ಸಮಗ್ರ ಸುದ್ದಿ

ಬೆಂಗಳೂರಿನಲ್ಲಿ ಪಾದಚಾರಿ ಸ್ನೇಹಿ ನಗರ ಪರಿಕಲ್ಪನೆಗೆ ಸಾಕ್ಷಿ |ವಿಶ್ವ ದಾಖಲೆ ಮಟ್ಟದ 26 ಕಿ.ಮೀ ಸಮೂಹ ಫುಟ್‌ಪಾತ್ ನಡಿಗೆ

Share

ಬೆಂಗಳೂರು : ಹೊಸ ವರ್ಷದ ದಿನದಂದು ಬೆಂಗಳೂರು ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ನಡೆದು ಹೋಗಬಹುದಾದ ನಗರ ಮೂಲಸೌಕರ್ಯ ಹಾಗೂ ಸುಸ್ಥಿರ ನಗರಾಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳುವ ಉದ್ದೇಶದಿಂದ, ವಿಶ್ವದ ಅತಿ ಉದ್ದದ 26 ಕಿ.ಮೀ ಸಮೂಹ ಪಾದಚಾರಿ ಫುಟ್‌ಪಾತ್ ನಡಿಗೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ನಡಿಗೆ ಕಾರ್ಯಕ್ರಮವು ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದ್ದು, 9 ವರ್ಷದಿಂದ 76 ವರ್ಷ ವಯೋಮಾನದ 300ಕ್ಕೂ ಹೆಚ್ಚು ನಾಗರಿಕರು/ಪಾದಚಾರಿಗಳು ಭಾಗವಹಿಸಿದ್ದರು. ನಿಗದಿತ ಮಾರ್ಗದಲ್ಲಿ ಸಂಪೂರ್ಣವಾಗಿ ಫುಟ್‌ಪಾತ್‌ಗಳಲ್ಲೇ ನಡೆದು, ಸಂಜೆ 6.30 ಗಂಟೆಯವರೆಗೆ 165 ಮಂದಿ 26 ಕಿ.ಮೀ ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ನಡಿಗೆ ಕಾರ್ಯಕ್ರಮದ ಮಾರ್ಗವು ಆರ್.ವಿ. ರಸ್ತೆ, ಜಯನಗರ, ಸಿದ್ದಾಪುರ, ಲಾಲ್‌ಬಾಗ್, ಕೆ.ಎಚ್. ರಸ್ತೆ, ಕೆ-100 ಮಾರ್ಗ, ಹೊಸೂರು ರಸ್ತೆ, ರಿಚ್ಮಂಡ್ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ಕಬ್ಬನ್ ರಸ್ತೆ, ಹಲಸೂರು ಕೆರೆ, ಕಂಟೋನ್ಮೆಂಟ್ ರೈಲು ನಿಲ್ದಾಣ, ಜಯಮಹಲ್, ಮೇಖ್ರಿ ವೃತ್ತ ಹಾಗೂ ಯಶವಂತಪುರ ಪ್ರದೇಶಗಳನ್ನು ಒಳಗೊಂಡಿತ್ತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೆ-100 ನಾಗರಿಕ ಜಲಮಾರ್ಗ 2 ಕಿಲೋಮೀಟರ್ ನಡಿಗೆಯನ್ನು ಒಳಗೊಂಡಿತ್ತು. ಈ ವೇಳೆ ಮೂರು ಕೆಂಪೇಗೌಡ ಗೋಪುರಗಳು, ಒಂದು ಕೆರೆ, ಎರಡು ಉದ್ಯಾನವನಗಳು ಹಾಗೂ ನಿರಂತರವಾಗಿ ಅಭಿವೃದ್ಧಿಗೊಂಡ ಪಾದಚಾರಿ ಮಾರ್ಗಗಳನ್ನು ವೀಕ್ಷಿಸಿದರು.

ನಡಿಗೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಹಿರಿಯ ಅಧಿಕಾರಿಗಳು:

ನಡಿಗೆ ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ದಕ್ಷಿಣ, ಪಶ್ಚಿಮ ಮತ್ತು ಉತ್ತರ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡು ನಡಿಗೆಗೆ ಪ್ರೋತ್ಸಹ ನೀಡಿದರು. ಪಾದಚಾರಿ ಸ್ನೇಹಿ ನಗರ ನಿರ್ಮಾಣದತ್ತ ಆಡಳಿತದ ಉನ್ನತ ಮಟ್ಟದ ಬದ್ಧತೆಯನ್ನು ಸ್ಪಷ್ಟಪಡಿಸಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಾದಚಾರಿಗಳು 26 ಕಿಲೋಮೀಟರ್ ವಿಸ್ತೀರ್ಣದ ಫುಟ್‌ಪಾತ್‌ಗಳ ಲಭ್ಯತೆಯನ್ನು ಪ್ರಶಂಸಿಸಿದ್ದು, ಹಿರಿಯ ಅಧಿಕಾರಿಗಳ ವೈಯಕ್ತಿಕ ತೊಡಗಿಸಿಕೊಳ್ಳುವಿಕೆ ಮತ್ತು ಮಾರ್ಗದರ್ಶನವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ವರ್ಷದ ದಿನದಂದು ಆಯೋಜಿಸಲಾದ ಈ ಐತಿಹಾಸಿಕ ಕಾರ್ಯಕ್ರಮವು ಜನಕೇಂದ್ರಿತ, ಸುರಕ್ಷಿತ ಹಾಗೂ ಸುಸ್ಥಿರ ನಗರಾಭಿವೃದ್ಧಿಯತ್ತ ಬೆಂಗಳೂರು ನಗರವು ಕೈಗೊಂಡಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದ್ದು, ದೇಶದ ಇತರ ನಗರಗಳಿಗೆ ಮಾದರಿಯಾಗುವಂತಹ ಮಹತ್ವದ ಹೆಜ್ಜೆಯಾಗಿದೆ.

ಮಕ್ಕಳನ್ನು ಕರೆದೊಯ್ಯುವ ಸ್ಟ್ರೋಲೆರ್ (Stroller) 26 ಕಿ.ಮೀ ನಡಿಗೆಯುದ್ದಕ್ಕೂ ಪಾದಚಾರಿ ಮಾರ್ಗದಲ್ಲಿ ತಳ್ಳುವ ಮೂಲಕ, ಪಾದಚಾರಿ ಮಾರ್ಗದಲ್ಲಿ ತಳ್ಳಿಕೊಂಡು ಹೋಗಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಯಿತು. ಆದರೆ, ಅಲ್ಲಲ್ಲಿ ರ್ಯಾಂಪ್ ಗಳ ಅವಶ್ಯಕತೆಯಿದ್ದು, ಅದನ್ನು ಮಾಡಿದರೆ ಸರಾಗವಾಗಿ ಹೋಗಬಹುದಾಗಿದೆ.

ವಾಕಲೂರು ಯೋಜನೆಯ ಸಮನ್ವಯಕರಾದ ಅರುಣ್ ಪೈ ರವರ ನೇತೃತ್ವದಲ್ಲಿ ನಡೆದ ಇಂದಿನ ನಡಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸುಗಮ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ.


Share

You cannot copy content of this page