ಬೆಂಗಳೂರು : ಲಿಂಗರಾಜಪುರಂ ಪ್ರದೇಶದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಬಂದ ವರದಿಗಳನ್ನು ಬೆಂಗಳೂರು ಜಲಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ ತ್ವರಿತವಾಗಿ ಸ್ಪಂದಿಸಿರುವ ಮಂಡಳಿಯು, ಪೀಡಿತ ಪ್ರದೇಶಗಳಿಗೆ ನೀರು ಸರಬರಾಜನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ.
ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಮೂಲವನ್ನು ನಿಖರವಾಗಿ ಮತ್ತು ತ್ವರಿತವಾಗಿ ಪತ್ತೆಹಚ್ಚಲು, ಜಲಮಂಡಳಿಯು ತನ್ನ ಸಿಬ್ಬಂದಿಯೊಂದಿಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ತಪಾಸಣೆ ಆರಂಭಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, ಇಡೀ ಪ್ರದೇಶವನ್ನು ಅಗೆಯುವ ಬದಲು, ದೋಷವಿರುವ ಜಾಗವನ್ನು ನಿಖರವಾಗಿ ಪತ್ತೆಹಚ್ಚಲು ಲಭ್ಯವಿರುವ ಎಲ್ಲ ತಾಂತ್ರಿಕ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ ಎಂದು ತಿಳಿಸಿದರು.
ದುರಸ್ತಿ ಕಾರ್ಯದ ಸಮಯದಲ್ಲಿ ನಿವಾಸಿಗಳಿಗೆ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು, ಜಲಮಂಡಳಿ ಈಗಾಗಲೇ ‘ಸಂಚಾರಿ ಕಾವೇರಿ’ ಮೊಬೈಲ್ ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ನಿನ್ನೆಯಿಂದಲೇ ಎಲ್ಲಾ ಪೀಡಿತ ಮನೆಗಳಿಗೆ ಉಚಿತ ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಆದ್ಯತೆಯ ವಿಷಯವಾಗಿ ಪರಿಗಣಿಸಿರುವ ಮಂಡಳಿಯು, ಇಂಜಿನಿಯರಿಂಗ್ ತಂಡಕ್ಕೆ ಕಟ್ಟುನಿಟ್ಟಿನ ಗಡುವು ನೀಡಿದೆ. ನಾಳೆ ಸಂಜೆಯೊಳಗೆ ಮೂಲವನ್ನು ಪತ್ತೆಹಚ್ಚಿ, ಪೈಪ್‌ಲೈನ್ ಸರಿಪಡಿಸಿ, ಶುದ್ಧ ನೀರು ಸರಬರಾಜನ್ನು ಪುನರಾರಂಭಿಸಲು ನಿರ್ದೇಶನ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಪೈಪ್‌ಲೈನ್ ಮೂಲಕ ನೀರು ಪೂರೈಕೆ ಪುನರಾರಂಭವಾಗುವವರೆಗೆ ನಿವಾಸಿಗಳು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಮತ್ತು ಒದಗಿಸಲಾಗುತ್ತಿರುವ ಉಚಿತ ವಾಟರ್ ಟ್ಯಾಂಕರ್ ಸೇವೆಯನ್ನು ಬಳಸಿಕೊಳ್ಳಬೇಕೆಂದು ಕೋರಲಾಗಿದೆ.
