ಬೆಂಗಳೂರು, ನ.13: ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು..
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸಮೃದ್ಧ ಕೃಷಿ -ವಿಕಸಿತ ಭಾರತ ನೆಲ,ಜಲ ಮತ್ತು ಬೆಳೆ ಶೀರ್ಷಿಕೆ ಅಡಿಯಲ್ಲಿ ಇಂದಿನಿಂದ ನಾಲ್ಕು ದಿನಗಳವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ ಮೇಳ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಬೆಂಗಳೂರು ಕೃಷಿ ವಿವಿಯೂ ಪ್ರತಿವರ್ಷ ಅತ್ಯುತ್ತಮ ಕೃಷಿ ಮೇಳ ಮತ್ತು ಪ್ರದರ್ಶನವನ್ನು ಏರ್ಪಡಿಸುತ್ತಾ ಬಂದಿದ್ದು, ಉತ್ತಮ ತಳಿಗಳನ್ನು ಈ ಭಾರಿ ಬಿಡುಗಡೆಗೊಳಿಸಿದೆ. ರೈತರಿಗೆ ಕೃಷಿ ವಿವಿಗಳು ನೀಡಬೇಕಾಗಿರುವುದು ಇದನ್ನೆ. ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ ರೈತರಿಗೆ ಉತ್ತಮ ಆದಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳನ್ನು ನೀಡುತ್ತಿವೆ..
ಕೆಪೆಕ್ ಸಂಸ್ಥೆಯೂ ಪಿಎಂಎಫ್ಎಂಇ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 5 ಸಾವಿರ ಉದ್ಯಮಿಗಳಿಗೆ 15 ಲಕ್ಷ ಸಬ್ಸಿಡಿ ನೀಡಿದೆ ಎಂದು ಸಚಿವರು ಹೇಳಿದರು..
ಇತ್ತಿಚಿಗೆ ಫಿಲಿಪೈನ್ಸ್ ದೇಶಕ್ಕೆ ಪ್ರವಾಸ ಕೈಗೊಂಡು ಮನಿಲಾದಲ್ಲಿರುವ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಫಿಲಿಪೈನ್ಸ್ ದೇಶದಲ್ಲಿ ಸುಮಾರು 25 ರಿಂದ 30 ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲೂ ನಮ್ಮ ವಿಜ್ಞಾನಿಗಳು ರೈತರಿಗೆ ಇಂತಹ ತಳಿ ಸಂಶೋಧಿಸಿದ್ದಾರೆ ಎಂದು ತಿಳಿಸಿದರು.
ರೈತರು ವೈಜ್ಞಾನಿಕ ಹಾಗೂ ಸಮಗ್ರ ಬೇಸಾಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು. ಇದಕ್ಕೆ ಕೃಷಿ ವಿವಿಗಳು ನೆರವಾಗಬೇಕು ಎಂದು ಸಚಿವರು ಕರೆ ನೀಡಿದರು.
ರೈತರ ಬೆಲೆಗಳಿಗೆ ನ್ಯಾಯಯುತ ಬೆಲೆ , ಸೂಕ್ತ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಸಂಶೋಧನೆಗಳ ವೈಜ್ಞಾನಿಕ ಅನುಷ್ಠಾನ, ಬರ ನಿರ್ವಹಣೆ ಮಾಡಿದಾಗ ಮಾತ್ರ ಸುಸ್ಥಿರ ಕೃಷಿ ಸಾಧ್ಯ ಎಂದು ಚಲುವರಾಸ್ವಾಮಿಯವರು ಅಭಿಪ್ರಾಯ ಪಟ್ಟರು.

ರೈತರ ಬದುಕು ಹಸನು ಮಾಡುವುದು ನಮ್ಮ ಹೊಣೆ. ಕೃಷಿ ಸಂಶೋಧನೆ, ಮೌಲ್ಯ ವರ್ಧನೆಗೆ ಹೆಚ್ಚು ಒತ್ತು ನೀಡಬೇಕು . ಇಳುವರಿಯೂ ವೃದ್ಧಿಸಬೇಕು. ನಮ್ಮ ಸರ್ಕಾರ ಕೃಷಿಗೆ ಬೆಂಬಲ, ಸಂಶೋಧನೆಗಳಿಗೆ ನೆರವು, ಪ್ರೋತ್ಸಾಹ ನೀಡಲು ಸದಾ ಸಿದ್ದ ಎಂದು ಸಚಿವರು ತಿಳಿಸಿದರು.
ಆಹಾರ ಸಂಸ್ಕರಣೆ, ಮೌಲ್ಯ ವರ್ಧನೆಗೆ ಹೆಚ್ಚಿನ ಆದ್ಯತೆ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಉದ್ಯೋಗ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮಾತನಾಡಿ, ಆಹಾರ ಸಂಸ್ಕರಣೆ, ಮೌಲ್ಯ ವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರು ತಾವು ಬೆಳೆಯುವಂತಹ ಹಣ್ಣು ಮತ್ತು ತರಕಾರಿಗಳನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಕೇಂದ್ರ ಸರ್ಕಾರ ಮುಂಬರುವ ದಿನಗಳಲ್ಲಿ ಕೃಷಿ ರೈಲುಗಳು, ಕೃಷಿ ವಿಮಾನಗಳು ಪ್ರಾರಂಭಿಸಲು ಕ್ರಮ ವಹಿಸುತ್ತಿದೆ. ಉದ್ಯಮಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಮುಂದಾಗಬೇಕು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ನೀಡಲಿವೆ ಎಂದರು.
ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರವಾಗಿದೆ. ದೇಶದಲ್ಲಿ 50 ಕೋಟಿಗಿಂತ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಯಾವುದೇ ನೆರೆ, ಬರಗಾಲ, ಅತಿವೃಷ್ಠಿ ಸಂಭವಿಸಿದರೂ ದೃತಿಗೆಡದೇ ಕೃಷಿಕರು ಪರಿಶ್ರಮದಿಂದ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದರು.
ದೇಶದಲ್ಲಿ 350 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಬೆಳೆಗಳನ್ನು ಹಾಗೂ 350 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಶೇಕಡ 80 ರಷ್ಟು ಜನ 2.5 ಎಕರೆ ಜಮೀನು ಹೊಂದಿರುವ ಸಣ್ಣ ಭೂ ಹಿಡುವಳಿ ರೈತರಿದ್ದಾರೆ. ಕೃಷಿಕರ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಕಿಸಾನ್ ಸಮ್ಮಾನ್ ಯೋಜನೆ, ಬೆಳೆ ವಿಮೆ, ಹೊಸ ಕೃಷಿ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಆದ್ಯತೆ ನೀಡಲಾಗಿದೆ ಎಂದರು.
*ರೈತ ಸಾಧಕರಿಗೆ ಸನ್ಮಾನ*;
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಪ್ರಗತಿಪರ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಗೂ 91 ಸಾಧಕರ ಯಶೋಗಾಥೆಗಳನ್ನೊಳಗೊಂಡ ಕೃಷಿ ಸಾಧಕರ ಕೈಪಿಡಿ ಮತ್ತು ತಂತ್ರಜ್ಞಾನಗಳ ನೂತನ ತಳಿ ಮತ್ತು ತಾಂತ್ರಿಕತೆಗಳ ಪಕ್ಷಿನೋಟ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ಸೆಲ್ವಕುಮಾರ್, ಕೃಷಿ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ.ಎಸ್.ವಿ.ಸುರೇಶ, ಕುಲಸಚಿವರಾದ ಡಾ.ಕೆ.ಸಿ.ನಾರಾಯಣಸ್ವಾಮಿ ಹಾಗೂ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳು, ರೈತ ಪ್ರಶಸ್ತಿ ಪುರಸ್ಕøತರು ಉಪಸ್ಥಿತರಿದ್ದರು.
