ಸಮಗ್ರ ಸುದ್ದಿ

ಅಂಬೇಡ್ಕರ್ ಕೊಟ್ಟ‌ ಸಂವಿಧಾನದಿಂದ ದೇಶ ಸದೃಢ: ಸಚಿವ ಶಿವರಾಜ್ ತಂಗಡಗಿ

Share

ಮೈಸೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ನಮ್ಮ ದೇಶ ಸದೃಢವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಹೇಳಿದರು.

ಮೈಸೂರಿನ ರಂಗಾಯಣದ ವನರಂಗದಲ್ಲಿಂದು ಆಯೋಜಿಸಿದ್ದ ಬಹುರೂಪಿ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರ ಕೊಡುಗೆಯಿಂದ ಸಾಮಾನ್ಯರಿಂದಲೂ ಆಳ್ವಿಕೆ:

ಪ್ರಪಂಚದ ಇತರೆ ದೇಶಗಳಿಗಿಂತ ನಮ್ಮ ದೇಶದ ಸಂವಿಧಾನ ಭಿನ್ನವಾಗಿದೆ. ಅಂಬೇಡ್ಕರ್ ಅವರು ಕೊಟ್ಟ ಫಲದಿಂದಾಗಿ‌ ಇಂದು ನನ್ನೊಳಗೊಂಡಂತೆ ಸಾಮಾನ್ಯರು ಆಡಳಿತ ನಡೆಸಲು ಸಾಧ್ಯವಾಗಿದೆ. ಇಂತಹ ಸಂವಿಧಾನದ ಬಗ್ಗೆ ಕೆಲವರು ಬದಲಾವಣೆ ಮಾಡಬೇಕೆಂದು ಮಾತನಾಡುತ್ತಾರೆ. ಆದರೆ ಸಂವಿಧಾನ ಮುಟ್ಟಿದರೆ ಅಂತಹವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಬೆಳ್ಳಿ ಸಂಭ್ರಮ. ಅದರಲ್ಲಿಯೂ ಬೆಳ್ಳಿ ಬಹುರೂಪಿಯು ಭಾರತದ ಭಾಗ್ಯ ವಿದಾತ ಅಂಬೇಡ್ಕರ್ ಚಿಂತನೆಗಳನ್ನು ಆಶಯವಾಗಿಟ್ಟುಕೊಂಡು ನಡೆಯುತ್ತಿರುವುದು‌ ಬಹುರೂಪಿಗೆ ವಿಶೇಷ ಮೆರಗು ತಂದಿದೆ ಎಂದರು.

ಮೈಸೂರು ರಂಗಾಯಣದಿಂದ ರಾಷ್ಟ್ರ ಕವಿ ಕುವೆಂಪು ಅವರ ಕಿಂದರಜೋಗಿ ಕವಿತೆ, ಗೋವಿನ ಹಾಡು ಕವಿತೆಯನ್ನು ನಾಟಕವಾಗಿಸಿದ ಬಿ.ವಿ.ಕಾರಂತರಿಂದ ಹಿಡಿದು ದೇವನೂರು ಮಹಾದೇವರ ಕುಸುಮ‌ಬಾಲೆ ಕಾದಂಬರಿಯನ್ನು ಸಮರ್ಥವಾಗಿ ನಾಟಕವಾಗಿಸಿದ್ದು, ಮುಂದೆ ಮಲೆಗಳಲ್ಲಿ ಮದುಮಗಳು ಮಹಾ ಕಾದಂಬರಿಯನ್ನು ಅಹೋ ರಾತ್ರಿ ರಂಗರೂಪವಾಗಿ ಪ್ರದರ್ಶಿಸಿದ್ದು, ಭಾರತದ ರಂಗಭೂಮಿ ಇತಿಹಾಸದಲ್ಲೇ ದಾಖಲೆ ಎನಿಸಿದೆ ಎಂದು ಶ್ಲಾಘಿಸಿದರು.

ರಂಗಾಯಣದ ರಂಗ ಚಟುವಟಿಕೆ ವಿಸ್ತರಣೆ:

ಮೈಸೂರು ರಂಗಾಯಣದ ತನ್ನ ರಂಗ ಚಟುವಟಿಕೆಗಳ ಮೂಲಕ ನಾಡಿನ ತುಂಬಾ ಉಂಟು ಮಾಡಿದ ಸಂಚಲನವನ್ನು ಕಂಡು ನಮ್ಮ ಸರ್ಕಾರ, ಈ ಅವಕಾಶ ನಾಡಿನ ಬೇರೆ ಬೇರೆ ಭಾಗಕ್ಕೂ ದೊರೆಯಲೆಂದು ಉಡುಪಿ ಜಿಲ್ಲೆಯ ಕಾರ್ಕಳ,‌ ದಾವಣಗೆರೆ, ಶಿವಮೊಗ್ಗ,‌ ಧಾರವಾಡ ಹಾಗೂ ಕಲ್ಬುರ್ಗಿ ಜಿಲ್ಲೆಗಳಲ್ಲೂ ರಂಗಾಯಣಗಳನ್ನು ಸ್ಥಾಪಿಸಿ ಪ್ರತಿಯೊಂದು ರಂಗಾಯಣವೂ ತಮ್ಮ ಪ್ರಾದೇಶಿಕ ಹಿನ್ನೆಲೆಯಲ್ಲಿ ರಂಗಭೂಮಿ ಚಟುವಟಿಕೆಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಹೈಸ್ನಾಂ‌ ಸಾವಿತ್ರಿ ಅವರಿಗೆ ರಂಗಗೌರವ:

ಇನ್ನು ಬಹುರೂಪಿ‌ ನಾಟಕೋತ್ಸವಕ್ಕೆ ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿ ವಿಶೇಷ ಅನುದಾನ ನೀಡಲಾಗಿದೆ.‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಭಾಷೆ, ಸಂಸ್ಕೃತಿ ವಿಚಾರದಲ್ಲಿ ವಿಶೇಷ ಕಾಳಜಿ‌ ಹೊಂದಿದ್ದಾರೆ. ಹಿಂದಿನ ಸರ್ಕಾರ ನೇಮಕ‌ ಮಾಡದೇ ಹಾಗೇ ಬಿಟ್ಟಿದ್ದ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಒಮ್ಮೆಲೆಗೆ ನೇಮಕ ಮಾಡಿದರು. ಇಂತಹ ಕೆಲಸಗಳು ನಮ್ಮ ಸರ್ಕಾರದಲ್ಲಿ‌ ಮಾತ್ರ ಸಾಧ್ಯ ಎಂದರು.
ಇದೇ ವೇಳೆ ರಂಗಭೂಮಿ‌ಯ ಖ್ಯಾತ ಹಿರಿಯ ಕಲಾವಿದರಾದ ಪದ್ಮಶ್ರೀ ಪುರಸ್ಕೃತೆ ಹೈಸ್ನಾಂ ಸಾವಿತ್ರಿ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ರಂಗ ಸಮಾಜದ ಸದಸ್ಯರಾದ ಸುರೇಶ್ ಬಾಬು, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇನ್ನಿತರ ಅಧಿಕಾರಿಗಳ ಉಪಸ್ಥಿತರಿದ್ದರು.


Share

You cannot copy content of this page