ಸಮಗ್ರ ಸುದ್ದಿ

ವಿವಿಧ ಸಂಘಟನೆಗಳ ಬೇಡಿಕೆ ಈಡೇರಿಕೆಗೆ ಸಕಾರಾತ್ಮಕ ಪರಿಶೀಲನೆ : ಸಚಿವ ಬೈರತಿ ಸುರೇಶ್

Share

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ಭರವಸೆ ನೀಡಿದ್ದಾರೆ.

ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿದರು.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರವನ್ನು ತಾಲೂಕನ್ನಾಗಿ ಮಾಡುವಂತೆ ಒತ್ತಾಯಿಸಿ ಹೋರಾಟ ಸಮಿತಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿತು.

ಈ ಮನವಿಗೆ ಸ್ಪಂದಿಸಿದ ಸಚಿವ ಬೈರತಿ ಸುರೇಶ್ ಅವರು, ಹೊಸ ತಾಲೂಕು ರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು ಮತ್ತು ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ತಾಯಿ ಭುವನೇಶ್ವರಿಯ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವಂತೆ ಸರ್ವೋದಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಆಗ್ರಹಿಸಿದಾಗ ಸಚಿವರು, ಕನ್ನಡ ನಾಡು ನುಡಿ ಸಂಸ್ಕೃತಿ, ಭಾಷೆ, ನೆಲ ಜಲದ ಬಗ್ಗೆ ಗೌರವ ಹೊಂದಿರುವ ಸರ್ಕಾರ ನಮ್ಮದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದವರಾಗಿದ್ದು, ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸಮಿತಿ ರಚನೆ ಪರಿಶೀಲನೆ:
ಹಿಂದುಳಿದ ವರ್ಗಗಳ ಮತ್ತು ದಲಿತರಿಗೆ ಮೀಸಲಿರುವ ಎಸ್ ಸಿ ಎಸ್ ಪಿ / ಟಿಎಸ್ ಪಿ ಅನುದಾನದ ಬಳಕೆಯ ಮೇಲ್ವಿಚಾರಣೆಗೆ ತಾಲೂಕು, ಜಿಲ್ಲಾ ಮಟ್ಟದ ಸಮಿತಿ ರಚಿಸುವಂತೆ ಭೀಮ್ ಆರ್ಮಿಯ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬೈರತಿ ಸುರೇಶ್ ಅವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದರು.

ಅಹಿಂದ ವರ್ಗಗಳ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಎಂದಿಗೂ ಈ ಸಮುದಾಯವನ್ನು ನಮ್ಮ ಸರ್ಕಾರ ಕೈಬಿಡುವುದಿಲ್ಲ ಎಂದು ಭರವಸೆ ನೀಡಿದರು.


Share

You cannot copy content of this page