ಸಮಗ್ರ ಸುದ್ದಿ

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ | ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 18,496 ಮತದಾರರು: ಮಹೇಶ್ವರ್ ರಾವ್

Share

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 18,496 ಮತದಾರರಿರುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮಹೇಶ್ವರ್ ರಾವ್ ಅವರು ತಿಳಿಸಿದರು.

ಇಂದು ಜಿಬಿಎ ಕೇಂದ್ರ ಕಚೇರಿ ಸಭಾಂಗಣ–01ರಲ್ಲಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಕುರಿತಂತೆ ಮಾಹಿತಿ ನೀಡಿದರು.

ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ 322/LC/G&T/E-ROLL/2026-BIEN, ದಿನಾಂಕ 12.09.2025 ರ ವೇಳಾಪಟ್ಟಿಯಂತೆ, ಅರ್ಹತಾ ದಿನಾಂಕ 01.11.2025ಕ್ಕೆ ಅನ್ವಯವಾಗುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರಕಟಿಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ, ದಿನಾಂಕ 25.11.2025ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ, ದಿನಾಂಕ 25.11.2025 ರಿಂದ 10.12.2025ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸ್ವೀಕರಿಸಲಾದ ಅರ್ಜಿಗಳ ಪರಿಶೀಲನೆಯ ನಂತರ, ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.

ಅದರಂತೆ, ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 18,496 ಮತದಾರರು ಇದ್ದಾರೆ ಎಂದು ಮಹೇಶ್ವರ್ ರಾವ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚುನಾವಣೆ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಅವರು ಮಾತನಾಡಿ ಅಂತಿಮ ಪರಿಷ್ಕರಣೆಯಲ್ಲಿ ತಪ್ಪಿಹೋದ ಅರ್ಹ ಶಿಕ್ಷಕರು ಅಭ್ಯರ್ಥಿಗಳ ನಾಮನಿರ್ದೇಶನದ ಕೊನೆಯ ದಿನಾಂಕದವರೆಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಮತದಾರರ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುವುದಾಗಿ ತಿಳಿಸಿದರು.

ಈ ವೇಳೆ ಬೆಂಗಳೂರು ಕೇಂದ್ರ/ದಕ್ಷಿಣ/ಉತ್ತರ/ನಗರ ವಿಭಾಗಗಳ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page