ಬೆಂಗಳೂರು, ನ.13.
ಪಿಂಚಣಿದಾರರಿಗೆ ಅನುಕೂಲ ಕಲ್ಪಿಸುವ ಮತ್ತು ಜೀವಿತ ಪ್ರಮಾಣ ಪತ್ರ (Life Certificate) ಸಲ್ಲಿಸುವ ಪ್ರಕ್ರಿಯೆಯನ್ನು ಸರಳೀಕರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಮಹತ್ವದ ಕ್ರಮ ಕೈಗೊಂಡಿದೆ.
‘ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಭಿಯಾನ 4.0’ ಅನ್ನು ತನ್ನ ಪಿಂಚಣಿದಾರರಿಗೆ ಪ್ರಾರಂಭಿಸಿದೆ. ಇದರಿಂದಾಗಿ, ಬ್ಯಾಂಕ್ ಅಥವಾ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲದೇ, ತಮ್ಮ ಮನೆಯಿಂದಲೇ ಆನ್ ಲೈನ್ ಮೂಲಕ ಜೀವಿತ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅನುಕೂಲವಾಗಿದೆ.
ಈ ಬಳಕೆದಾರ-ಸ್ನೇಹಿ ಡಿಜಿಟಲ್ ವ್ಯವಸ್ಥೆಯು ವಿಶೇಷವಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಅವರ ಅಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಜೊತೆಗೆ, ಪಿಂಚಣಿ-ಸಂಬಂಧಿತ ಸೇವೆಗಳಲ್ಲಿ ಅನುಕೂಲ ಮತ್ತು ನಿಖರತೆಯನ್ನು ಖಚಿತಪಡಿಸುತ್ತದೆ.
*ಡಿಜಿಟಲ್ ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು ಹೇಗೆ?*
ಪಿಂಚಣಿದಾರರು ತಮ್ಮ ಡಿಜಿಟಲ್ ಜೀವಿತ ಪ್ರಮಾಣ ಪತ್ರವನ್ನು ಮನೆಯಿಂದಲೇ ಸುಲಭವಾಗಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
1. ಆಧಾರ್ ಫೇಸ್ ಆರ್’ಡಿ (AadhaarFace RD): ಯುಐಡಿಎಐ (UIDAI) ನಿಂದ ಬಿಡುಗಡೆಯಾದ ಇತ್ತೀಚಿನ ಆವೃತ್ತಿಯ 0.7.43 ರ ‘ಆಧಾರ್ ಫೇಸ್ ಆರ್’ಡಿ (ಆರಂಭಿಕ ಪ್ರವೇಶ) ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್’ಲೋಡ್ ಮಾಡಿಕೊಳ್ಳಿ.
2. ಜೀವನ್ ಪ್ರಮಾಣ್ (Jeevan Pramaan): ಅಪ್ಲಿಕೇಶನ್ ಸ್ಥಾಪನೆಯಾದ ನಂತರ, ಗೂಗಲ್ ಪ್ಲೇ ಸ್ಟೋರ್ ನಿಂದ ‘ಜೀವನ್ ಪ್ರಮಾಣ್’ ಅಪ್ಲಿಕೇಶನ್ (ಆವೃತ್ತಿ 3.6.3) ಅನ್ನು ಡೌನ್’ಲೋಡ್ ಮಾಡಿ.
3. ಈ ಎರಡೂ ಅಪ್ಲಿಕೇಶನ್ ಗಳನ್ನು ಬಳಸಿ, ಪಿಂಚಣಿದಾರರು ತಮ್ಮ ಡಿಜಿಟಲ್ ಜೀವಿತ ಪ್ರಮಾಣ ಪತ್ರಗಳನ್ನು ಸುಲಭವಾಗಿ ಮನೆಯಿಂದಲೇ ಆನ್ ಲೈನ್ ಮೂಲಕ ಸಲ್ಲಿಸಬಹುದು..
*• ಸಹಾಯವಾಣಿ (ಹೆಲ್ಪ್ ಡೆಸ್ಕ್):*
ಪಿಂಚಣಿದಾರರಿಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು, ರೈಲ್ವೆಯ ಕೇಂದ್ರ ಕಚೇರಿಗಳು ಬ್ಯಾಂಕ್’ಗಳು, ವಿಭಾಗೀಯ ಮತ್ತು ಕಾರ್ಯಾಗಾರ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿನ ಸಿಬ್ಬಂದಿ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಲಿದ್ದಾರೆ..
ಎಲ್ಲ ಪಿಂಚಣಿದಾರರು ಈ ಸುಲಭ, ಸುರಕ್ಷಿತ ಮತ್ತು ಸಮಯ ಉಳಿತಾಯದ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಇದರಿಂದ ಪಿಂಚಣಿ ಪ್ರಯೋಜನಗಳು ಸಕಾಲದಲ್ಲಿ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಬೇಕು.
