ಭಾರತದ ಸ್ಟಾರ್ ಹಾಕಿ ಆಟಗಾರ ಮತ್ತು ಪುರುಷರ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಬಾರಿ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟು ಹಾರ್ದಿಕ್ ಸಿಂಗ್ ಎಂಬುದು ವಿಶೇಷ. ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು.
ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 24 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯೋಗಾಸನ ಕ್ರೀಡಾಪಟು ಆರತಿ ಪಾಲ್, ರೈಫಲ್ ಶೂಟರ್ ಮೆಹುಲಿ ಘೋಷ್, ಜಿಮ್ನಾಸ್ಟಿಕ್ ಪ್ರಣತಿ ನಾಯಕ್, ಬ್ಯಾಡ್ಮಿಂಟನ್ ಮಹಿಳಾ ಡಬಲ್ಸ್ ಜೋಡಿಯಲ್ಲಿ, ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್, ಚೆಸ್ ಆಟಗಾರರಾದ ದಿವ್ಯಾ ದೇಶ್‌ಮುಖ್ ಮತ್ತು ವಿದಿತ್ ಗುಜರಾತಿ ಪ್ರಶಸ್ತಿಗೆ ಭಾಜನರಾದ ಪ್ರಮುಖರಾಗಿದ್ದಾರೆ.
ಭಾರತೀಯ ಒಲಿಂಪಿಕ್ ಸಂಸ್ಥೆಯ ಉಪಾಧ್ಯಕ್ಷ ಗಗನ್ ನಾರಂಗ್, ಮಾಜಿ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರ ಅಪರ್ಣಾ ಪೋಪಟ್ ಅವರನ್ನೊಳಗೊಂಡ ಆಯ್ಕೆ ಸಮಿತಿ, ಈ ಹೆಸರುಗಳನ್ನು ಅಂತಿಮಗೊಳಿಸಿದೆ.
ಈ ಬಾರಿ ಯಾವುದೇ ಕ್ರಿಕೆಟ್ ಆಟಗಾರರನ್ನು, ಅರ್ಜುನ ಅಥವಾ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ ಎಂಬುದು ವಿಶೇಷವಾಗಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ರಾಷ್ಟ್ರಪತಿಗಳು ಅಧಿಕೃತವಾಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಖೇಲ್ ರತ್ನ ಪ್ರಶಸ್ತಿಯು, 25 ಲಕ್ಷ ರೂಪಾಯಿ ಮತ್ತು ಅರ್ಜುನ ಪ್ರಶಸ್ತಿಯು, 15 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
