ಕಲಬುರಗಿ: ತಾವು ಮುಖ್ಯಮಂತ್ರಿ ಆಗಿದ್ದಾಗ ಕಲಬುರ್ಗಿ ಜಿಲ್ಲೆಯಲ್ಲಿ ಲಕ್ಷ ಜನರಿಗೆ ಉದ್ಯೋಗವಕಾಶ ಕಲ್ಪಿಸುವ ಮಹತ್ವದ ಪಿಎಂ ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಗೆ ಅಡಿಗಲ್ಲು ಹಾಕಲಾಗಿದೆ. ಆದರೆ, ರಾಜ್ಯ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಯೋಜನೆ ಸಾಕಾರಗೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ ರಾಜ್ಯ ಸರ್ಕಾರದ ಆಸಕ್ತಿ ಮೇರೆಗೆ ಆ್ಯಂಕರ್ ಇಂಡಸ್ಟ್ರೀಸ್ ಬರಬೇಕಿತ್ತು. ಭೂಮಿ ಸಹ ನೀಡಲಾಗಿದ್ದರೂ ಜತೆಗೆ ಕಾರ್ಯಾರಂಭಕ್ಕೆ ಅಂತಹ ಅಡ್ಡಿ ಆತಂಕಗಳಿರಲಿಲ್ಲ. ಈ ಕುರಿತು ಈಗಾಗಲೇ ರಾಜ್ಯದ ಜವಳಿ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ಮಾತನಾಡಲಾಗಿದೆ. ಪ್ರಮುಖವಾಗಿ ತಾವು ಸಂಸತ್ತಿನ ಕಾರ್ಮಿಕ, ಜವಳಿ ಮತ್ತು ಕೌಶಾಲ್ಯಾಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಹೀಗಾಗಿ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಇದಕ್ಕೆ ಸಂಬಂಧಸಿದಂತೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ್, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕೇಂದ್ರದ ಜವಳಿ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಇಲ್ಲಿಯವರೆಗೆ ಆಗಿರುವ ಕಾರ್ಯ ಪರಿಶೀಲನೆ ಜತೆಗೆ ಮುಂದೆ ಆಗಬೇಕಿರುವ ಕಾರ್ಯಗಳ ಕುರಿತಾಗಿ ಅವಲೋಕನ ನಡೆಸಲಾಗುವುದು. ರಾಜ್ಯ ಸರ್ಕಾರ ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿದ್ದಲ್ಲಿ ಕೇಂದ್ರ ಸರ್ಕಾರ ತನ್ನೆಲ್ಲ ಸೌಕರ್ಯಗಳನ್ನು ಕಲ್ಪಿಸಿ ಯೋಜನೆ ಸಂಪೂರ್ಣ ಕಾರ್ಯಕ್ಕೆ ಕೈ ಜೋಡಿಸುತ್ತದೆ ಎಂದು ತಿಳಿಸಿದರು.
ಕೇಂದ್ರದ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನುದಾನ ಬಂದಿಲ್ಲ ಹಾಗೂ ಜೆಜೆಎಂ ಕಾಮಗಾರಿಗೂ ಹಣ ಬಂದಿಲ್ಲ ಎನ್ನಲಾಗುತ್ತದೆ. ಆದರೆ ವಾಸ್ತವವಾಗಿ ಅನುದಾನ ಬಳಕೆ ಪ್ರಮಾಣ ಪತ್ರ ಸಮರ್ಪಕವಾಗಿ ಸಲ್ಲಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಶರಣು ಸಲಗರ, ಡಾ. ಸಿದ್ದು ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಿಜೆಪಿ ಕಲಬುರಗಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಸೇರಿದಂತೆ ಮುಂತಾದವರಿದ್ದರು.
