ಬೆಳಗಾವಿ: ಕರ್ನಾಟಕ ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕಕ್ಕೆ ಮೇಲ್ಮನೆಯಲ್ಲಿ ಇಂದು ಅಂಗೀಕಾರ ದೊರೆಯಿತು.
ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸದನಕ್ಕೆ ತಿಳಿಸಿದರು.
ಸುಧೀರ್ಘ ಅವಧಿಯ ಚರ್ಚೆಯ ನಂತರ ಪ್ರಸ್ತಾವವನ್ನು ಸಭಾಪತಿಯವರು ಧ್ವನಿಮತಕ್ಕೆ ಹಾಕಿದರು. ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.
ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗಿಕರಣ) ವಿಧೇಯಕ, 2025 ಅಂಗೀಕಾರ:
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗಿಕರಣ) ವಿಧೇಯಕ, 2025 ನ್ನು ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.
ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು, ಈ ವಿಧೇಯಕವನ್ನು ಪರ್ಯಾಲೋಚಿಸಿ, ಅಂಗಿಕರಿಸುವಂತೆ ಕೋರಿದರು.
ವಿಧೇಯಕದ ಬಗ್ಗೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ರವಿಕುಮಾರ್ ಶಾಸಕರಾದ ಜಕ್ಕಪ್ಪನವರ್, ಶಾಂತರಾಮ ಬುಡ್ನ ಸಿದ್ದಿ, ಶಿವಕುಮಾರ್, ರಮೇಶ್ ಬಾಬು, ಬಲ್ಕಿಸ್ ಭಾನು, ಹೇಮಲತಾ ನಾಯಕ್, ಮಾತನಾಡಿದರು. ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.
