ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿ ಮತ್ತು ಕ್ರೀಡಾಪಟುಗಳ ಉನ್ನತಿಗಾಗಿ ನಿರಂತರವಾಗಿ ಸಕ್ರಿಯ ಪಾತ್ರ ವಹಿಸುತ್ತಿವೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ವತಿಯಿಂದ ಲೋಕಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಪ್ರಶಸ್ತಿಗಳು- 2025 ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕ್ರೀಡೆಗಳನ್ನು ಉತ್ತೇಜಿಸಲು ದೃಢವಾದ ನೀತಿಗಳನ್ನು ರೂಪಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು.
ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಸಹ ಒದಗಿಸುತ್ತಿದೆ ಎಂದರು.ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನಗಳು, ತರಬೇತಿ ಮತ್ತು ಪ್ರೋತ್ಸಾಹಕ ಯೋಜನೆಗಳ ಮೂಲಕ ಯುವ ಕ್ರೀಡಾಪಟುಗಳು ಅಭಿವೃದ್ಧಿ ಹೊಂದಲು ಅವಕಾಶಗಳನ್ನು ಒದಗಿಸುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಮನ್ನಣೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ರೀಡೆಗಳನ್ನು ಆರೋಗ್ಯ, ಶಿಸ್ತು ಮತ್ತು ರಾಷ್ಟ್ರೀಯ ಹೆಮ್ಮೆಯೊಂದಿಗೆ ಜೋಡಿಸುವ ಮೂಲಕ ಕರ್ನಾಟಕ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಕ್ರೀಡೆಗಳಲ್ಲಿ ದೇಶದ ಪ್ರಾತಿನಿಧ್ಯವನ್ನು ಹೆಚ್ಚಿಸಲು ತಳಮಟ್ಟದಲ್ಲಿ ಪ್ರತಿಭೆಯನ್ನು ಗುರುತಿಸುವುದು ಮತ್ತು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ನಿಯಮಿತ ಕ್ರೀಡಾ ಚಟುವಟಿಕೆಗಳು ಮತ್ತು ಕಡ್ಡಾಯ ದೈಹಿಕ ಶಿಕ್ಷಣವನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಮೂಲಸೌಕರ್ಯ ಮತ್ತು ತರಬೇತಿ ಪಡೆದ ತರಬೇತುದಾರರನ್ನು ಒದಗಿಸುವುದು ನಿರ್ಣಾಯಕವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ವಿಸ್ತರಿಸುವ ಅವಶ್ಯಕತೆಯಿದೆ. ಕ್ರೀಡೆಯನ್ನು ವೃತ್ತಿಯಾಗಿ ಸಾಮಾಜಿಕ ಮನ್ನಣೆ ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸುವ ಮೂಲಕ, ಯುವ ಪೀಳಿಗೆಯನ್ನು ಕ್ರೀಡೆಗಳನ್ನು ಮುಂದುವರಿಸಲು ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕವು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ರಾಜ್ಯವು ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಹಾಕಿ, ಕಬಡ್ಡಿ ಮತ್ತು ಈಜು ಮುಂತಾದ ಕ್ರೀಡೆಗಳಲ್ಲಿ ಹಲವಾರು ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಹುಟ್ಟುಹಾಕಿದೆ. ಬೆಂಗಳೂರಿನಂತಹ ನಗರಗಳು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಅಕಾಡೆಮಿಗಳು, ಕ್ರೀಡಾಂಗಣಗಳು ಮತ್ತು ತರಬೇತಿ ಕೇಂದ್ರಗಳನ್ನು ಹೊಂದಿವೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದ ಅನೇಕ ಶ್ರೇಷ್ಠ ಕ್ರೀಡಾಪಟುಗಳನ್ನು ಕರ್ನಾಟಕ ನೀಡಿದೆ. ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟ, ಕಾಮನ್‍ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ದರ್ಜೆಯ ಸ್ಪರ್ಧೆಗಳಲ್ಲಿ ನಮ್ಮ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನಗಳು ಕರ್ನಾಟಕವು ಪ್ರತಿಭೆಗಳ ನಾಡು ಎಂಬುದನ್ನು ಸಾಬೀತುಪಡಿಸಿವೆ. ಸರ್ಕಾರದ ಸಕಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವಿಶ್ವಮಟ್ಟದಲ್ಲಿ ಕರ್ನಾಟಕದ ಕೀರ್ತಿ ಹೆಚ್ಚಿಸಿ ಎಂದು ತಿಳಿಸಿದರು.
ಪೋಷಕರು ಮತ್ತು ಗುರುಗಳು ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ ಮಕ್ಕಳು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಇದು ಅವರ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅವರನ್ನು ಸಕ್ರಿಯಗೊಳಿಸುತ್ತದೆ ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟ ಎಲ್ಲಾ ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾ ಪ್ರವರ್ತಕರು ಮತ್ತು ಕ್ರೀಡಾ ವ್ಯಕ್ತಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಶಸ್ತಿಯು ನಿಮ್ಮ ಸಾಧನೆಗಳಿಗೆ ದೊರೆತ ಮನ್ನಣೆ ಮಾತ್ರವಲ್ಲದೆ ನಿಮ್ಮ ಶಿಸ್ತು, ನಿರಂತರ ಕಠಿಣ ಪರಿಶ್ರಮ, ಕ್ರೀಡಾ ಮನೋಭಾವ ಮತ್ತು ಅತ್ಯುತ್ತಮ ಪ್ರದರ್ಶನಕ್ಕೂ ಸಂದ ಗೌರವವಾಗಿದೆ. ನಿಮ್ಮ ಯಶಸ್ಸು ಅನೇಕ ಯುವಕರು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಮತ್ತು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಸ್ಫೂರ್ತಿ ನೀಡುತ್ತದೆ.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ರಾಜ್ಯದಲ್ಲಿ ಒಲಿಂಪಿಕ್ ಮೌಲ್ಯಗಳನ್ನು ಉತ್ತೇಜಿಸಲು, ಕ್ರೀಡಾ ಸಂಸ್ಕøತಿಯನ್ನು ಬಲಪಡಿಸಲು ಮತ್ತು ಕ್ರೀಡಾಪಟುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ವಿವಿಧ ಕ್ರೀಡಾ ಸಂಘಗಳೊಂದಿಗೆ ಸಮನ್ವಯದೊಂದಿಗೆ, ತರಬೇತಿ, ಸ್ಪರ್ಧೆಗಳು ಮತ್ತು ಪ್ರತಿಭಾ ಶೋಧ ಕಾರ್ಯಕ್ರಮಗಳ ಮೂಲಕ ಉದಯೋನ್ಮುಖ ಕ್ರೀಡಾಪಟುಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವಲ್ಲಿ ಸಂಘವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ಲಾಘಿಸಿದರು.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಪ್ರಶಸ್ತಿಗಳು ರಾಜ್ಯದ ಕ್ರೀಡಾ ಸಮುದಾಯಕ್ಕೆ ಹೆಮ್ಮೆಯ ಸಂದರ್ಭವಾಗಿದೆ. ಈ ಪ್ರಶಸ್ತಿಗಳು ಅತ್ಯುತ್ತಮ ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾ ಆಡಳಿತಗಾರರು ಮತ್ತು ಕ್ರೀಡೆಯ ಅಭಿವೃದ್ಧಿಗೆ ಕೊಡುಗೆ ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುವ ಗುರಿಯನ್ನು ಹೊಂದಿವೆ. ಇದು ಕ್ರೀಡೆಯಲ್ಲಿ ಶಿಸ್ತು, ಸಮರ್ಪಣೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಬಲಪಡಿಸುತ್ತದೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಂಎಲ್‍ಸಿ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ನ ಅಧ್ಯಕ್ಷ ಕೆ.ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಆರ್. ಚೇತನ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
