ಸಮಗ್ರ ಸುದ್ದಿ

ಪತ್ರಕರ್ತರ ತರಬೇತಿ ಕಾಲೇಜು ತೆರೆಯಲು ಒಂದು ಎಕರೆ ಭೂಮಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವಯಂ ಪ್ರೇರಿತ ಘೋಷಣೆ | ಹಿರಿಯ ಪತ್ರಕರ್ತರ ಅನುಭವ ಬಳಸಿಕೊಂಡು ಅವರಲ್ಲಿ ನೈತಿಕ ಮೌಲ್ಯ ಬೆಳೆಸಿ

Share

ಬೆಂಗಳೂರು : ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಕರ್ತರಿಗೆ ತರಬೇತಿ ನೀಡಲು ಕಾಲೇಜು ಆರಂಭಿಸಿ. ಹಿರಿಯ ಪತ್ರಕರ್ತರ ಅನುಭವ ಬಳಸಿಕೊಂಡು ಅವರಲ್ಲಿ ನೈತಿಕ ಮೌಲ್ಯ ಬೆಳೆಸಿ. ಸರ್ಕಾರ ಇದಕ್ಕಾಗಿ 1 ಎಕರೆ ಜಾಗ ನೀಡಲು ಸಿದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನೀವು ಹೇಳುವುದನ್ನೇ ನಿಜ ಎಂದು ಭಾವಿಸಿ ನಾವು ಪ್ರತಿಕ್ರಿಯೆ ನೀಡುತ್ತೇವೆ. ಕುಮಾರಸ್ವಾಮಿ ನೀಡದ ಹೇಳಿಕೆಯನ್ನು, ಅವರು ಹೇಳಿದ್ದಾರೆ ಎಂದು ಸುಳ್ಳು ಹೇಳಿ ನಮ್ಮ ಬಳಿ ಪ್ರತಿಕ್ರಿಯೆ ಕೇಳುತ್ತೀರಿ. ಈ ರೀತಿ ಕೇಳುವವರಿಗೆ, ದಾರಿ ತಪ್ಪಿಸುವವರಿಗೆ ಪ್ರೆಸ್ ಕ್ಲಬ್ ನಿಂದ ತರಬೇತಿ ನೀಡಬೇಕು. ಸಮಾಜ ಒಡೆದು, ಅಶಾಂತಿ ಮೂಡಿಸುವವರಿಗೆ ಪಾಠ ಕಲಿಸಬೇಕು. ಬಿಡಿಎ ಅಧ್ಯಕ್ಷರು ಇಲ್ಲೇ ಇದ್ದಾರೆ, ಅರ್ಜಿ ಹಾಕಿ, ಎಲ್ಲಾದರೂ ಅಗತ್ಯ ಜಾಗ ನೀಡುತ್ತೇವೆ ಎಂದರು.

ಈ ವರ್ಷ ಬದುಕಿನಲ್ಲಿ ಸಾಧನೆ ಮಾಡಿದವರಿಗೆ ಇಂದು ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪುರಸ್ಕೃತರಿಗೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ಅಭಿನಂದನೆ ಸಲ್ಲಬೇಕು. ಸಗಣಿಗೆ ಗರಿಕೆ ಸಿಕ್ಕಿಸಿ ಗಣಪತಿ ಎಂದು ಪೂಜೆ ಮಾಡುತ್ತೇವೆ. ಅದೇ ರೀತಿ ತಮ್ಮ ತಮ್ಮ ಸಂಸ್ಥೆಗಳಲ್ಲಿ ಎಲ್ಲರೂ ಪ್ರಮುಖ ಪಾತ್ರ ವಹಿಸುತ್ತಾರೆ. ಯಾರೂ ಪ್ರಯೋಜನಕ್ಕೆ ಇಲ್ಲ ಎಂದು ಭಾವಿಸಲಾಗದು. ಈ ಜಗತ್ತಿನಲ್ಲಿ ಎಲ್ಲರಿಗೂ ಅವಕಾಶ ಇದೆ ಎಂದು ಡಿವಿಜಿ ಅವರು ತಮ್ಮ ಕಗ್ಗದಲ್ಲಿ ಹೇಳಿದ್ದಾರೆ ಎಂದರು.

ನಾವು ದೀಪ ಬೆಳಗುವಾಗ ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಎಂದು ಪ್ರಾರ್ಥಿಸುತ್ತೇವೆ. ಎಲ್ಲರೂ ಬದುಕಿನಲ್ಲಿ ಆರೋಗ್ಯವಾಗಿ, ಸಂಪತ್ತನ್ನು ಪಡೆಯಬೇಕು. ದೀಪದ ಬೆಳಕಿನ ಹಿಂದೆ ಬತ್ತಿ ಹಾಗೂ ಎಣ್ಣೆ ಇದೆ. ಎಲ್ಲರಿಗೂ ಬೆಳಕು ಮಾತ್ರ ಕಾಣುತ್ತದೆ. ಆದರೆ ಬತ್ತಿ ಉರಿಯುವುದು ಯಾರಿಗೂ ಕಾಣುವುದಿಲ್ಲ. ಇಲ್ಲಿ ನೀವು ಪ್ರಶಸ್ತಿ ಪಡೆದಿರುವವರು ನಿಮ್ಮದೇ ಆದ ಕಷ್ಟ ಪಟ್ಟಿರುತ್ತೀರಿ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಹೇಳಿದರು.

ಇಂದು ನಿಮಗೆ ಸನ್ಮಾನ ಮಾಡಲಾಗಿದೆ. ಈ ಹಾರ ಬಹಳ ಭಾರ. ಈ ಸನ್ಮಾನದಿಂದ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚುತ್ತದೆ. ನನಗೆ ಮಾಧ್ಯಮ ಎಂದರೆ ಸ್ವಲ್ಪ ಅಲರ್ಜಿ. ಆದರೂ ನಾನು ನಿಮ್ಮನ್ನು ಬಿಡುವ ಹಾಗಿಲ್ಲ, ನೀವು ನನ್ನನ್ನು ಬಿಡುವ ಹಾಗಿಲ್ಲ. ದಿನ ಬೆಳಗಾದರೆ ನನ್ನ ಮನೆ ಬಳಿಯೇ ಬಂದು ಮೈಕ್ ಅನ್ನು ನನ್ನ ಮುಖಕ್ಕೆ ತಂದು ಇಡುತ್ತಾರೆ ಎಂದು ಹೇಳಿದರು.

ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ:

ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ. ನನಗೆ ನಿಮ್ಮನ್ನು ಟೀಕೆ ಮಾಡಲು ಇಷ್ಟ. ಇಲ್ಲಿ ಪ್ರಶಸ್ತಿ ಪುರಸ್ಕೃತರಲ್ಲಿ ಮಹಿಳೆಯರು ಇಲ್ಲ. ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಸಮಾಜದಲ್ಲಿ ಸೇವೆ ಮಾಡಿದ ಮಹಿಳೆಯರು ಇದ್ದಾರೆ. ನಾವು ಮಹಿಳಾ ಸಬಲೀಕರಣ ಮಾಡಬೇಕು. ಸದ್ಯದಲ್ಲೇ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಬರಲಿದೆ. ಮಾಧ್ಯಮಗಳು ಬಹಳ ಸವಾಲು ಎದುರಿಸುತ್ತಿವೆ. ಮುಂದೆ ಎಐನಿಂದ ಏನೆಲ್ಲಾ ಸಮಸ್ಯೆ ಬರುತ್ತದೆಯೋ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಮಾಧ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯ:

ವೇದನೆ ಇಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ. ಶ್ರಮ ಇಲ್ಲದೆ ಫಲ ಇರುವುದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಮಾಧ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲಾಗಿದೆ. ನಾನು ಒಮ್ಮೆ ತಮಿಳುನಾಡಿನ ಮಾಜಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೆ, ಆಗ ಅವರು ಜಯಲಲಿತ ಅವರು ಜೈಲಿಗೆ ಹೋಗಿ ಒಂದೂವರೇ ತಿಂಗಳಾದರೂ ಒಬ್ಬರೂ ಅವರ ಬಗ್ಗೆ ಬರೆದಿಲ್ಲ. ಎಲ್ಲರು ಅವರಿಗೆ ಹೆದರುತ್ತಾರೆ ಎಂದು ಹೇಳಿದರು. ಆದರೆ ನೀವು ನಮ್ಮ ಬಗ್ಗೆ ಏನೇ ಬರೆದರೂ ನಮ್ಮನ್ನು ತಿದ್ದಲು ಬರೆಯುತ್ತಿದ್ದೀರಿ ಎಂದು ಭಾವಿಸುತ್ತೇವೆ ಎಂದು ಹೇಳಿದರು.

ಮಾಧ್ಯಮಗಳು ಉದ್ಯಮಿಗಳ ನಿಯಂತ್ರಣಕ್ಕೆ ಸಿಕ್ಕಿವೆ. ಆದರೂ ನೀವು ಸಮಾಜದ ಹಿತಕ್ಕೆ ಕೆಲಸ ಮಾಡಬೇಕು. ನೀವು ಸಂವಿಧಾನದ ನಾಲ್ಕನೇ ಅಂಗ ಎಂದರು.

ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ. ಅಂದರೆ ನದಿ ನೀರು, ಮರದ ಹಣ್ಣು, ಹಸುವಿನ ಹಾಲು ಹೇಗೆ ಬೇರೆಯವರ ಉಪಕಾರಕ್ಕೆ ಇದೆಯೋ ಅದೇ ರೀತಿ ನಮ್ಮ ದೇಹ ಕೂಡ ಪರೋಪಕಾರಕ್ಕೆ ಇರಬೇಕು. ಸಮಾಜಕ್ಕೆ ಉಪಯೋಗವಾಗಬೇಕು. ನೀವುಗಳು ಸಮಾಜಕ್ಕೆ, ಕುಟುಂಬಕ್ಕೆ ದುಡಿಯುತ್ತಿದ್ದೀರಿ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಭಗವಂತ ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಸಾಧನೆ ಅಜರಾಮರವಾಗಲಿ ಎಂದು ಶುಭ ಹಾರೈಸಿದರು.

ರಾಜಕೀಯದಲ್ಲಿ ಯಾವುದೇ ನಾಯಕರು 30-40 ವರ್ಷ ಕಷ್ಟ ಪಟ್ಟು ಬೆಳೆದಿರುತ್ತಾರೆ. ಯಾವುದೋ ಒಂದು ವಿಷಯದಲ್ಲಿ ಅವರನ್ನು ಬಡಿದು ಹಾಕಬೇಡಿ. ಅವರನ್ನು ತಿದ್ದಿ, ಆದರೆ ಅವರ ಭವಿಷ್ಯವನ್ನೇ ಹಾಳು ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.


Share

You cannot copy content of this page