ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ 3.00 ಗಂಟೆಯಿಂದ 8.00 ಗಂಟೆಯವರೆಗೆ ಕೇವಲ 5 ಗಂಟೆಗಳ ಕಡಿಮೆ ಅವಧಿಯಲ್ಲಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೆಂಟ್‌ಮಾರ್ಕ್ ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ್ದು, 9 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.
ಮದ್ಯದ ಬಾಟಲ್ ಗಳು, ಚಪ್ಪಲ್ ಗಳು, ಶೂಗಳು, ಬಟ್ಟೆಗಳು, ಊಟ, ತಿಂಡಿ ತಿನಿಸು ಗಳ ಪ್ಲೇಟ್, ಪ್ಲಾಸ್ಟಿಕ್ ತ್ಯಾಜ್ಯ, ಸಿಗರೇಟ್ ಇನ್ನಿತರೆ ತ್ಯಾಜ್ಯ ಸೇರಿ ಸುಮಾರು 9 ಟನ್ ತ್ಯಾಜ್ಯವನ್ನು ಅತ್ಯಂತ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.
ರಾತ್ರಿ ಸಮಯದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿಗಳು, ಆಟೋ ಟಿಪ್ಪರ್ ಚಾಲಕ ಸಿಬ್ಬಂದಿಗಳು, ಅಧಿಕಾರಿಗಳ ಕಾರ್ಯವನ್ನು ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಶ್ಲಾಘಿಸಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ110 ಪೌರ ಕಾರ್ಮಿಕರು, ಮೂವರು ಕಿರಿಯ ಆರೋಗ್ಯ ಪರಿವೀಕ್ಷಕರು ಭಾಗಿಯಾಗಿದ್ದರು. 10 ಆಟೋ ಟಿಪ್ಪರ್ ಗಳ ಬಳಕೆ, 3 ಪ್ರೆಸರ್ ಜೆಟ್ ವಾಟರ್ ಕ್ಲೀನಿಂಗ್ ಯಂತ್ರಗಳು ಬಳಕೆ ಮಾಡಲಾಗಿದೆ.
ಸ್ವಚ್ಛತಾ ಕಾರ್ಯದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಭೀಮೇಶ್ ನಾಯಕ್, ಎಜಿಎಂ ಗಳಾದ ಅಪ್ಪುರಾಜ್, ರವಿಕುಮಾರ್ ಭಾಗಿಯಾಗಿದ್ದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2026 ರ ವರ್ಷಾಚರಣೆಯ ಸಲುವಾಗಿ ಸಾರ್ವಜನಿಕರ ಸುರಕ್ಷತೆಗಾಗಿ ಪೂರ್ವಭಾವಿಯಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬ್ಯಾರಿಕೇಡ್ ಗಳ ಅಳವಡಿಕೆ, ತ್ಯಾಜ್ಯ ತೆರವುಗೊಳಿಸಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ವೈದ್ಯಕೀಯ ನೆರವಿಗಾಗಿ ವೈದ್ಯರ ತಂಡದೊಂದಿಗೆ ಆಂಬುಲೆನ್ಸ್ ಗಳ ವ್ಯವಸ್ಥೆಯೊಂದಿಗೆ, ಸಾಕಷ್ಟು ಬೆಳಕಿನ ವ್ಯವಸ್ಥೆಗಾಗಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿತ್ತು. ಇಂಜಿನೀಯರ್ ಗಳನ್ನು ಸಹ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು.
