದ್ದಿ

ರಾಜ್ಯದಲ್ಲಿ ಈ ವರ್ಷ 120 ಸೇತುವೆ ನಿರ್ಮಾಣದ ಗುರಿ: ಸಚಿವ ಸತೀಶ್ ಜಾರಕಿಹೊಳಿ

Share

ಕಾರವಾರ: ರಾಜ್ಯದಲ್ಲಿ ಈ ವರ್ಷ ಹೊಸದಾಗಿ 120 ಸೇತುವೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಅವರು ಇಂದು ಕುಮಟಾ ತಾಲ್ಲೂಕಿನ ಕಲಭಾಗದಲ್ಲಿ ಮೂವತ್ತು ಗುಂಡಿ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಕರಾವಳಿ ಮತ್ತು ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗದ ಸಂಪರ್ಕ ಕಡಿತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಒದಗಿಸಲು ಈಗಾಗಲೇ 12 ಜಿಲ್ಲೆಗಳಲ್ಲಿ 400 ಕಾಲು ಸಂಕ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಹೆಚ್ಚಿನ ಸಂಖ್ಯೆಯ ಕಾಲ ಸಂಕಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ, ಕುಮಟಾ ಹೊನ್ನಾವರ ಭಾಗದಲ್ಲಿ ಹೆಚ್ಚಿನ ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗಿದ್ದು, ಅವಶ್ಯವಿರುವ ಕಡೆ ಕಾಲು ಸಂಕ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಶಿಥಿಲಾವಸ್ಥೆಯಲ್ಲಿರುವ ಹಳೆ ಸೇತುವೆಗಳಿಗೆ ತಕ್ಷಣವೇ ಸೇತುವೆ ಮರು ನಿರ್ಮಾಣ ಮಾಡಲು ಮಂಜೂರಾತಿ ನೀಡುತ್ತಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ನದಿಯ ಹಿನ್ನಿರಿಗೆ ಸಮುದ್ರದ ಉಪ್ಪು ನೀರು ಮಿಶ್ರಣವಾಗುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.

ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದಿಲೀಪ್ ಶಶಿ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page